ರಿಪ್ಪನ್ಪೇಟೆ : ಸಾರ್ವಜನಿಕ ಸಮಸ್ಯೆ ಪರಿಹರಿಸಲು ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ’ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಸಾರ್ವಜನಿಕರು ತಮ್ಮ ಸಮಸ್ಯೆಗಳ ವಿವರವನ್ನು ಸಲ್ಲಿಸಿ ಪರಿಹಾರ ಪಡೆದುಕೊಳ್ಳಬೇಕು ಎಂದು ಹೊಸನಗರ ಗ್ರೇಡ್ 2 ತಹಶೀಲ್ದಾರ್ ರಾಕೇಶ್ ಫ್ರಾನ್ಸಿಸ್ ಬ್ರಿಟ್ಟೋ ತಿಳಿಸಿದರು.
ಕೋಡೂರು ಗ್ರಾಪಂ ವ್ಯಾಪ್ತಿಯ ಹೆಚ್ ಕುನ್ನೂರು ಗ್ರಾಮದಲ್ಲಿಂದು ಆಯೋಜಿಸಲಾಗಿದ್ದ ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ’ ಕಾರ್ಯಕ್ರಮವನ್ನು ಉದ್ಘಾಟಿಸಿ ಪ್ರಾಸ್ತಾವಿಕವಾಗಿ ಅವರು ಮಾತನಾಡಿದರು.
ಹಳ್ಳಿ ಜನರ ಕಷ್ಟ ಸುಖ ಮೇಲ್ಮಟ್ಟದ ಅಧಿಕಾರಿಗಳಿಗೆ ಗೊತ್ತಾಗೋದು ಇಲ್ಲಿ ಬಂದಾಗ ಮಾತ್ರ. ಹೀಗಾಗಿ ರಾಜ್ಯ ಸರ್ಕಾರ ಈ ಒಂದು ಕಾರ್ಯಕ್ರಮ ಹಮ್ಮಿಕೊಂಡಿದೆ. ಇದರ ಸದುಪಯೋಗ ಪ್ರತಿಯೊಬ್ಬರು ಪಡೆದುಕೊಳ್ಳಬೇಕು. ಪೌತಿ ಖಾತೆ ಬದಲಾವಣೆ, ವಿಧವಾ ವೇತನ, ಸಂಧ್ಯಾ ಸುರಕ್ಷಾ, ಪಹಣಿಯಲ್ಲಿ ಹೆಸರು ತಿದ್ದುಪಡಿ, ಅಂಗವಿಕಲ ವೇತನ, ವೃದ್ದಾಪ್ಯ ವೇತನ, ಆಹಾರ ಇಲಾಖೆ ಹಾಗೂ ಮತದಾರರ ಪಟ್ಟಿಗೆ ಸಂಬಂಧಿಸಿದ ಸಮಸ್ಯೆಗಳಿದ್ದರೆ ಸ್ಥಳದಲ್ಲೇ ಬಗೆಹರಿಸಿಕೊಳ್ಳುವಂತೆ ಈ ಸಂದರ್ಭದಲ್ಲಿ ಅವರು ಮನವಿ ಮಾಡಿಕೊಂಡರು.
ಮನೆ ಬಾಗಿಲಿಗೆ ಪಿಂಚಣಿ ಸೌಲಭ್ಯ :
ಆರ್ಥಿಕ ಸಂಕಷ್ಟದಲ್ಲಿರುವ ಬಡವರಿಗೆ ಪಿಂಚಣಿ ಒದಗಿಸಲು ಕರ್ನಾಟಕ ಸರ್ಕಾರ ಹೊಸ ಯೋಜನೆಯೊಂದನ್ನು ರೂಪಿಸಿದೆ. ದೂರವಾಣಿ ಕರೆ ಮೂಲಕ (Toll Free Number) ಪಿಂಚಣಿ ಪಡೆದುಕೊಳ್ಳಲು ಅವಕಾಶ ನೀಡಲಾಗಿದೆ. ಕುಟುಂಬದ ವಾರ್ಷಿಕ ಆದಾಯವು 32,000 ರೂ.ಗಿಂತ ಕಡಿಮೆ ಇರುವ ವೃದ್ಧರು, ವಿಶೇಷ ಚೇತನರು, ವಿಧವೆಯರು, ಅವಿವಾಹಿತ ಹಾಗೂ ವಿಚ್ಛೇದಿತ ಮಹಿಳೆಯರು 155245 ಸಂಖ್ಯೆಗೆ ಕರೆ ಮಾಡಿ ಆಧಾರ್ ಸಂಖ್ಯೆ ನೀಡುವ ಮೂಲಕ ಪಿಂಚಣಿ ಸೌಲಭ್ಯಕ್ಕೆ ಪಡೆಯಬಹುದು ಎಂದು ತಿಳಿಸಿದರು.
ಕೋರಿಕೆ ಸಲ್ಲಿಕೆಯಾದ ನಂತರ ಆಯಾ ವ್ಯಾಪ್ತಿಯ ಗ್ರಾಮ ಲೆಕ್ಕಾಧಿಕಾರಿಗಳು ಅರ್ಜಿದಾರರ ಮನೆಬಾಗಿಲಿಗೆ ಭೇಟಿ ನೀಡಿ ‘ನವೋದಯ’ ಮೊಬೈಲ್ ಆ್ಯಪ್ ಮೂಲಕ ಅರ್ಜಿದಾರರಿಂದ ಮಾಹಿತಿ ಹಾಗೂ ದಾಖಲಾತಿಗಳನ್ನು ಸಂಗ್ರಹಿಸುತ್ತಾರೆ. ಗ್ರಾಮ ಲೆಕ್ಕಾಧಿಕಾರಿಗಳು ಮನೆಗೆ ಭೇಟಿ ನೀಡಿದಾಗ ಆಧಾರ್ ಕಾರ್ಡ್, ಬ್ಯಾಂಕ್ ಅಥವಾ ಅಂಚೆ ಕಚೇರಿಯಲ್ಲಿ ತೆರೆದಿರುವ ಉಳಿತಾಯ ಖಾತೆಯ ವಿವರ, ವಿಳಾಸ ಮತ್ತು ವಯೋಮಾನದ ಪುರಾವೆ ನೀಡಬೇಕು. ಈ ಮಾಹಿತಿಗಳನ್ನು ದೃಢೀಕರಿಸಲು ಪಡಿತರ ಚೀಟಿ, ಚುನಾವಣಾ ಗುರುತಿನ ಚೀಟಿ ಅಥವಾ ಸರ್ಕಾರ ನೀಡಿರುವ ಯಾವುದೇ ಗುರುತಿನ ಚೀಟಿ ಬಳಸಬಹುದಾಗಿದೆ. ಈ ವೇಳೆ ಮೊಬೈಲ್ ಆ್ಯಪ್ ಮೂಲಕ ಅರ್ಜಿದಾರರ ಭಾವಚಿತ್ರವನ್ನು ಗ್ರಾಮ ಲೆಕ್ಕಾಧಿಕಾರಿಗಳು ಸೆರೆಹಿಡಿಯುತ್ತಾರೆ. ಅರ್ಹರಿಗೆ ಅರ್ಜಿ ಸಲ್ಲಿಕೆಯಾದ 72 ಗಂಟೆಗಳ ಒಳಗೆ ನಾಡ ಕಚೇರಿಯಿಂದ ಪಿಂಚಣಿ ಮಂಜೂರಾತಿ ಆದೇಶ ವಿತರಿಸಲಾಗುವುದು ಎಂದು ತಿಳಿಸಿದರು.
ಗ್ರಾಮಸ್ಥರ ಕುಂದು ಕೊರತೆಗಳನ್ನು ಆಲಿಸಿ, ಗ್ರಾಮಸ್ಥರಿಂದ ಬಂದ ಅರ್ಜಿಗಳನ್ನು ಸ್ವೀಕರಿಸಲಾಯಿತು.
ಗ್ರಾಪಂ ಖಾತೆ ಪಟ್ಟ ಪುಸ್ತಕ ವಿತರಣೆ :
ಕೋಡೂರು ಗ್ರಾಪಂ ವತಿಯಿಂದ ಖಾತೆ ಪಟ್ಟ ಪುಸ್ತಕ ಇದೇ ಸಂದರ್ಭದಲ್ಲಿ ವಿತರಿಸಲಾಯಿತು. ಪಾರದರ್ಶಕತೆ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಗ್ರಾಪಂ ವ್ಯಾಪ್ತಿಯ ಪ್ರತಿ ಮನೆಗೂ ಖಾತೆ ಪಟ್ಟ ಪುಸ್ತಕ ವಿತರಿಸುವ ಕಾರ್ಯಕ್ರಮಕ್ಕೆ ಸಾಂಕೇತಿಕವಾಗಿ ಚಾಲನೆ ನೀಡಲಾಯಿತು. ಕಂದಾಯ ಸಂಗ್ರಹಣೆಗೆ ಸಂಬಂಧಿಸಿದಂತೆ ಮುಂದಿನ ದಿನಗಳಲ್ಲಿ ನಿಮ್ಮ ನೋಂದಾಯಿತ ಮೊಬೈಲ್ ನಂಬರಿಗೆ ಕಂದಾಯ ಪಾವತಿ ಮಾಡಿದ ಕೂಡಲೆ ಮೆಸೇಜ್ ಸಹ ಪಡೆಯುವ ಸೌಲಭ್ಯ ನೀಡಲಾಗುವುದು ಎಂದು ಗ್ರಾಪಂ ಪಿಡಿಒ ನಾಗರಾಜ್ ತಿಳಿಸಿದರು.
ಗ್ರಾಪಂ ಅಧ್ಯಕ್ಷೆ ಸುನಂದ ಅಧ್ಯಕ್ಷತೆ ವಹಿಸಿದ ಕಾರ್ಯಕ್ರಮದಲ್ಲಿ ಶಿರಸ್ಥೇದಾರ್ ಸುಧೀಂದ್ರ ಕುಮರ್, ಉಪ ತಹಶಿಲ್ದಾರ್ ಮೋಹನ್, ಆಹಾರ ಇಲಾಖೆಯ ಬಾಲರಾಜ್, ಎಡಿಎಲ್ ಆಫಿಸರ್ ಅನಿಲ್, ಗ್ರಾಪಂ ಉಪಾಧ್ಯಕ್ಷ ಜಯಪ್ರಕಾಶ್ ಶೆಟ್ಟಿ, ಸದಸ್ಯರಾದ ಅನ್ನಪೂರ್ಣ ಮಹೇಶ, ಯೋಗೇಂದ್ರಪ್ಪ, ಶೇಖರಪ್ಪ, ಉಮೇಶ್, ಮಂಜಪ್ಪ, ಪ್ರೀತಿ, ಸವಿತಾ, ಕೋಡೂರು ಗ್ರಾಮ ಲೆಕ್ಕಾಧಿಕಾರಿ ಇಂದ್ರಮ್ಮ, ಗ್ರಾಮ ಸಹಾಯಕರಾದ ಚಂದ್ರು ಕೊಳವಳ್ಳಿ, ಚಂದ್ರು ಕೋಡೂರು ಸೇರಿದಂತೆ ಹುಂಚ ಹೋಬಳಿ ವ್ಯಾಪ್ತಿಯ ಕಂದಾಯ ಇಲಾಖೆಯ ಇನ್ನಿತರರು, ಗ್ರಾಮಸ್ಥರು ಇದ್ದರು.
ಗ್ರಾಪಂ ಮಾಜಿ ಸದಸ್ಯೆ ರತ್ನಮ್ಮ ಪ್ರಾರ್ಥಿಸಿದರು. ಗ್ರಾಮ ಲೆಕ್ಕಾಧಿಕಾರಿ ಮಂಜುನಾಥ್ ನಿರೂಪಿಸಿದರು. ಪಿಡಿಒ ನಾಗರಾಜ್ ಸ್ವಾಗತಿಸಿ, ವಂದಿಸಿದರು.