ಶಾರ್ಟ್ ಸರ್ಕಿಟ್ ನಿಂದಾಗಿ ಮನೆಯೊಂದರಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಒಳಗೆ ಸಿಲುಕಿಕೊಂಡಿದ್ದ ಯುವ ಉದ್ಯಮಿ ದಟ್ಟ ಹೊಗೆಯಿಂದಾಗಿ ಅಸ್ವಸ್ಥಗೊಂಡಿದ್ದು, ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಶಿವಮೊಗ್ಗ ಜಿಲ್ಲಾ ಪಂಚಾಯಿತಿ ಕಛೇರಿ ಮುಂಭಾಗ ಇರುವ ಭೂಪಾಳಂ ನಿವಾಸದಲ್ಲಿ ಘಟನೆ ಸಂಭವಿಸಿದೆ. ಯುವ ಉದ್ಯಮಿ ಭೂಪಾಳಂ ಶರತ್ ಅವರು ಅಸ್ವಸ್ಥಗೊಂಡಿದ್ದು, ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ರಾತ್ರಿ ಭೂಪಾಳಂ ನಿವಾಸದಲ್ಲಿ ಶಾರ್ಟ್ ಸರ್ಕಿಟ್ ನಿಂದಾಗಿ ಬೆಂಕಿ ಕಾಣಿಸಿಕೊಂಡಿತ್ತು. ಬೆಂಕಿಯ ಜೊತೆಗೆ ಮನೆಯಲ್ಲಿ ದಟ್ಟ ಹೊಗೆಯುವ ಆವರಿಸಿಕೊಂಡಿತ್ತು. ಮನೆ ಒಳಗಿದ್ದ ಭೂಪಾಳಂ ಶಶಿಧರ್ ಸೇರಿದಂತೆ ನಾಲ್ವರು ಹೊರಗೆ ಬಂದಿದ್ದರು. ಆದರೆ ಉದ್ಯಮಿ ಶರತ್ ಅವರು ಒಳಗೆ ಸಿಲುಕಿ ಅಸ್ವಸ್ಥರಾಗಿದ್ದರು ಎಂದು ತಿಳಿದು ಬಂದಿದೆ.
ವಿಚಾರ ತಿಳಿದು ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದು, ಬೆಂಕಿ ನಂದಿಸಿದ್ದಾರೆ. ಉದ್ಯಮಿ ಶರತ್ ಭೂಪಾಳಂ ಮತ್ತು ಅವರ ಮಗನ ರಕ್ಷಣೆ ಮಾಡಲಾಗಿದೆ. ತೀವ್ರ ಅಸ್ವಸ್ಥಗೊಂಡಿದ್ದ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಂದು ಬೆಳಗ್ಗೆ ಶರತ್ ಅವರು ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದು ಬಂದಿದೆ.