ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಚುನಾವಣಾ ಕಣಕ್ಕೆ ಇಳಿಯಬೇಕು ಎಂದು ನಿರ್ಧಾರ ಮಾಡಿದ್ದೇನೆ. ಶೀಘ್ರದಲ್ಲೇ ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ. ಚುನಾವಣಾ ಆಖಾಡಕ್ಕೆ ಇಳಿಯುತ್ತೇನೆ ಎಂದು ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಘೋಷಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ಸಾರ್ವಜನಿಕ ವೇದಿಕೆಯಲ್ಲಿ ಕೂಡ ನಿಲುವು ಪ್ರಕಟಿಸಿದ್ದೇನೆ. ಪಕ್ಷದ ವೇದಿಕೆಯಲ್ಲಿ ಕೂಡ ನನ್ನ ವಿನಂತಿಯನ್ನು ಸಲ್ಲಿಸಿದ್ದೇನೆ. ಆದರೆ, ವಿನಂತಿಗೆ ಪೂರಕವಾಗಿ ನನಗೆ ಪಕ್ಷದಿಂದ ಟಿಕೆಟ್ ಸಿಗುವ ಲಕ್ಷಣ ಕಾಣಿಸುತ್ತಿಲ್ಲ. ಆದರೆ ಕೆಲವರ ಮಕ್ಕಳ ಹೆಸರುಗಳು ಓಡಾಡುತ್ತಿವೆ. ಮೊನ್ನೆ ಈಶ್ವರಪ್ಪ ಹೇಳಿದ ಮಾತನ್ನು ಗಂಭೀರವಾಗಿ ಪರಿಗಣಿಸಿ ಒಂದು ನಿರ್ಧಾರಕ್ಕೆ ಬಂದಿದ್ದೇನೆ. ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಬೇಕು ಎಂದು ತೀರ್ಮಾನಿಸಿದ್ದೇನೆ ಎಂದರು.
ಈಶ್ವರಪ್ಪ ಪತ್ರಿಕಾಗೋಷ್ಠಿಯಲ್ಲಿ ನನ್ನ ಕೇರ್ ಮಾಡಿಲ್ಲ ಎಂದು ಹೇಳಿದ್ದಾರೆ. ಅವರ ಏಕವಚನ ಅವರ ಶಿಕ್ಷಣದ ಮಟ್ಟ ಅದು. ಅವರು ಬಹುವಚನ ಮಾತನಾಡಿದರೆ ರಾಜ್ಯದ ಜನರಿಗೆ ಆಶ್ಚರ್ಯವಾಗುತ್ತದೆ. ಈಶ್ವರಪ್ಪ ಹೇಳಿದ್ದನ್ನು ಸವಾಲಾಗಿ ಸ್ವೀಕರಿಸಿದ್ದೇನೆ. ಈ ಬಾರಿ ನಾನು ಸ್ಫರ್ಧೆ ಮಾಡುತ್ತೇನೆ ಎಂದು ಸ್ಪಷ್ಟಪಡಿಸಿದರು.
ಅವರು ರಾಜ್ಯದ ಪ್ರಭಾವಿ ನಾಯಕರು. ಎಷ್ಟು ಪ್ರಭಾವಿಯೆಂದರೇ ಶಿವಮೊಗ್ಗ ಬಿಟ್ಟು ಬೇರೆ ಎಲ್ಲೂ ಗೆಲ್ಲಲು ಸಾಧ್ಯವಿಲ್ಲದ ನಾಯಕ. ನೀವಾಗಲಿ ಅಥವಾ ನಿಮ್ಮ ಮಗನಾಗಲಿ ಕಣಕ್ಕೇ ಇಳಿಯಲೇ ಬೇಕು. ನಿಮ್ಮ ಪ್ರಭಾವ ಬಳಸಿ, ನೀವು ಟಿಕೆಟ್ ತರಲೇಬೇಕು. ಲಜ್ಜೆ ಬಿಟ್ಟು, ನಿಮ್ಮ ಬದಲಾಗಿ ನಿಮ್ಮ ಮಗನಿಗೆ ಕೇಳಿದ್ದೀರಿ. ಅದರ ಬದಲು ಈ ಹಿಂದೆ ಕಡಿಮೆ ಅಂತರದಲ್ಲಿ ಸೋತ ರುದ್ರೇಗೌಡರ ಪರವಾಗಿ ಕೇಳಲ್ಲ. ಪಕ್ಷಕ್ಕಾಗಿ ದುಡಿದ ಸಿದ್ದರಾಮಣ್ಣ, ಭಾನುಪ್ರಸಾದ್ ಗೂ ಟಿಕೆಟ್ ಕೇಳಲಿಲ್ಲ. ಈಶ್ವರಪ್ಪರನ್ನೇ ಹೊತ್ತು ಮೆರೆಸಿದ ಚೆನ್ನಬಸಪ್ಪ, ದತ್ತಾತ್ರೀ ಪರವಾಗಿಯೂ ಕೇಳಲಿಲ್ಲ. ಇವರು ಶಾಸಕ ಸ್ಥಾನಕ್ಕೆ ಸ್ಫರ್ಧೆ ಮಾಡಲ್ಲ, ಆದರೆ ಮಂತ್ರಿ ಸ್ಥಾನಕ್ಕೆ ಸ್ಥರ್ಧೆ ಮಾಡುತ್ತಾರೆ. ಅದು ಸಿಗದ ಕಾರಣಕ್ಕಾಗಿಯೇ ಅವರು ಬೆಳಗಾವಿಯ ಅಧಿವೇಶನಕ್ಕೆ ಹೋಗಿಲ್ಲ ಎಂದು ಗುಡುಗಿದರು.
ನಿಮ್ಮ ಹಣದ ಮದವನ್ನು ಕಡಿಮೆ ಮಾಡುವ ಕೆಲಸ ಮಾಡುತ್ತೇನೆ. ಬಡವರ ಪ್ರತಿನಿಧಿಯಾಗಿಯೇ ನಾನು ಉತ್ತರ ಕೊಡುತ್ತೇನೆ ಎಂದ ಆಯನೂರು ಮಂಜುನಾಥ್ ಹೇಳಿದರು.
ಶಿವಮೊಗ್ಗದಲ್ಲಿ ಗಲಭೆ ಸೃಷ್ಟಿಯಾಗುವ ಸಾಧ್ಯತೆಯಿದೆ:
ನನಗಂತೂ ಸೀರೆ ಕೊಡಿಸೊ ತಾಕತ್ತು ಇಲ್ಲ. ಕಂಡವರಿಗೆ ಸೀರೆ ಉಡಿಸೋ ಅಗತ್ಯವೂ ಇಲ್ಲ. ಶಿವಮೊಗ್ಗದಲ್ಲಿ ಚುನಾವಣೆ ಸಂದರ್ಭದಲ್ಲಿ ಈಶ್ವರಪ್ಪ ಸೀತಾವರಣಯಿಂದ ಬೆಂಬಲಿಗರು ಗಲಭೆ ಸೃಷ್ಟಿಯಾಗುವ ಸಾಧ್ಯತೆ ಇದೆ. ಪೊಲೀಸ್ ಇಲಾಖೆ ಮುಂಜಾಗ್ರತೆ ವಹಿಸಬೇಕು. ತಮ್ಮ ಸ್ಪರ್ಧೆ ಬಿಜೆಪಿಯವರ ವಿರುದ್ಧ ಅಲ್ಲ ಈಶ್ವರಪ್ಪನವರ ಸ್ವಭಾವಕ್ಕೆ ವಿರುದ್ಧವಾಗಿ ಸ್ಪರ್ಧೆ ಮಾಡುತ್ತಿದ್ದೇನೆ. ಬಿಜೆಪಿಯಲ್ಲಿ 32 ವರ್ಷಗಳ ಕಾಲ ಸೋತಾಗಲೂ, ಗೆದ್ದಾಗಲೂ ಈಶ್ವರಪ್ಪ ಸ್ಥಾನಮಾನ ಅನುಭವಿಸಿದರು. ನಾನು 4 ದಿನಗಳಲ್ಲಿ ಎಂ ಎಲ್ ಸಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ. ಈಗಲೇ ಯಾವ ಪಕ್ಷದಿಂದ ಸ್ಪರ್ಧೆ ಎಂದು ಹೇಳಲು ಸಾಧ್ಯವಿಲ್ಲ. ನಾನು ಗೆಲ್ಲಲು ಸ್ಪರ್ಧೆ ಮಾಡುತ್ತೇನೆ ಎಂದರು.