ಚಂದ್ರಯಾನ -3 ಯಶಸ್ವಿಗಾಗಿ ದೇವಾಲಯ ,ದರ್ಗಾಗಳಲ್ಲಿ ವಿಶೇಷ ಪೂಜೆ,ಪ್ರಾರ್ಥನೆ

ಇಡೀ ಪ್ರಪಂಚದ ಗಮನ ಇದೀಗ ಭಾರತದ ಮೇಲಿದೆ. ಭಾರತೀಯ ಬಾಹ್ಯಾಕಾಶ ಸಂಸ್ಥೆಯ (ಇಸ್ರೋ) ಮಹತ್ವಾಕಾಂಕ್ಷೆಯ ಚಂದ್ರಯಾನ-3ರ ಯಶಸ್ಸಿಗೆ ಎಲ್ಲೆಡೆಯಿಂದ ಶುಭ ಹಾರೈಕೆಗಳು ಹರಿದು ಬರುತ್ತಿವೆ. ಇಂದು ಸಂಜೆ 6:04ಕ್ಕೆ ವಿಕ್ರಮ್​​ ಲ್ಯಾಂಡರ್ ಚಂದ್ರನ ಮೇಲಿಳಿಯಲಿದೆ. ಈ ಸಂತೋಷದ ಕ್ಷಣವನ್ನು ಕಣ್ತುಂಬಿಕೊಳ್ಳಲು ಇಡೀ ಪ್ರಪಂಚವೇ ಕಾತುರದಿಂದ ಕಾಯುತ್ತಿದೆ. ವಿಕ್ರಮ್ ಚಂದ್ರನ ಮೇಲೆ ಸರಿಯಾಗಿ ಲ್ಯಾಂಡ್ ಆಗಲಿ ಎಂದು ಶಿವಮೊಗ್ಗ ಜಿಲ್ಲೆಯ ದೇವಾಲಯಗಳಲ್ಲಿ ವಿಶೇಷ ಪೂಜೆ, ದರ್ಗಾದಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು.


ಸಿಗಂದೂರು ದೇವಾಲಯದಲ್ಲಿ ಪೂಜೆ: 

ವಿಕ್ರಮ್​ ಲ್ಯಾಂಡರ್ ಚಂದ್ರನ ಮೇಲೆ ಸಂಪೂರ್ಣ ಸುರಕ್ಷಿತವಾಗಿ ಲ್ಯಾಂಡ್ ಆಗಲಿ. ಇಸ್ರೋ ವಿಜ್ಞಾನಿಗಳ ಪ್ರಯತ್ನ ಯಶಸ್ವಿಯಾಗಲಿ ಎಂದು ಇಂದು ಬೆಳಗ್ಗೆಯೇ ರಾಜ್ಯದ ಪ್ರಸಿದ್ಧ ಯಾತ್ರಾಸ್ಥಳ ಶಿವಮೊಗ್ಗದ ಸಿಗಂದೂರು ಚೌಡೇಶ್ವರಿ ದೇವಾಲಯದಲ್ಲಿ ವಿಶೇಷ ಹೋಮ, ಹವನ ನಡೆಯಿತು. ದೇವಾಲಯದ ಆವರಣದಲ್ಲಿರುವ ಯಾಗಶಾಲೆಯಲ್ಲಿ ನಡೆದ ಹೋಮದಲ್ಲಿ ಆಡಳಿತ ಸಮಿತಿ ಕಾರ್ಯದರ್ಶಿ ರವಿ ಭಾಗಿಯಾಗಿ ನೌಕೆಯು ಯಶಸ್ವಿ ಆಗಲೆಂದು ಪ್ರಾರ್ಥಿಸಿ, ಹೋಮಕ್ಕೆ ಪೂರ್ಣಹುತಿ ನೀಡಿದರು. ದೇವಿ ಚೌಡೇಶ್ವರಿಗೆ ವಿಶೇಷ ಪೊಜೆ ನೆರವೇರಿತು. ದೇವಾಲಯದ ಅರ್ಚಕ ವೃಂದಾ ಹಾಗು ಭಕ್ತರು ಉಪಸ್ಥಿತರಿದ್ದರು.

ಶನೇಶ್ವರ ದೇವಾಲಯದಲ್ಲಿ ಹೋಮ: 

ಶಿವಮೊಗ್ಗದ ವಿನೋಬನಗರದ ಶನೇಶ್ವರ ದೇವಾಲಯದಲ್ಲಿ ವಿಶೇಷ ಹೋಮ ಹಾಗೂ ಪೂಜೆ ನಡೆಯಿತು. ಅರ್ಚಕ ವೃಂದದವರು 108 ಕಾಯಿ ಅಷ್ಠದ್ರವ್ಯ ಮಹಾಗಣಪತಿ ಯಾಗ ಕೈಗೊಂಡರು.

ತಮ್ಮಡಿಕೊಪ್ಪ ನಾಗ ಕ್ಷೇತ್ರದಲ್ಲಿ ವಿಶೇಷ ಪೂಜೆ:

ರಿಪ್ಪನ್ ಪೇಟೆ ಸಮೀಪದ ಅರಸಾಳು  ಗ್ರಾಮ ಪಂಚಾಯತಿ ವ್ಯಾಪ್ತಿಯ ತಮಡಿಕೊಪ್ಪ ಗ್ರಾಮದ ಶ್ರೀ ಗುರು ಕರಿಬಸವೇಶ್ವರ, ಬಾಲಸುಬ್ರಹ್ಮಣ್ಯ ಸ್ವಾಮಿ, ನಾಗದೇವತೆ ಮತ್ತು ನಾಗ ಕ್ಷೇತ್ರ ದೇವಸ್ಥಾನದಲ್ಲಿ ಧರ್ಮದರ್ಶಿಗಳಾದ ಪ್ರಕಾಶ್ ನೇತೃತ್ವದಲ್ಲಿ ವಿಶೇಷ ಆ ಪೂಜೆ ಕೈಗೊಳ್ಳಲಾಗಿತ್ತು.

ಸಾಗರದ ದರ್ಗಾದಲ್ಲಿ ವಿಶೇಷ ಪ್ರಾರ್ಥನೆ:

 ಶಿವಪ್ಪ ನಾಯಕ ವೃತ್ತದಲ್ಲಿರುವ ಹಜರತ್ ಸೈಯದ್ ರಾಜ್ ಬಕ್ಷ್ ವಲಿ ಅಲ್ಲಾಹ್ ದರ್ಗಾದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ನಮಾಜ್ ನಂತರ ದರ್ಗಾದಲ್ಲಿ ಪ್ರಾರ್ಥನೆ ನಡೆಯಿತು. ದರ್ಗಾ ಸಮಿತಿಯ ಅಧ್ಯಕ್ಷ ಅಕ್ಬರ್ ಖಾನ್ ಅಧ್ಯಕ್ಷತೆಯಲ್ಲಿ ನಡೆದ ಪ್ರಾರ್ಥನೆಯಲ್ಲಿ ಮೌಲಾನ ಮೊಹಮ್ಮದ್ ಅಶ್ರಫ್ ರಜಾ ಅಶ್ರಫಿ ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ಸಯ್ಯದ್ ನಿಯಾಝ್, ಜಮೀಲ್ ಸಾಗರ್, ಸಮೀವುಲ್ಲಾ, ಅಕ್ರಮ್, ರಶೀದ್, ನಜೀರ್ ಹಾಗೂ ಇನ್ನಿತರರು ಇದ್ದರು.

ದರ್ಗಾ ಸಮಿತಿಯ ಅಧ್ಯಕ್ಷ ಅಕ್ವರ್ ಖಾನ್ ಮಾತನಾಡಿ, “ದರ್ಗಾದಲ್ಲಿ ಚಂದ್ರಯಾನ-3ರ ಯಶಸ್ಸಿಗೆ ಪ್ರಾರ್ಥನೆ ಸಲ್ಲಿಸಿದ್ದೇವೆ. ಭಾರತದಲ್ಲಿ ಎಲ್ಲರೂ ಒಗ್ಗಟ್ಟಾಗಿ ಇರಬೇಕು. ಭಾರತದ ಚಂದ್ರಯಾನ ನಂಬರ್ ಒನ್ ಆಗಬೇಕೆಂದು ಪ್ರಾರ್ಥನೆ ಮಾಡಿದ್ದೇವೆ” ಎಂದರು.

Leave a Reply

Your email address will not be published. Required fields are marked *