ನಿವೃತ್ತಿ ಎನ್ನುವುದು ವಿಶ್ರಾಂತ ಜೀವನವಾಗಬಾರದು : ಬಿ ಕೃಷ್ಣಪ್ಪ
ರಿಪ್ಪನ್ಪೇಟೆ : ಪ್ರತಿಯೊಬ್ಬ ಸರಕಾರಿ ನೌಕರನೂ ಕಡ್ಡಾಯವಾಗಿ ನಿವೃತ್ತಿಯಾಗಲೇ ಬೇಕು ಆದರೆ ನಿವೃತ್ತಿ ಕೇವಲ ವೃತ್ತಿಗೆ ಹೊರತು ದೇಹ ಮತ್ತು ಮನಸ್ಸಿಗಲ್ಲ ಎಂದು ಶಿವಮೊಗ್ಗ ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಬಿ ಕೃಷ್ಣಪ್ಪ ಹೇಳಿದರು.
ಪಟ್ಟಣದ ಸರಕಾರಿ ಪದವಿಪೂರ್ವ ಕಾಲೇಜಿನ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ಸೇವಾ ನಿವೃತ್ತಿ ಹೊಂದಿದ ಎ ಮಂಜುನಾಥ್ ಅವರಿಗೆ ಬೀಳ್ಕೊಡುವ ಕಾರ್ಯಕ್ರಮವನ್ನುದ್ದೇಶಿಸಿ ಅವರು ಮಾತನಾಡಿ ಕಾಲೇಜಿನ ಅಭಿವೃದ್ಧಿಯಲ್ಲಿ ಎ ಮಂಜುನಾಥ್ ರವರು ಪ್ರಾಮಾಣಿಕ ಪ್ರಯತ್ನಗಳನ್ನು ನಡೆಸಿದ್ದಾರೆ. ಹುದ್ದೆಯಿಂದ ನಿವೃತ್ತರಾದರೂ ಪ್ರವೃತ್ತಿ, ಆಸಕ್ತಿ ಮತ್ತು ಹುಮ್ಮಸ್ಸಿನ ವಿಚಾರದಲ್ಲಿ ನಿವೃತ್ತಿ ಇರಬಾರದು.ಹಲವು ವರ್ಷಗಳ ಕಾಲ ಸುದೀರ್ಘ ಕಾಲ ವಿವಿಧೆಡೆ ಸೇವೆ ಸಲ್ಲಿಸಿ ಸಾವಿರಾರು ವಿದ್ಯಾರ್ಥಿಗಳಿಗೆ ದಾರಿದೀಪವಾಗಿರುವ ಮಂಜುನಾಥ್ ರವರ ಮುಂದಿನ ಜೀವನ ಸುಖಮಯವಾಗಲಿ ಎಂದರು.
ಬಿಳ್ಕೊಡುಗೆ ಸಮಾರಂಭದ ಗೌರವ ಮತ್ತು ಸನ್ಮಾನವನ್ನು ಸ್ವೀಕರಿಸಿ ಪ್ರಾಚಾರ್ಯ ಎ ಮಂಜುನಾಥ್ ಮಾತನಾಡಿ 35 ವರ್ಷಗಳ ಕಾಲ ಪದವಿಪೂರ್ವ ಕಾಲೇಜಿನ ಉಪನ್ಯಾಸಕನಾಗಿ ಹಾಗೂ ಪ್ರಾಚಾರ್ಯರಾಗಿ ಕಾರ್ಯ ನಿರ್ವಹಿಸಿದ ಸಂತೃಪ್ತಿ ನನಗಿದ್ದು. ನನ್ನ ಕಾರ್ಯ ಅವಧಿಯಲ್ಲಿ ಪ್ರಾಮಾಣಿಕವಾಗಿ ನಿಷ್ಠೆಯಿಂದ ಕಾರ್ಯನಿರ್ವಹಿಸಿದ್ದೀನಿ ಎಂಬ ಸಂತೃಪ್ತಿ ಇದೆ. ನನ್ನ ಪೋಷಕರ ಹಾಗೂ ದೇವರ ಆಶೀರ್ವಾದದಿಂದ ನಾನು ಕಲಿತ ಅಕ್ಷರ ಜ್ಞಾನವನ್ನು ಸಮಾಜದಲ್ಲಿನ ಸಾವಿರಾರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಲು ಸಹಕಾರಿಯಾಯಿತು. ಹಾಗೆ ನನ್ನೊಂದಿಗೆ ಕಾರ್ಯನಿರ್ವಹಿಸಿದ ಉಪನ್ಯಾಸಕರ ಹಾಗೂ ವಿದ್ಯಾರ್ಥಿಗಳ ಪೋಷಕರ ಮತ್ತು ಕಾಲೇಜು ಅಭಿವೃದ್ಧಿ ಸಮಿತಿಯವರ ಸಹಕಾರದಿಂದ ನಮ್ಮ ರಿಪ್ಪನ್ ಪೇಟೆ ಸರ್ಕಾರಿ ಪದವಿ ಪೂರ್ವ ಕಾಲೇಜು 2024ರ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿತು ಎಂದರು.
ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಜಿ ಆರ್ ಗೋಪಾಲಕೃಷ್ಣ ಮಾತನಾಡಿ ಸಾವಿರಾರು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಶ್ರಮಿಸಿದವರಾಗಿದ್ದಾರೆ. ಶಿಕ್ಷಕರು ಸೇವೆಯಿಂದ ನಿವೃತ್ತರಾದರೂ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಶಾಶ್ವತವಾದ ಸ್ಥಾನ ಪಡೆದುಕೊಳ್ಳುತ್ತಾರೆ,ನಿಶ್ಕಲ್ಮಷ ಮನಸ್ಸಿನ ಹಸನ್ಮುಖಿ ವ್ಯಕ್ತಿತ್ವ,ಸದಾ ಸಹನಾಮೂರ್ತಿಯಂತಿದ್ದು ಕಾಲೇಜನ್ನು ಅಭಿವೃದ್ಧಿ ಪಥದತ್ತ ಮುನ್ನಡೆಸಿದ ಎ ಮಂಜುನಾಥ್ ರವರ ನಿವೃತ್ತಿ ಜೀವನ ಆಶಾದಾಯಕವಾಗಿರಲಿ ಎಂದರು.
ಕಾರ್ಯಕ್ರಮದಲ್ಲಿ ಸರಕಾರಿ ಪದವಿಪೂರ್ವ ಕಾಲೇಜಿನ ಪ್ರಭಾರ ಪ್ರಾಚಾರ್ಯ ವಾಸುದೇವ್, ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರಾದ ರಫಿ ರಿಪ್ಪನ್ಪೇಟೆ, ಲೇಖನ ಚಂದ್ರನಾಯ್ಕ್,ಬೋರಪ್ಪ ,ಷಣ್ಮುಖ , ಹೊಸನಗರ ಕಾಲೇಜಿನ ಪ್ರಾಚಾರ್ಯ ಸ್ವಾಮಿರಾವ್, ನಿಟ್ಟೂರಿನ ಕಾಲೇಜಿನ ಪ್ರಾಚಾರ್ಯ ಗಣೇಶ್, ಅಮೃತ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಮಹಮ್ಮದ್ ನಜಹತ್ ಉಲ್ಲಾ. ಸಾಗರ ಕಾಲೇಜಿನ ಪ್ರಾಚಾರ್ಯ ಅರುಣ್ ಕುಮಾರ್ . ಹೊಸನಗರ ತಾಲೂಕು ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಅಧ್ಯಕ್ಷ ಹಾಲಪ್ಪ ಸಂಕೂರ್, ,ಸೇರಿದಂತೆ ಜಿಲ್ಲೆಯ ವಿವಿಧಡೆಗಳಿಂದ ಆಗಮಿಸಿದ ಪ್ರಾಚಾರ್ಯರು, ಉಪನ್ಯಾಸಕರು, ಇನ್ನಿತರರಿದ್ದರು.