ನಿವೃತ್ತ ಯೋಧನ ಮೇಲೆ ದೌರ್ಜನ್ಯ ಆರೋಪ: ಗ್ರಾಪಂ ಉಪಾಧ್ಯಕ್ಷನ ವಿರುದ್ಧ ಬಿಜೆಪಿ ಜೆಡಿಎಸ್ ಪ್ರತಿಭಟನೆ | Protest

ನಿವೃತ್ತ ಯೋಧನ ಮೇಲೆ ದೌರ್ಜನ್ಯ ಆರೋಪ: ಗ್ರಾಪಂ ಉಪಾಧ್ಯಕ್ಷನ ವಿರುದ್ಧ ಬಿಜೆಪಿ ಜೆಡಿಎಸ್ ಪ್ರತಿಭಟನೆ

ಹೊಸನಗರ: ನಿವೃತ್ತ ಯೋಧ ಕೆ‌.ಕೆ.ರಾಮಣ್ಣ ಮೇಲೆ ದೌರ್ಜನ್ಯ ಮತ್ತು ಅನಾಗರಿಕ ವರ್ತನೆ ತೋರುತ್ತಿದ್ದಾರೆ ಎಂದು ಆರೋಪಿಸಿ ಗ್ರಾಪಂ ಉಪಾಧ್ಯಕ್ಷ ರಮೇಶ ಹಲಸಿನಹಳ್ಳಿ ವಿರುದ್ಧ ಬಿಜೆಪಿ ಮತ್ತು ಜೆಡಿಎಸ್ ಜಂಟಿಯಾಗಿ ಅನಿರ್ಧಿಷ್ಠಾವಧಿ ಅಹೋರಾತ್ರಿ ಪ್ರತಿಭಟನೆ ಆರಂಭಿಸಿದೆ.


ತಾಲೂಕಿನ ಅರಮನೆಕೊಪ್ಪ ಗ್ರಾಪಂ ವ್ಯಾಪ್ತಿಯಲ್ಲಿ ಮಂಗಳವಾರ ಧರಣಿ ನಡೆಸಿದ ಪ್ರತಿಭಟನಾಕಾರರು ಉಪಾಧ್ಯಕ್ಷ ರಮೇಶ ಹಲಸಿನಹಳ್ಳಿ ಮೇಲೆ ಸೂಕ್ತ ಕ್ರಮಕ್ಕೆ ಒತ್ತಾಯಿಸಲಾಯಿತು.


ನಿವೃತ್ತ ಯೋಧ ಕೆ.ಕೆ.ರಾಮಣ್ಣರಿಗೆ ಅನಗತ್ಯ ಕಿರುಕುಳ ನೀಡಲಾಗುತ್ತಿದೆ. ಒಂದು ವರ್ಷದ ಹಿಂದೆ ಗ್ರಾಪಂ ಬೆಳಸಿ ಪೋಷಿಸಿದ ರೂ.40 ಲಕ್ಷ ಬೆಲೆಬಾಳುವ ಅಕೇಶಿಯಾ ಮರಗಳನ್ನು ಉಪಾಧ್ಯಕ್ಷ ರಮೇಶ್, ಅಧ್ಯಕ್ಷರ ಪತಿ ಗೋಪಾಲ ಸೇರಿಕೊಂಡು ಅಕ್ರಮವಾಗಿ ಮಾರಾಟ ಮಾಡಲು ಹೊರಟಿದ್ದರು. ಇದನ್ನು ನಿವೃತ್ತ ಯೋಧ ಸೇರಿದಂತೆ ಗ್ರಾಮಸ್ಥರು ವಿರೋಧಿಸಿದ್ದರು. ಇದರ ಫಲವಾಗಿ ಇಲಾಖೆ ದಂಡ ಕಟ್ಟಿಸಿದೆ ಮಾತ್ರವಲ್ಲ ಕೇಸು ನಡೆಯುತ್ತಿದೆ. ಇದಕ್ಕೆ ಸೇಡು ತೀರಿಸಿಕೊಳ್ಳಲು‌ ನಿವೃತ್ತ ಯೋಧನ ಮೇಲೆ ನಿರಂತರ ದೌರ್ಜನ್ಯ ಮಾಡಲಾಗುತ್ತಿದೆ ಎಂದು ಧರಣಿ ನಿರತರು ಆರೋಪಿಸಿದ್ದಾರೆ.

ನಿವೃತ್ತ ಯೋಧ ತನ್ನ ಜಮೀನಿನ ತಲೆಗಟ್ಟಿನಲ್ಲಿ ತೋಟಕ್ಕೆ ಹೋಗಲು ಮಣ್ಣು ತೆಗೆದು ರಸ್ತೆ ನಿರ್ಮಿಸಿದ್ದನ್ನು ನೆಪವಾಗಿಸಿ ಕಂದಾಯ ಇಲಾಖೆಗೆ ತಪ್ಪು ಮಾಹಿತಿ ಕೊಟ್ಟು ದೂರು ನೀಡಲಾಗಿದೆ. ತನಿಖಾ ಸಮಯದಲ್ಲಿ ಉಪಾಧ್ಯಕ್ಷ ರಮೇಶ್ ತಾನು ಜನಪ್ರತಿನಿಧಿ ಎಂಬುದನ್ನು ಮರೆತು ಕೆಳಮಟ್ಟದ ಭಾಷೆ ಪ್ರಯೋಗಿಸಿ, ನಿವೃತ್ತ ಯೋಧನ ತೇಜೋವಧೆಗೆ ಮುಂದಾಗಿದ್ದಾನೆ ಎಂದು ಆರೋಪಿಸಿದರು.


ವೈಯಕ್ತಿಕ ಹಿತಾಸಕ್ತಿಗಾಗಿ ಗೌರವಾನ್ವಿತರ ತೋಜೋವಧೆ, ಜೊತೆಗೆ ಸಮಾಜದಲ್ಲಿ ಅಶಾಂತಿ ಉಂಟು ಮಾಡುತ್ತಿರುವ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.

ಇದಕ್ಕು‌ ಮುನ್ನ ಜಿಲ್ಲಾ ಅರೆಸೇನಾ ಪಡೆಯ ನಿವೃತ್ತ ಯೋಧರ ಕ್ಷೇಮಾಭಿವೃದ್ಧಿ ಸಂಘ, ಬಿಜೆಪಿ, ಜೆಡಿಎಸ್ ನೇತೃತ್ವದಲ್ಲಿ ಕರಿಮನೆ ಗ್ರಾಪಂ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಈ ವೇಳೆ ಗ್ರಾಪಂ ಉಪಾಧ್ಯಕ್ಷ ಮತ್ತು ಆಡಳಿತ ಮಂಡಳಿ ವಿರುದ್ಧ ಧಿಕ್ಕಾರ ಕೂಗಲಾಯಿತು.

ಜೆಡಿಎಸ್ ರಾಜ್ಯ ಕಾರ್ಯದರ್ಶಿ ಅರ್ ಎ ಚಾಬುಸಾಬ್, ತಾಲೂಕು ಬಿಜೆಪಿ ಪ್ರಮುಖ, ಪಪಂ ಸದಸ್ಯ ಹಾಲಗದ್ದೆ ಉಮೇಶ್, ತಾಪಂ ಮಾಜಿ ಸದಸ್ಯ ಬಂಕ್ರಿಬೀಡು ಮಂಜುನಾಥ್, ತಾಲೂಕು ಜೆಡಿಎಸ್ ಅಧ್ಯಕ್ಷ ವರ್ತೇಶ್ ರಿಪ್ಪನಪೇಟೆ, ಕರಿಮನೆ ಗ್ರಾಪಂ ಮಾಜಿ ಅಧ್ಯಕ್ಷ ಎನ್.ವೈ.ಸುರೇಶ್, ನಿವೃತ್ತ ಯೋಧ ಕೆ.ಕೆ.ರಾಮಣ್ಣ, ಶಾಸಕರ ಸಹಾಯಕ ರಾಜೇಶ್, ನಾಗರಾಜ ಬಾವಿಕಟ್ಟೆ, ಷಣ್ಮುಖ ಜಯನಗರ ಯೋಗೇಂದ್ರ, ದೇವರಾಜ್, ಸುರೇಂದ್ರ, ಡಾಕಪ್ಪ ಕನ್ನಳ್ಳಿ, ಸುರೇಶ ಬಾವಿಕಟ್ಟೆ, ರಮೇಶ ಕನ್ನಳ್ಳಿ, ಸಾದಗಲ್ ರತ್ನಾಕರ್, ನಾಗೇಶ್, ರಮೇಶ್, ಸುರೇಂದ್ರ, ಗಣೇಶ್ ಇದ್ದರು.

Leave a Reply

Your email address will not be published. Required fields are marked *