ಜಾತಿ ಪ್ರಮಾಣ ಪತ್ರ ನೀಡಲು ವಿಳಂಬ – ತಹಶೀಲ್ದಾರ್ ಕಛೇರಿ ಮುಂದೆಯೇ ಧರಣಿ ಕುಳಿತ ಶಾಸಕ ಆರಗ ಜ್ಞಾನೇಂದ್ರ | Thirthahalli

ಜಾತಿ ಪ್ರಮಾಣ ಪತ್ರ ನೀಡಲು ವಿಳಂಬ – ತಹಶೀಲ್ದಾರ್ ಕಛೇರಿ ಮುಂದೆಯೇ ಧರಣಿ ಕುಳಿತ ಶಾಸಕ ಆರಗ ಜ್ಞಾನೇಂದ್ರ

ತೀರ್ಥಹಳ್ಳಿ : ಕಳೆದ ಆರು ತಿಂಗಳಿಂದ ಸರಿಯಾಗಿ ಜಾತಿ ಪ್ರಮಾಣ ಪತ್ರವನ್ನು ಕೊಡದೇ ಅಲೆದಾಡಿಸುತ್ತಿದ್ದ ಅಧಿಕಾರಿಗಳಿಗಾಗಿ ಮಾಜಿ ಸಚಿವ ಹಾಗೂ ಹಾಲಿ ಶಾಸಕ ಅರಗ ಜ್ಞಾನೇಂದ್ರ ತೀರ್ಥಹಳ್ಳಿ ತಹಶೀಲ್ದಾರ್ ಕಚೇರಿ ಬಾಗಿಲಲ್ಲಿ ಕುಳಿತು ಪ್ರತಿಭಟನೆ ಮಾಡಿದ್ದಾರೆ.

ಈ ಘಟನೆ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಹಶೀಲ್ದಾರ್ ಕಚೇರಿಯಲ್ಲಿ ಗುರುವಾರ ಬೆಳಗ್ಗೆ ನಡೆದಿದೆ.ತೀರ್ಥಹಳ್ಳಿ ತಾಲೂಕು ವ್ಯಾಪ್ತಿಯ ಸಾರ್ವಜನಿಕರು ಜಾತಿ ಪ್ರಮಾಣ ಪತ್ರಕ್ಕಾಗಿ ಅರ್ಜಿ ಸಲ್ಲಿಸಿದರೆ, ಅವರಿಗೆ ಪ್ರಮಾಣ ಪತ್ರವನ್ನು ನೀಡದೇ ನಿರಂತರವಾಗಿ 3 ತಿಂಗಳಿಂದ 6 ತಿಂಗಳವರೆಗೆ ಅಲೆದಾಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ತೆರಳಿ ಅರಗ ಜ್ಞಾನೇಂದ್ರ ಅವರಿಗೆ ಖುದ್ದಾಗಿ ದೂರು ನೀಡಿದ್ದಾರೆ. ಈ ಬಗ್ಗೆ ಶಾಸಕರು ಹಲವು ಬಾರಿ ಕೆಲಸ ಸರಿಯಾಗಿ ನಿರ್ವಹಿಸುವಂತೆ ಫೋನ್ ಮೂಲಕ ಸೂಚನೆಯನ್ನೂ ನೀಡಿದ್ದಾರೆ. ಇದಕ್ಕೂ ಬಗ್ಗದ ಹಿನ್ನೆಲೆಯಲ್ಲಿ ಶಾಸಕ ಅರಗ ಜ್ಞಾನೇಂದ್ರ ಅವರೇ ಗುರುವಾರ ಬೆಳಗ್ಗೆ ಕಚೇರಿ ಬಾಗಿಲು ತೆರೆಯುವ ಮುನ್ನವೇ ತಹಸೀಲ್ದಾರ್ ಕಚೇರಿ ಬಾಗಿಲ ಬಳಿ ಬಂದು ಸಿಬ್ಬಂದಿಗಾಗಿ ಕಾಯುತ್ತಾ ಕುಳಿತಿದ್ದಾರೆ.


ಆಶಾ ಕಾರ್ಯಕರ್ತೆಯೊಬ್ಬರು ಇಂಗ್ಲೀಷ್‌ನ ಜಾತಿ ಪ್ರಮಾಣಪತ್ರಕ್ಕಾಗಿ ಕಳೆದ ಆರು ತಿಂಗಳಿಂದ ತಾಲೂಕು ಕಚೇರಿಗೆ ಅಲೆದಾಡುತ್ತಿದ್ದಾರೆ. ಆದರೂ ಅವರಿಗೆ ನಿರಂತರವಾಗಿ ಒಂದಲ್ಲಾ ಒಂದು ನಪವನ್ನು ಹೇಳುತ್ತಾ ಜಾತಿ ಪ್ರಮಾಣ ಪತ್ರವನ್ನು ನೀವು ಕೊಟ್ಟಿಲ್ಲ. ನೀನು ಕಚೇರಿ ಕೆಲಸಕ್ಕೆ ಬರುತ್ತೀಯಾ.? ಇಲ್ಲ ಮಹಿಳೆಯರಿಗೆ ಕಿರಿಕಿರಿ ಮಾಡಲು ಬರುತ್ತೀಯಾ? ನೀನು ಕೆಲಸಕ್ಕೆ ಬರುವುದು ಬೇಡ, ಸುಮ್ಮನೆ ಮನೆಗೆ ವಾಪಸ್ ಹೋಗು ಎಂದು ಗದರಿಸಿದ್ದಾರೆ. ಜೊತೆಗೆ, ಮಧ್ಯವರ್ತಿಗಳ ಕೆಲಸ ಸಲೀಸಾಗಿ ಆಗುತ್ತಿದೆ. ಜನರ ಕೆಲಸ ಆಗುತ್ತಿಲ್ಲ. ಯಾಕೆ ನಿನಗೆ ಸರ್ಕಾರ ಸಂಬಳ ಕೊಡಲ್ವಾ? ನಿಮ್ಮ ಕೆಟ್ಟ ಕೆಲಸದಿಂದ ಜನರ ಬಳಿ ನಾನು ಮಾತು ಕೇಳುವಂತಾಗಿದೆ’ ಎಂದು ಆರಗ ಜ್ಞಾನೇಂದ್ರ ಆಕ್ರೋಶ ಹೊರಹಾಕಿದರು.

ತಹಸಿಲ್ದಾರ್ ರಜೆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರಿಗೆ ಮೊಬೈಲ್ ಕರೆ ಮಾಡಿದ ಶಾಸಕ ಆರಗ ಜ್ಞಾನೇಂದ್ರ , ನಾನು ಇಲ್ಲಿಂದ ಎದ್ದು ಹೋಗುವುದಿಲ್ಲ. ತಾಲೂಕ ಕಚೇರಿಯ ಕೆಲವು ಸಿಬ್ಬಂದಿಯಿಂದ ಸಾರ್ವಜನಿಕರಿಗೆ ತೀವ್ರ ಕಿರಿಕಿರಿ ಆಗುತ್ತಿದೆ. ಕ್ರಮ ಕೈಗೊಳ್ಳದಿದ್ದರೆ ಇಲ್ಲಿಂದ ಎದ್ದು ಹೋಗಲ್ಲ ಎಂದು ತಹಶೀಲ್ದಾರ್‌ ಕಚೇರಿ ಬಾಗಿಲಲ್ಲಿ ಚೇರು ಹಾಕಿ ಕುಳಿತು ಪ್ರತಿಭಟನೆ ಮಾಡಿದರು. ಇದೇ ತಾಲೂಕು ಕಚೇರಿ ಸಿಬ್ಬಂದಿಯ ವರ್ತನೆ ಮತ್ತು ಆಡಳಿತ ಸುಧಾರಣೆ ಮಾಡುವಂತೆ ಜಿಲ್ಲಾಧಿಕಾರಿಗೆ ಆಗ್ರಹಿಸಿದರು.

ಕೆಲ ಹೊತ್ತಿನಲ್ಲಿ ತಹಶೀಲ್ದಾರ್ ಕಚೇರಿಯಲ್ಲಿ ಆಗುತ್ತಿದ್ದ ಸಿಬ್ಬಂದಿ ನಿರ್ಲಕ್ಷ್ಯ ಹಾಗೂ ಸಾರ್ವಜನಿಕರಿಗೆ ಆಗುತ್ತಿದ್ದ ತೊಂದರೆ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ನಂತರ ಶಾಸಕ ಆರಗ ಜ್ಞಾನೇಂದ್ರ ಅವರಿಗೆ ವಾಪಸ್ ಕರೆ ಮಾಡಿ ಇಂದು ಸಂಜೆಯೊಳಗೆ ಇಂಗ್ಲೀಷ್‌ ಭಾಷೆಯಲ್ಲಿ ಜಾತಿ ಪ್ರಮಾಣಪತ್ರ ನೀಡಲಾಗುತ್ತದೆ. ಕಚೇರಿ ಸಿಬ್ಬಂದಿ ವರ್ತನೆ ಕುರಿತು ಸಮಗ್ರ ಮಾಹಿತಿ ಪಡೆದು ಸೂಕ್ತ ಕ್ರಮ ಕೈಗೊಳ್ಳುತ್ತೇನೆ. ನೀವು ಕಚೇರಿ ಬಾಗಿಲಲ್ಲಿ ಕುಳಿತರೆ ಕಂದಾಯ ಇಲಾಖೆ ಆಡಳಿತಕ್ಕೆ ಮುಜುಗರ ಆಗಲಿದೆ ಎಂದು ಮನವಿ ಮಾಡಿದರು. ಇದರಿಂದ ಸಮಾಧಾನಗೊಂಡ ಶಾಸಕ ಆರಗ ಜ್ಞಾನೇಂದ್ರ ಪ್ರತಿಭಟನೆ ಕೈ ಬಿಟ್ಟರು. ನಂತರ ಸಬ್‌ ರಿಜಿಸ್ಟ್ರಾರ್‌ ಕಚೇರಿ, ಕಸಬಾ ನಾಡಕಚೇರಿಗೂ ಭೇಟಿ ನೀಡಿ ಅಧಿಕಾರಿಗಳಿಂದ ಮಾಹಿತಿ ಪಡೆದರು. ಸಾರ್ವಜನಿಕರ ಕೆಲಸಗಳಿಗೆ ಕಿರಿಕಿರಿ ಮಾಡದಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

Leave a Reply

Your email address will not be published. Required fields are marked *