ಒಂದು ಕಾಲದಲ್ಲಿ ಬಾಂಬೆಯ ಹೊಟೇಲ್ ಉದ್ಯಮಿ – ಈಗ ಬಸ್ ನಿಲ್ದಾಣದಲ್ಲಿ ಆಶ್ರಯ | ಸುಖಜೀವನಕ್ಕೆ ಕೊಲ್ಲಿ ಇಟ್ಟಿತು ಪಾರ್ಶ್ವವಾಯು
Ripponpete | ಮುಂಬಯಿಯ ಹೊಟೇಲ್ ಮಾಲೀಕನಿಗೆ ಬಸ್ ನಿಲ್ದಾಣವಾಯ್ತು ಅಶ್ರಯ ತಾಣ – ಸುಖ ಜೀವನಕ್ಕೆ ಮಾರಕವಾಯ್ತ ಪಾರ್ಶ್ವವಾಯು..??? ಹೀಗೊಂದು ಮನಕಲಕುವ ಸ್ಟೋರಿ
ರಿಪ್ಪನ್ಪೇಟೆ : ಜೀವನವೇನ್ನುವುದೇ ಹೀಗೆ ನೋಡಿ ಕಾಲಚಕ್ರ ತಿರುಗಿದಂತೆ ಎಲ್ಲವೂ ಬದಲಾಗುತ್ತದೆ ಎನ್ನುತ್ತಾರೆ ,ಉತ್ತಮ ಆರೋಗ್ಯ ಹಣ ಅಂತಸ್ಥು ಇದ್ದಾಗ ಎಲ್ಲರೂ ನಮ್ಮವರೇ.! ಎಲ್ಲಾರಿಗೂ ನಾವೆಂದರೇ ಅತೀವ ಗೌರವ, ಪ್ರೀತಿ ಉಕ್ಕಿ ಹರಿಯುತ್ತಿರುತ್ತದೆ.ಒಮ್ಮೆ ಜೀವನದಲ್ಲಿ ನಿಮ್ಮ ಕೆಟ್ಟ ಕ್ಷಣಗಳು ಆರಂಭಗೊಂಡರೆ ನಿಮ್ಮ ಪ್ರೀತಿಪಾತ್ರರ ಒಂದೊಂದೇ ಕರಾಳ ಮುಖಗಳು ಕಾಣತೊಡಗುತ್ತದೆ ಇಂತಹದೇ ಒಂದು ಸ್ಟೋರಿ ಇಲ್ಲಿದೆ ನೋಡಿ…
ಗುರುವಾರ ಸುರಿದ ಭಾರಿ ಗಾಳಿ ಮಳೆಯಲ್ಲಿ ನೆವಟೂರು ಬಸ್ ನಿಲ್ದಾಣದಲ್ಲಿ ವ್ಯಕ್ತಿಯೊಬ್ಬರು ಅನಾಥರಾಗಿ ಮಲಗಿದ್ದಾರೆ ಎನ್ನುವ ಮಾಹಿತಿಯನ್ನು ಪೋಸ್ಟ್ ಮ್ಯಾನ್ ನ್ಯೂಸ್ ಗೆ ನೆವಟೂರಿನ ಸಂದೀಪ್ ಹಾಗೂ ಸ್ನೇಹಿತರು ತಿಳಿಸುತ್ತಾರೆ.ಕೂಡಲೇ ಸ್ಥಳಕ್ಕೆ ತೆರಳಿದ ಪೋಸ್ಟ್ ಮ್ಯಾನ್ ನ್ಯೂಸ್ ತಂಡ ವಿಚಾರಿಸಿದಾಗ ಮೂಲತಃ ನೆವಟೂರಿನವರೇ ಆದ ನಾಗರಾಜ್ ಎಂಬ ಮಾಜಿ ಹೊಟೇಲ್ ಉದ್ಯಮಿ ಎಂಬುವುದು ತಿಳಿಯುತ್ತದೆ. ಪ್ರಕರಣದ ಗಂಭೀರತೆಯನ್ನು ಅರಿತ ತಂಡ ತಕ್ಷಣ ರಿಪ್ಪನ್ಪೇಟೆ ಪೊಲೀಸ್ ಠಾಣೆಯ ಪಿಎಸ್ಐ ನಿಂಗರಾಜ್ ಕೆ ವೈ ರವರಿಗೆ ಮಾಹಿತಿ ತಿಳಿಸಲಾಗುತ್ತದೆ.
ತಕ್ಷಣ ಸ್ಥಳಕ್ಕಾಗಮಿಸಿದ ಪಿಎಸ್ಐ ಬಸ್ ನಿಲ್ದಾಣದಲ್ಲಿ ಅನಾಥರಂತೆ ರೋಗಪೀಡಿತರಾಗಿ ಮಲಗಿದ್ದ ನಾಗರಾಜ್ ರವರ ಬಗ್ಗೆ ವಿಚಾರಿಸಿದಾಗ ಅವರ ಜೀವನಗಾಥೆ ಎಂತಹ ಕಲ್ಲು ಮನಸ್ಸನ್ನು ಕರಗಿಸುವಂತಿತ್ತು.
ಯಾರು ಈ ಹೊಟೇಲ್ ಮಾಲೀಕ..??
ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ನೆವಟೂರು ಗ್ರಾಮದ ಸಮೀಪದ ಮೂಡಾಗ್ರೆ ಗ್ರಾಮದ ನಾಗರಾಜ್ ಎಂಬಾತ ಕಳೆದ ಕೆಲವು ವರ್ಷಗಳ ಹಿಂದೆಯೇ ಮುಂಬಯಿಯಲ್ಲಿ ನೆಲೆಸಿ ಸ್ವಂತ ಹೊಟೇಲ್ ನಡೆಸಿಕೊಂಡಿದ್ದರು. ತನ್ನ ಅಕ್ಕಂದಿರ ಮದುವೆಗಳನ್ನು ನಡೆಸಿಕೊಟ್ಟಿದ್ದ ಇವರು ಉಡುಪಿ ಮೂಲದ ಯುವತಿಯನ್ನು ಮದುವೆಯಾಗಿ ಘಟ್ಟದ ಕೆಳಗೆ ತನ್ನ ಪತ್ನಿಯೊಂದಿಗೆ ನೆಲೆಸಿದ್ದರು ಆಗಾಗ ತಾಯಿ ಮತ್ತು ತಮ್ಮನನ್ನು ನೊಡಲು ನೆವಟೂರಿಗೆ ಆಗಮಿಸುತಿದ್ದ ನಾಗರಾಜ್ ರವರ ಜೀವನ ತುಂಬಾ ಚೆನ್ನಾಗಿಯೇ ನಡೆಯುತಿತ್ತು…
ಇಬ್ಬರು ಹೆಣ್ಣುಮಕ್ಕಳನ್ನು ಒಳ್ಳೆಯ ಸಂಭಂಧ ನೋಡಿ ವಿವಾಹ ಮಾಡಿಕೊಟ್ಟು ಉತ್ತಮ ಜೀವನವನ್ನು ನಡೆಸುತಿದ್ದ ಇವರ ಬಾಳಲ್ಲಿ ವಿಧಿಯಾಟವೋ ಏನೋ ಏಕಾಏಕಿ ಪ್ಯಾರಲಿಸಿಸ್ ಆಗಿ ದೇಹದ ಬಲಭಾಗ ಸ್ವಾಧೀನವಿಲ್ಲದಂತಾಗಿ ಒಂದು ಹೆಜ್ಜೆ ಇಡಲು ಕಷ್ಟಪಡಬೇಕಾದ ಸನ್ನಿವೇಧ ಉಂಟಾಗಿತ್ತು.
ಅಲ್ಲಿಂದ ಶುರುವಾಯಿತು ನೋಡಿ ಅವರ ಕೆಟ್ಟ ದಿನಗಳು.. ದಿನಕಳೆದಂತೆ ಹೆಂಡತಿ ಮಕ್ಕಳಿಗೂ ಇವರು ಭಾರವಾಗತೊಡಗಿದರು ಆದರೂ ತಾಳ್ಮೆ ಕಳೆದುಕೊಳ್ಳದೇ ಎಲ್ಲಾವನ್ನೂ ಸಹಿಸಿಕೊಂಡು ಜೀವನ ಸಾಗಿಸುತಿದ್ದ ಅವರು ಪತ್ನಿ ಮಕ್ಕಳ ಹಿಂಸೆ ಹೆಚ್ಚಾದಾಗ ಅವರನ್ನು ತೊರೆಯುವ ಯೋಚನೆ ಮಾಡಿ ತನ್ನ ತಮ್ಮ ಹಾಗೂ ತಾಯಿ ನನ್ನನ್ನು ಕೈ ಬಿಡುವುದಿಲ್ಲಾ ಎಂಬ ಭರವಸೆಯೊಂದಿಗೆ ನೆವಟೂರಿನ ತಾಯಿ ಮನೆಗೆ ಬಂದಿದ್ದಾರೆ.
ನೆವಟೂರಿನ ಸಮೀಪವಿರುವ ತಮ್ಮ ಮನೆಯಲ್ಲಿ ಕಳೆದೊಂದು ವಾರದಿಂದ ಇದ್ದಾರೆ ಆದರೆ ತನ್ನ ಮೂಲ ಮನೆಯ ಮೇಲೆ ನಂಬಿಕೆ ಇಟ್ಟಿದ್ದ ಅವರಿಗೆ ನಿರಾಶೆ ಕಾದಿತ್ತು ಮತ್ತೆ ಬೀದಿಗೆ ಬಂದು ನಿಲ್ಲುವಂತಾಯಿತು.
ಪಾರ್ಶ್ವವಾಯು ಆಗಿರುವ ಕಾರಣ ದೇಹದ ಬಲಭಾಗದಲ್ಲಿ ಸ್ವಾಧೀನವಿಲ್ಲದ ನಾಗರಾಜ್ ತಮ್ಮನ ಮನೆಯಿಂದ ಹೊರಟು ಹೆಚ್ಚು ದೂರ ನಡೆಯಲು ಆಗದೇ ರಸ್ತೆ ಬದಿಯಲ್ಲಿಯೆ ಮಲಗಿದ್ದಾರೆ ಇದನ್ನು ಗಮನಿಸಿದ ನೆವಟೂರಿನ ಸಂದೀಪ್ ,ರವೀಶ್ ಹಾಗೂ ಸ್ನೇಹಿತರು ಅವರನ್ನು ವಿಚಾರಿಸಿ ನೆವಟೂರಿನ ಬಸ್ ನಿಲ್ದಾಣಕ್ಕೆ ಕರೆತಂದು ಬಿಟ್ಟಿದ್ದಾರೆ.
ಯುವಕರು ಬಸ್ ನಿಲ್ದಾಣಕ್ಕೆನೋ ಬಿಟ್ಟಿದ್ದಾರೆ ಆದರೆ ಹೋಗುವುದು ಎಲ್ಲಿಗೆ.!!? ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸಿದ ಮಡದಿಯ ಬಳಿಗೋ..!? ಹೊತ್ತು ಸಾಕಿ ಬೆಳೆಸಿದ ತನ್ನ ಮಕ್ಕಳ ಬಳಿಗೋ.!?? ಒಂದೇ ಮಡಿಲಲ್ಲಿ ಬೆಳೆದ ತಮ್ಮನ ಬಳಿಗೋ..!!? ಒಟ್ಟಾರೆ ಮುಂದಿನ ಹಾದಿಯ ಬಗ್ಗೆ ಶೂನ್ಯ ಆವರಿಸಿದಂತಾಗಿ ಯುವಕರು ಬಿಟ್ಟು ಹೋದ ಬಸ್ ನಿಲ್ದಾಣದಲ್ಲಿಯೇ ಮಲಗಿ ಬಿಟ್ಟಿದ್ದಾರೆ. ಒಂದು ವೇಳೆ ಆರೋಗ್ಯ ಸರಿ ಇದ್ದಿದ್ದರೇ ಮುಂಬಯಿಗೆ ಹೋಗಿ ಮತ್ತೆ ಉದ್ಯಮ ಪ್ರಾರಂಭಿಸಿ ಎಲ್ಲರಿಗೂ ತಕ್ಕ ಉತ್ತರ ನೀಡುತಿದ್ದರೋ ಏನೋ..!!?
ನಾಗರಾಜ್ ನೆರವಿಗೆ ನಿಂತ ಪಿಎಸ್ಐ ನಿಂಗರಾಜ್
ಬಸ್ ನಿಲ್ದಾಣದಲ್ಲಿ ನಾಗರಾಜ್ ಜೀವನಗಾಥೆ ಕೇಳಿದ ಪಿಎಸ್ಐ ನಿಂಗರಾಜ್ ಕೂಡಲೇ ನೆವಟೂರು ಸಮೀಪದಲ್ಲಿರುವ ಮೂಡಾಗ್ರೆ ಗ್ರಾಮದ ನಾಗರಾಜ್ ತಮ್ಮನ ಮನೆಗೆ ತೆರಳಿ ಕುಟುಂಬಸ್ಥರಿಗೆ ಸಂಬಂಧಗಳ ಮೌಲ್ಯಗಳ ಬಗ್ಗೆ ತಿಳಿಹೇಳಿ ಮನೆಗೆ ಸೇರಿಸಿಕೊಳ್ಳುವಂತೆ ಹೇಳಿದ್ದಾರೆ. ಒಂದು ಹಂತದಲ್ಲಿ ನಾಗರಾಜ್ ಗೋಸ್ಕರ ತಾನೊಬ್ಬ ಪೊಲೀಸ್ ಅಧಿಕಾರಿ ಎಂಬ ಹಮ್ಮುಬಿಮ್ಮು ಇಲ್ಲದೇ ಕುಟುಂಬಸ್ಥರ ಬಳಿ ಸಾಮಾನ್ಯರಂತೆ ಮನವಿ ಮಾಡಿದ್ದು ಅವರ ಸಾಮಾಜಿಕ ಕಾಳಜಿಯನ್ನು ಎತ್ತಿ ತೋರಿಸುವಂತಿತ್ತು..
ಪಿಎಸ್ಐ ಮಾತಿಗೆ ಒಪ್ಪಿದ ಕುಟುಂಬಸ್ಥರು ನಾಗರಾಜ್ ರವರನ್ನು ಮನೆಗೆ ಕರೆದೊಯ್ಯುವ ಮೂಲಕ ಸದ್ಯಕ್ಕೆ ಪ್ರಕರಣ ಸುಖಾಂತ್ಯಗೊಂಡಿದೆ.
ಒಟ್ಟಾರೆಯಾಗಿ ಈಗ ತನ್ನ ತಾಯಿ ಮನೆಗೆ ಸೇರಿರುವ ಪಾರ್ಶ್ವವಾಯು ರೋಗಿ ನಾಗರಾಜ್ ರವರನ್ನು ಕುಟುಂಬಸ್ಥರು ಎಷ್ಟು ದಿನ ಕಾಳಜಿಯಿಂದ ನೋಡಿಕೊಳ್ಳುತ್ತಾರೆ ಎನ್ನುವುದನ್ನು ಕಾದುನೋಡಬೇಕಾಗಿದೆ.
ಇಂತಹ ಘಟನೆಗಳು ಮನುಷ್ಯನ ಜೀವನದಲ್ಲಿ ಏನೆಲ್ಲಾ ಬದಲಾವಣೆಗಳು ಆಗಬಹುದು ಎಂಬುದನ್ನು ನಮ್ಮೆದುರಿಗೆ ತಂದು ನಿಲ್ಲಿಸುತ್ತದೆ. ಆರೈಕೆಯ ಅಗತ್ಯವನ್ನು ಹೊಂದಿರುವವರಿಗೆ ಸಮಾಜದ ಬೆಂಬಲ ಅಗತ್ಯವಿದೆ ಎಂಬುದನ್ನು ಪ್ರಾಮುಖ್ಯವಾಗಿ ಎತ್ತಿಹಿಡಿಯುತ್ತದೆ.
🖋 ರಫ಼ಿ ರಿಪ್ಪನ್ಪೇಟೆ