Headlines

14 ಮಕ್ಕಳನ್ನು ಕಚ್ಚಿ ಗ್ರಾಮಸ್ಥರ ನಿದ್ದೆಗೆಡಿಸಿದ್ದ ಮುಶಿಯಾ (ಲಂಗೂರ್) – ಅರವಳಿಕೆ ಕೊಟ್ಟು ಸೆರೆ | Hanuman langur

14 ಮಕ್ಕಳನ್ನು ಕಚ್ಚಿ ಗ್ರಾಮಸ್ಥರ ನಿದ್ದೆಗೆಡಿಸಿದ್ದ ಮುಶಿಯಾ (ಲಂಗೂರ್) – ಅರವಳಿಕೆ ಕೊಟ್ಟು ಸೆರೆ

ಸೊರಬ ತಾಲ್ಲೂಕಿನ ಶಕುನವಳ್ಳಿಯಲ್ಲಿ ಕಳೆದೊಂದು ವಾರದಲ್ಲಿ 14 ಮಕ್ಕಳಿಗೆ ಕಚ್ಚಿ ಗ್ರಾಮಸ್ಥರ ನಿದ್ದೆಗೆಡಿಸಿದ್ದ ಮೂರು ಮುಶಿಯಾಗಳ (ಹನುಮಾನ್‌ ಲಂಗೂರ್‌) ಪೈಕಿ ಒಂದನ್ನು ಅರಣ್ಯ ಇಲಾಖೆ ಸಿಬ್ಬಂದಿ ಭಾನುವಾರ ಸೆರೆಹಿಡಿದಿದ್ದಾರೆ. ಜಿಲ್ಲೆಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಅರವಳಿಕೆ ಮದ್ದು ನೀಡಿ ಮುಶಿಯಾ ಸೆರೆ ಹಿಡಿಯಲಾಗಿದೆ.

ಗ್ರಾಮದಲ್ಲಿ ಮುಶಿಯಾಗಳ ತಂಡ ಬೀಡು ಬಿಟ್ಟಿದೆ. ಅದರಲ್ಲಿ ಮೂರು ಮುಶಿಯಾ ಮಕ್ಕಳ ಮೇಲೆ ದಾಳಿ ಮಾಡುತ್ತಿವೆ ಎನ್ನಲಾಗಿದೆ. ವಾನರರ ಕಾಟಕ್ಕೆ ಇಡೀ ಗ್ರಾಮವೇ ನಲುಗಿ ಹೋಗಿತ್ತು. ಮುಶಿಯಾಗಳ ದಾಳಿಗೆ ಸಿಲುಕಿ ಗಾಯಗೊಂಡವರಲ್ಲಿ 2 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳೇ ಹೆಚ್ಚು ಇದ್ದರು.

ಮಕ್ಕಳಿಗೆ ತೊಂದರೆ ನೀಡುತ್ತಿದ್ದ ಇನ್ನೂ ಎರಡು ಮುಶಿಯಾಗಳ ಸೆರೆಗೆ ಕ್ರಮ ವಹಿಸಲಾಗಿದೆ. ಎಸಿಎಫ್‌ ಮೋಹನ್‌ಕುಮಾರ್ ನೇತೃತ್ವದಲ್ಲಿ ಗ್ರಾಮದಲ್ಲಿ ಇಡೀ ದಿನ ಕಾರ್ಯಾಚರಣೆ ನಡೆಯಿತು ಎಂದು ಆನವಟ್ಟಿ ವಲಯದ ಆರ್‌ಎಫ್‌ಒ ಪುರುಷೋತ್ತಮ ಮಾದ್ಯಮಗಳಿಗೆ ತಿಳಿಸಿದರು.

ಯಾವುದೇ ಪ್ರತಿರೋಧ ತೋರದ ಕಾರಣ ಮಕ್ಕಳನ್ನೇ ಈ ಮುಶಿಯಾಗಳು ಗುರಿ ಮಾಡುತ್ತಿದ್ದವು. ಅಂಗಳದಲ್ಲಿ ಆಟವಾಡುವ ಮಕ್ಕಳ ಮೇಲೆ ಏಕಾಏಕಿ ದಾಳಿ ನಡೆಸಿ ಕಚ್ಚಿ ಗಾಯಗೊಳಿಸುತ್ತಿದ್ದವು. ಇದರಿಂದ ಗ್ರಾಮದಲ್ಲಿ ಭಯದ ವಾತಾವರಣ ಸೃಷ್ಟಿಯಾಗಿ ಪೋಷಕರು ಮಕ್ಕಳನ್ನು ಮನೆಯಿಂದ ಹೊರಗೆ ಕಳುಹಿಸಲು ಅಂಜುತ್ತಿದ್ದರು.

ತಮ್ಮನ್ನು ಹಿಡಿಯಲು ಬಂದಿದ್ದ ಅರಣ್ಯ ಸಿಬ್ಬಂದಿ ಹಾಗೂ ವೈದ್ಯರನ್ನು ಇಡೀ ದಿನ ಕೈಗೆ ಸಿಗದೇ ಗೋಳು ಹೊಯ್ದುಕೊಂಡವು. ಕ್ಷಣ ಮಾತ್ರದಲ್ಲಿ ಮನೆಯ ಮಾಳಿಗೆ ಮರ ವಿದ್ಯುತ್ ಕಂಬ ಹೀಗೆ ಸಿಕ್ಕ ಸಿಕ್ಕ ಕಡೆ ಲಾಗಾ ಹಾಕುತ್ತಾ ಮಾಯವಾಗುತ್ತಿದ್ದ ಮುಶಿಯಾಗಳನ್ನು ಹಿಂಬಾಲಿಸಿದಅರಣ್ಯ ಸಿಬ್ಬಂದಿ ಬಿರು ಬಿಸಿಲಿಗೆ ಸಿಲುಕಿ ಹೈರಾಣಾಗಿದ್ದರು. ಕಾರ್ಯಾಚರಣೆ ನೋಡಲು ಭಾರೀ ಸಂಖ್ಯೆಯಲ್ಲಿ ಗ್ರಾಮಸ್ಥರು ನೆರೆದಿದ್ದು ಆ ಗದ್ದಲ ಕೂಡ ಮುಶಿಯಾಗಳ ಸೆರೆ ಹಿಡಿಯಲು ಅಡ್ಡಿಯಾಯಿತು. ಸಂಜೆ ಒಂದು ಮುಶಿಯಾ ಅರೆವಳಿಕೆ ಗನ್‌ನ ಗುರಿಗೆ ಸಿಲುಕಿ ಸೆರೆ ಸಿಕ್ಕಿತು ಎಂದು ತಿಳಿದುಬಂದಿದೆ.

Leave a Reply

Your email address will not be published. Required fields are marked *