ಶ್ರೀ ಪದ್ಮಾವತಿ ದೇವಿ ಅನುಗ್ರಹ ಅನನ್ಯ , ಜೈನ ಧರ್ಮ ಪ್ರಭಾವನಾ ಪವಿತ್ರ ತೀರ್ಥಕ್ಷೇತ್ರ – ಮುನಿಶ್ರೀಗಳವರು
ಹೊಂಬುಜ : ಶ್ರೀ ಪದ್ಮಾವತಿ ದೇವಿ ಅನುಗ್ರಹ ಅನನ್ಯ, ಜೈನ ಧರ್ಮ ಪ್ರಭಾವನಾ ಪವಿತ್ರ ತೀರ್ಥಕ್ಷೇತ್ರ ಹೊಂಬುಜ ಶ್ರೀಕ್ಷೇತ್ರದಲ್ಲಿ ಶ್ರೀ 1008 ಪಾರ್ಶ್ವನಾಥ ಸ್ವಾಮಿ, ಜಗನ್ಮಾತೆ ಯಕ್ಷಿ ಶ್ರೀ ಪದ್ಮಾವತಿ ದೇವಿ ಆರಾಧನಾ ಪುಣ್ಯಪ್ರದಾಯಿನಿ ಸನ್ನಿಧಿಯಾಗಿದೆ ಎಂದು ಮುನಿಶ್ರೀ 108 ಅಮರಕೀರ್ತಿ ಮಹಾರಾಜರು ತಿಳಿಸಿದರು.
ವಾರ್ಷಿಕ ರಥೋತ್ಸವ ಅಂಗವಾಗಿ ‘ಸಿದ್ಧಾಂತಕೀರ್ತಿ’ ಗೌರವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುನಿಶ್ರೀಗಳವರು ಜೈನ ಧರ್ಮ ತತ್ವಗಳು ವಿಶ್ವವ್ಯಾಪಿ ಶಾಂತಿಗಾಗಕಿ ಆಧಾರಸ್ತಂಭವಾಗಿದೆ ಎಂದು ವಿವರಿಸಿದರು. ಇದೇ ಸಂದರ್ಭದಲ್ಲಿ ಮುನಿಶ್ರೀ 108 ಅಮೋಘಕೀರ್ತಿ ಮಹಾರಾಜರು ಹೊಂಬುಜ ಅತಿಶಯ ಕ್ಷೇತ್ರವು ಸರ್ವಧರ್ಮ ಸಮನ್ವಯದ ಅಪೂರ್ವ ಜೈನ ತೀರ್ಥವಾಗಿದ್ದು, ಅಭೀಷ್ಟವರ ಪ್ರದಾಯಿನಿ ಯಕ್ಷಿಶ್ರೀ ಪದ್ಮಾವತಿ ದೇವಿ ಅನುಗ್ರಹ ಯಾಚಿಸುವವರು ಜೀವನ ಮುಕ್ತಿಯ ಪಥ ಅನುಸರಿಸುತ್ತಾರೆ ಎಂದು ಭಕ್ತರ ಅಪೇಕ್ಷೆ, ನಿರೀಕ್ಷೆಗಳು ಫಲಿಸಲೆಂದು ಹರಸಿದರು.
ಆರ್ಯಿಕಾ 105 ಪದ್ಮಶ್ರೀ ಮಾತಾಜಿ ಉಪಸ್ಥಿತರಿದ್ದರು.
“ಸಿದ್ಧಾಂತಕೀರ್ತಿ ಗೌರವ ಪ್ರಶಸ್ತಿ” ಯನ್ನು ಸ್ವೀಕರಿಸಿದ ಹಿರಿಯ ಜೈನ ವಿದ್ವಾಂಸ ಇಂಡಿಯ ಬ್ರ. ಶ್ರೀ ರತನಚಂದ ಕೋಟಿಯವರು ಜೈನ ಪ್ರಭಾವನಾ ಅಂಗವಾಗಿ ಸ್ವಾದ್ಯಾಯ, ಜಪ, ತಪಗಳಿಂದ ವೈಯುಕ್ತಿಕ ಕಲ್ಯಾಣ ಸಾಧ್ಯ ಎನ್ನುತ್ತಾ ಶ್ರೀ ಪದ್ಮಾವತಿ ದೇವಿಯ ನಾಮಸ್ಮರಣೆಯಿಂದ ಸರ್ವರಲ್ಲಿ ಸಾಮರಸ್ಯ, ಸಹೋದರತ್ವ ನಿರ್ಮಾಣವಾಗುತ್ತದೆ. ಜೈನ ಸಾಹಿತ್ಯದ ಮರ್ಮವು ಲೋಕಕಲ್ಯಾಣ ಮಾರ್ಗದ ದಿಕ್ಸೂಚಿ ಎಂದರು.
ಹೊಂಬುಜ ಶ್ರೀಮಠದ ಪೀಠಾಧೀಶರಾಗಿರುವ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮಿಗಳವರು ಪೂರ್ವ ಪರಂಪರೆಯ ಜೈನಾಗಮ ಪದ್ಧತಿಯಿಂದ ಹೊಂಬುಜ ಕ್ಷೇತ್ರದಲ್ಲಿ ಧಾರ್ಮಿಕ ವಿಧಿ-ವಿಧಾನಗಳು ಭಕ್ತರ ಇಷ್ಟಾರ್ಥ ನೆರವೇರಿಸುವ ಅಂಗವಾಗಿದೆ. ಸಾಹಿತ್ಯ, ಕಲೆ, ಶಿಕ್ಷಣ, ಆರೋಗ್ಯ, ಪರಿಸರ ರಕ್ಷಣೆ ಕುರಿತು ನಿರಂತರ ಶ್ರೀಕ್ಷೇತ್ರದಲ್ಲಿ ಸಮಾಜಾಭಿವೃದ್ಧಿಗಾಗಿ ಕಾರ್ಯಕ್ರಮಗಳು ಹಮ್ಮಿಕೊಳ್ಳಲಾಗಿದೆ. ಭಕ್ತರ ಆಶಯ ಈಡೇರಿಸುವ ಧರ್ಮ ದೀಪಿಕೆಯಾಗಿ ಶ್ರೀಕ್ಷೇತ್ರ ಬೆಳಗುತ್ತಿದೆ ಎಂಬ ವಿಚಾರವನ್ನು ತಿಳಿಸಿದರು.
ಕುಂಬದಹಳ್ಳಿ ಜೈನ ಮಠದ ಪರಮಪೂಜ್ಯ ಸ್ವಸ್ತಿಶ್ರೀ ಭಾನುಕೀರ್ತಿ ಭಟ್ಟಾರಕ ಮಹಾಸ್ವಾಮಿಗಳವರು ‘ಹೊಂಬುಜ ಶ್ರೀಕ್ಷೇತ್ರವು ಗುರುಕುಲ’ ಎಂಬAತಾಗಿದೆ ಎಂದು ತಮ್ಮ ವಿದ್ಯಾಭ್ಯಾಸದ ದಿನಗಳ ಸ್ಮರಣೆ ಮಾಡಿದರು.
ಸೋಂದಾ ಶ್ರೀ ಜೈನ ಮಠದ ಪರಮಪೂಜ್ಯ ಸ್ವಸ್ತಿಶ್ರೀ ಅಕಲಂಕಕೇಸರಿ ಭಟ್ಟಾಕಲಂಕ ಭಟ್ಟಾರಕ ಮಹಾಸ್ವಾಮಿಗಳು ‘ಭಕ್ತರು ಸಮರ್ಪಿಸುವ ಶ್ರದ್ಧಾ ಭಕ್ತಿಗಳು ಸಂಕಷ್ಟ ಪರಿಹಾರ ಮಾಡುತ್ತವೆ’ ಎಂದು ಶ್ರೀಕ್ಷೇತ್ರದ ಐತಿಹ್ಯವನ್ನು ತಿಳಿಸಿ ಹರಸಿದರು.
ಭಕ್ತಿಗೀತೆ ಧ್ವನಿಸುರುಳಿ ಲೋಕಾರ್ಪಣೆ
ಧರ್ಮಸ್ಥಳ ಮಾತೃಶ್ರೀ ಹೇಮಾವತಿ ವೀರೇಂದ್ರ ಹೆಗ್ಗಡೆಯವರು ರಚಿಸಿದ ಭಕ್ತಿಗೀತೆ ಧ್ವನಿಸುರುಳಿಯನ್ನು ಯುಗಲ ಮುನಿಮಹಾರಾಜರು ಬಿಡುಗಡೆಗೊಳಿಸಿದರು. ಪ್ರಿಯಾ ಪಿ. ಜೈನ್, ಪೂಜ್ಯ ಮೋಹನ ಗಾಯಕಿಯರಾಗಿ ಭಕ್ತಿಗೀತೆ ಹಾಡಿರುವರು.ಸಂಸೆಯ ಜ್ಯೋತಿ ಜೈನರವರ ಅಕ್ಷರವಾಣಿ ಯೂಟ್ಯೂಬ್ ಚಾನಲ್‌ನ ಡವಳಾರ ಸೇವೆಯ ಭಕ್ತಿಗೀತೆ ಬಿಡುಗಡೆಗೊಳಿಸಲಾಯಿತು. ನೃತ್ಯ ಸೇವೆಯನ್ನು ಸ್ಮತಿ (ಸರಸ್ವತಿ ವಂದನಾ) ನಿಧಿ (ನೃತ್ಯನಮನ) ಮನೋಹರವಾಗಿ ಪ್ರದರ್ಶಿಸಿದರು.
ನೂತನ ಚಂದ್ರಶಾಲೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದ ಪ್ರಾರ್ಥನೆಯನ್ನು ಅಮೃತ ಸಂಗಡಿಗರು, ಸ್ವಾಗತವನ್ನು ಆಡಳಿತಾಧಿಕಾರಿ ಸಿ.ಡಿ. ಅಶೋಕ ಕುಮಾರ್, ಪ್ರಶಸ್ತಿ ಪುರಸ್ಕೃತರ ಪರಿಚಯವನ್ನು ಹೆಚ್.ಬಿ. ಸಂತೋಷ್ ಕುಮಾರ್, ಪ್ರಶಸ್ತಿ ಪತ್ರ ವಾಚನವನ್ನು ಶ್ರೀಧರ ಬೆಂಗಳೂರು ಮಾಡಿದರು. ಕಾರ್ಯಕ್ರಮವನ್ನು ಶ್ರೀಮತಿ ಪೂರ್ಣಿಮಾ ನಿರೂಪಿಸಿದರು.
ಕರ್ನಾಟಕ ರಾಜ್ಯದ ವಿವಿಧೆಡೆಯಿಂದ ಮಹಾರಾಷ್ಟ, ತಮಿಳುನಾಡು, ಅಸ್ಸಾಂ, ಮುಂತಾದೆಡೆಯಿಂದ ಭಕ್ತರು ಆಗಮಿಸಿದ್ದರು.