ವಿದ್ಯಾರ್ಥಿಗಳ ತಪ್ಪು ಉತ್ತರಕ್ಕೆ ಪ್ರತಿಫಲ ಶಿಕ್ಷಕನಿಗೆ ದಂಡನೆ…!! ವಿನೂತನ ಪ್ರಯೋಗದಿಂದ ಮಕ್ಕಳನ್ನು ಜಾಣರನ್ನಾಗಿಸಿದ ಶಿಕ್ಷಕರೊಬ್ಬರ ಸ್ಟೋರಿ – ಮಿಸ್ ಮಾಡದೇ ನೋಡಿ
ಶಿಕ್ಷೆಯೇ ಶಿಕ್ಷಣದ ಮಾನದಂಡ ಎಂಬಂತೆ ವರ್ತಿಸುವ ಖಾಸಗಿ ಶಾಲೆಗಳ ವ್ಯಾಮೋಹಕ್ಕೆ ಮರುಳಾಗಿ,  ದೂರದಿಂದಲೇ  ಸರ್ಕಾರಿ ಶಾಲೆಗಳ ಕಾರ್ಯವೈಕರಿಯ ಬಗ್ಗೆ ಅಸಡ್ಡೆ ತೋರುವವರೆ ಹೆಚ್ಚು , ಇದಕ್ಕೆ ಅಪವಾದ ಎಂಬಂತೆ ಶಿವಮೊಗ್ಗ ಹೊಸನಗರ ತಾಲೂಕಿನ ಅಮೃತ ಗ್ರಾಮ ಪಂಚಾಯತಿ ವ್ಯಾಪ್ತಿಯ ಪುಟ್ಟ ಹಳ್ಳಿಯ ಹಾಲಂದೂರಿನ ಸರ್ಕಾರಿ  ಶಾಲೆ ಸಾಕ್ಷಿಕರಿಸಿದೆ.
ಇಲ್ಲಿನ ಶಿಕ್ಷಕ ಗೋಪಾಲ್ ಹೆಚ್. ಎಸ್. ಅವರ  ವಿನೂತನ ಪ್ರಯೋಗ   ಶಾಲಾ ಮಕ್ಕಳ ಮೇಲೆ ಗಾಢ  ಪರಿಣಾಮ ಬೀರಿದೆ.ತಪ್ಪು ಉತ್ತರ ಕೊಡುವ  ಶಿಷ್ಯರಿಂದಲೇ ಶಿಕ್ಷೆ ಪಡೆದು, ಅವರನ್ನು ಜಾಣರನ್ನಾಗಿಸಿದ ಪರಿ ಅಭೂತಪೂರ್ವವಾದುದು.
ಪುಟಾಣಿ ಮಕ್ಕಳ  ಕಲಿಕೆಗೆ ಪ್ರೇರಣೆಯಾಗುವಂತೆ ಪಠ್ಯವನ್ನು ವಿವಿಧ ರೀತಿಯಲ್ಲಿ ಅರ್ಥಮಾಡಿಸಿ ಹೇಳಿ ಕೊಡುವ ಇವರು,ಬಾಲ್ಯದಲ್ಲಿ ಮಕ್ಕಳಿಗೆ ಸಂಸ್ಕೃತಿ ಹಾಗೂ ಸನ್ನಡತೆಯ ಶಿಕ್ಷಣ ಧಾರೆ ಎರೆಯುತಿದ್ದಾರೆ.
ಉತ್ತಮ ಪ್ರತಿ ಫಲ ಸಿಗಲೇಬೇಕಾದರೆ, ಹೊಸ ಪ್ರಯೋಗಕ್ಕೆ  ಅಣಿಯಾಗಬೇಕು. ಆ ನಿಟ್ಟಿನಲ್ಲಿ  ನಾನು ತಪ್ಪು ಉತ್ತರ ನೀಡಿದ ವಿದ್ಯಾರ್ಥಿಯಿಂದಲೇ ಪೆಟ್ಟು ತಿನ್ನುವ ಪರಿಪಾಠ ಬೆಳೆಸಿಕೊಂಡೆ ಎಂದು ಹೇಳುತ್ತಾರೆ ಶಿಕ್ಷಕ ಗೋಪಾಲ್
ನನ್ನನ್ನು  ದಂಡಿಸಬೇಕಾಗಿಬರಬಹುದು ಎನ್ನುವ ಅಳುಕಿನಿಂದ  ಅವರು ಕ್ರಿಯಾಶೀಲರಾಗಿ ಕಲಿಕೆಯಲ್ಲಿ ಹೆಚ್ಚು  ಆಸಕ್ತಿ ತೋರಿದರು.ಈ ಪ್ರಯೋಗ  ಮಕ್ಕಳ ನಡವಳಿಕೆಯಲ್ಲಿ ಬಹಳಷ್ಟು ಬದಲಾವಣೆ ತಂದಿದೆ   ಎನ್ನುತ್ತಾರೆ ಶಿಕ್ಷಕ ಗೋಪಾಲ ರವರು.
 ಈಗಾಗಲೇ  ವಯೋ ನಿವೃತ್ತಿಯ ಅಂಚಿನಲ್ಲಿರುವ   ಇವರು  2024 ರ ಜೂನ್ ಅಂತ್ಯದಲ್ಲಿ ತಮ್ಮ ಕರ್ತವ್ಯದಿಂದ ಬಿಡುಗಡೆ ಹೊಂದಲಿದ್ದಾರೆ.
 ಈಗ ಕಲಿಯುತ್ತಿರುವ ಮಕ್ಕಳ ತಂದೆ ತಾಯಿಯರಿಗೂ ಇವರೇ ಅಕ್ಷರ ಕಲಿಸಿದ ಗುರು. ಆ ಒಂದು ಅಭಿಮಾನವೇ ಮುಚ್ಚುವ ಹಂತಕ್ಕೆ ತಲುಪಿದ  ಸರ್ಕಾರಿ ಶಾಲೆಯೊಂದು ತನ್ನ ಅಸ್ತಿತ್ವ ಉಳಿಸಿಕೊಳ್ಳಲು  ಸಹಕಾರಿಯಾಗಿದೆ. ಇದೇ ಶಾಲೆಯಲ್ಲಿ ಕಲಿತ ಹಳೆ  ವಿದ್ಯಾರ್ಥಿನಿ ಹೊಳೆಕೇವಿ ಇಂಪನಅಮೃತ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದು,  ತನ್ನ ಬಿಡುವಿನ ಸಮಯದಲ್ಲಿ ಇಲ್ಲಿನ  ಮಕ್ಕಳ ಕಲಿಕೆಗೆ ಸಹಕರಿಸುತ್ತಿದ್ದಾಳೆ.
ದೇಶದ ಭವಿಷ್ಯದ ರೂಪಿಸುವ ನಿಟ್ಟಿನಲ್ಲಿ ಎಲೆಮರೆಯ ಕಾಯಿಯಂತೆ  ಕಾರ್ಯ ನಿರ್ವಹಿಸುವ  ಇಂತಹ ಮಾದರಿ ಶಿಕ್ಷಕರನ್ನು  ಸರ್ಕಾರ ಅಥವಾ ಸಂಘ ಸಂಸ್ಥೆಗಳು ಗುರುತಿಸಿ ಗೌರವಿಸಿದಲ್ಲಿ  ಅವರ ಸೇವಾಕಾರ್ಯಕ್ಕೆ ಸಾರ್ಥಕತೆ ಸಿಗಲಿದೆ.
ಇಂದು 1-5 ನೇ ತರಗತಿಯವರೆಗೆ ಕೇವಲ ಎಂಟು ಮಕ್ಕಳನ್ನು ಹೊಂದಿರುವ ಈ ಸರ್ಕಾರಿ ಶಾಲೆ, ಊರಿನ ಹೆಮ್ಮೆಯ ಆಸ್ತಿ. ಊರಿನ ಹಿರಿಯರ ಪರಿಶ್ರಮದ ಫಲ, ನನ್ನ ಸೇವಾ ಅವಧಿ ಪೂರ್ಣಗೊಳಿಸಿದೆ. ಇಲಾಖೆ ಹಾಗೂ ಸ್ಥಳೀಯರ ಸಹಕಾರಕ್ಕೆ ನನ್ನ ಧನ್ಯವಾದ.
ಗೋಪಾಲ್ ಹೆಚ್. ಎಸ್, ಶಿಕ್ಷಕ.
		 
                         
                         
                         
                         
                         
                         
                         
                         
                         
                        


