Hosanagara | ಶಾಲೆಯ ಎಸ್ ಡಿಎಂಸಿ ಸಭೆಯಲ್ಲಿ ಅಧ್ಯಕ್ಷ ಹಾಗೂ ಸದಸ್ಯನ ನಡುವೆ ಗಲಾಟೆ – ದೂರು ಪ್ರತಿದೂರು ದಾಖಲು | ರಾಜಕೀಯ ತಿರುವು ಪಡೆದುಕೊಳ್ಳುತ್ತಾ ಪ್ರಕರಣ..!!??
ಹೊಸನಗರ : ಶಾಲಾ ಶತಮಾನೋತ್ಸವ ಆಚರಣೆ ಕುರಿತು ನಡೆದ ಪೂರ್ವಭಾವಿ ಸಭೆಯ ಸಂದರ್ಭದಲ್ಲಿ ಎಸ್ಡಿಎಂಸಿ ಅಧ್ಯಕ್ಷ ಸದಸ್ಯನೋರ್ವನ ಮೇಲೆ ಹಲ್ಲೆ ನಡೆಸಿದ ಘಟನೆ ಇಲ್ಲಿನ ಶಾಸಕರ ಮಾದರಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ನಡೆದಿದೆ.
ಈ ಪ್ರಕರಣ ರಾಜಕೀಯ ತಿರುವು ಪಡೆದುಕೊಳ್ಳುವ ಸಾಧ್ಯತೆಗಳಿದ್ದು ಸೋಮವಾರ ಮಾಜಿ ಸಚಿವರ ನೇತ್ರತ್ವದಲ್ಲಿ ಪ್ರತಿಭಟನೆ ನಡೆಯಲಿದೆ ಎಂಬ ಮಾಹಿತಿ ಬಲ್ಲ ಮೂಲಗಳಿಂದ ತಿಳಿದುಬಂದಿದೆ.
ಘಟನೆಯ ಹಿನ್ನಲೆ :
ಶಾಸಕರ ಮಾದರಿ ಸರ್ಕಾರಿ ಪ್ರಾಥಮಿಕ ಶಾಲೆಯು ನೂರು ವರ್ಷ ಪೂರೈಸಿದ್ದು, ಶತಮಾನೋತ್ಸವ ಕಾರ್ಯಕ್ರಮ ಆಚರಿಸಲು ಶಾಲಾಡಳಿತ ತೀರ್ಮಾನಿಸಿದ ಹಿನ್ನೆಲೆಯಲ್ಲಿ ಸಾರ್ವಜನಿಕರನ್ನು ಒಳಗೊಂಡ ಸಭೆ ಕರೆಯಲಾಗಿತ್ತು.
ಸಭೆಯಲ್ಲಿ ಸದಸ್ಯ ನೇರಲೆ ರಮೇಶ್ ಎಂಬುವವರು ಶಾಲೆ ನೂರು ವರ್ಷ ಪೂರ್ಣಗೊಳಿಸಿರುವುದರ ಕುರಿತು ಅನುಮಾನಗಳಿವೆ. ನೂರು ವರ್ಷ ಪೂರೈಸಿದ ಕುರಿತು ದಾಖಲೆಗಳು ಶಾಲೆಯಲ್ಲಿ ಇವೆಯೇ ಎಂದು ಪ್ರಶ್ನಿಸಿದ್ದರು. ಸಭೆ ಮುಗಿದ ಬಳಿಕ ಶಾಲಾವರಣದಲ್ಲಿ ಮತ್ತೆ ಪ್ರಸ್ತಾಪವಾಗಿ, ಶಾಲಾಸಮಿತಿ ಅಧ್ಯಕ್ಷ ಅಶ್ವಿನಿಕುಮಾರ್ ಹಾಗೂ ಸದಸ್ಯ ರಮೇಶ್ ನಡುವೆ ಮಾತಿನ ಚಕಮಕಿ ನಡೆಯಿತು.
ನಂತರ ಶಾಲಾಭಿವೃದ್ದಿ ಸಮಿತಿಯ ಅಧ್ಯಕ್ಷ ಅಶ್ವಿನಿಕುಮಾರ್ ಸದಸ್ಯ ರಮೇಶ್ ಮೇಲೆ ಚಪ್ಪಲಿಯಿಂದ ಹಲ್ಲೆ ನಡೆಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ರಮೇಶ್ ಸಾರ್ವಜನಿಕ ಆಸ್ಪತ್ರೆಯಲ್ಲಿ ದಾಖಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.
ತಮ್ಮ ಮೇಲೆ ನಡೆದ ಹಲ್ಲೆ ನಡೆಸಿದ ಆರೋಪಿ ಶಾಲಾ ಸಮಿತಿ ಅಧ್ಯಕ್ಷ ಅಶ್ವಿನಿಕುಮಾರ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ದೂರು ಸಹ ಸಲ್ಲಿಸಿದ್ದಾರೆ.
ಪ್ರತಿ ದೂರು:
ಸಮಿತಿಯ ಸದಸ್ಯ ರಮೇಶ್ ಎಂಬುವವರು ಸಭೆಗೆ ಮದ್ಯಪಾನ ಮಾಡಿ ಬಂದಿದ್ದು, ಸಭೆಯಿಂದ ಹೊರ ನಡೆಯುವಂತೆ ತಿಳಿಸಿದ್ದೆ. ಇದಕ್ಕೆ ಒಪ್ಪದೇ ತಮ್ಮನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಅಶ್ವಿನಿಕುಮಾರ್ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.
ಸಾರ್ವಜನಿಕ ಆಸ್ಪತ್ರೆಯಲ್ಲಿ ದಾಖಲಾಗಿದ್ದು ಚಿಕಿತ್ಸೆ ಪಡೆಯುತ್ತಿರುವ ರಮೇಶ್ ನ್ನು ಬಿಜೆಪಿ ಪಕ್ಷದ ಪ್ರಮುಖರಾದ ಗಣಪತಿ ಬಿಳಗೋಡು, ಎ.ವಿ.ಮಲ್ಲಿಕಾರ್ಜುನ, ಸುರೇಶ್ ಸ್ವಾಮಿರಾವ್, ಶಿವಕುಮಾರ್, ಮಂಜುನಾಥ್ ಎಚ್.ಎಸ್., ಮನೋಧರ ಮತ್ತಿತರರು ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆಯುತ್ತಿದ್ದ ರಮೇಶ್ ಅವರಿಗೆ ಆರೋಗ್ಯ ವಿಚಾರಿಸಿ, ಸಾಂತ್ವನ ಹೇಳಿದರು.
ಒಟ್ಟಾರೆಯಾಗಿ ಶಾಲಾಭಿವೃದ್ದಿ ಸಮಿತಿಯ ಸಭೆಯಲ್ಲಿ ನಡೆದ ಗೊಂದಲವೀಗ ರಾಜಕೀಯ ತಿರುವು ಪಡೆದುಕೊಂಡಿದ್ದು ಸೋಮವಾರ ಮಾಜಿ ಸಚಿವರ ಪ್ರತಿಭಟನೆ ನಡೆಯುತ್ತದೆ ಎನ್ನಲಾಗುತ್ತಿದೆ.