ಶಿವಮೊಗ್ಗ ಜಿಲ್ಲಾ ಪಂಚಾಯತ್ ಸಿಇಒ ಬಂಧನಕ್ಕೆ ಕೋರ್ಟ್ ಆದೇಶ | CEO

ಶಿವಮೊಗ್ಗ ಜಿಲ್ಲಾ ಪಂಚಾಯತ್ ಸಿಇಒ ಬಂಧನಕ್ಕೆ ಕೋರ್ಟ್ ಆದೇಶ


ಅಕ್ರಮವಾಗಿ ಮಣ್ಣು ತೆಗೆದು ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟುಮಾಡಿದ ಆರೋಪ ಸಂಬಂಧ ವರದಿ ಕೇಳಿದರೂ, ವರದಿ ನೀಡುವಲ್ಲಿ ಶಿವಮೊಗ್ಗ ಜಿಲ್ಲಾ ಪಂಚಾಯತಿ ಸಿಇಒ ಸ್ನೇಹಲ್‌ ಲೇಖಂಡೆ ಸುಧಾಕರ್ ವಿಳಂಬ ಮಾಡಿದ್ದಾರೆ ಎಂದು ಅವರನ್ನು ಬಂಧಿಸುವಂತೆ ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯ ಆದೇಶಿಸಿದೆ.

ಮುದ್ದಣ್ಣನ ಕೆರೆಯಿಂದ 500 ಲೋಡು ಮಣ್ಣು ತೆಗೆಯಲು ಅನುಮತಿ ನೀಡಲಾಗಿತ್ತು. ಆದರೆ, ಕಾನೂನು ಬಾಹಿರವಾಗಿ 15,004 ಲೋಡ್ ಮಣ್ಣನ್ನು ತೆಗೆಯಲಾಗಿದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ 71.45 ಲಕ್ಷ ರೂ. ನಷ್ಟವಾಗಿದೆ ಎಂದು ಶಿವಮೊಗ್ಗ ಜಿಲ್ಲಾ ಪಂಚಾಯತಿಯ ಕಾರ್ಯಪಾಲಕ ಇಂಜಿನಿಯರ್ ವರದಿ ಸಲ್ಲಿಸಿದ್ದರು.

ವರದಿ ಆಧಾರದ ಮೇಲೆ ಕರ್ನಾಟಕ ಭೂ ಕಬಳಿಕೆ ವಿಶೇಷ ನ್ಯಾಯಾಲಯ ‘ಕರ್ನಾಟಕ ಭೂ ಕಬಳಿಕೆ ನಿಷೇಧ ಅಧಿನಿಯಮ 2011’ರ ಕಲಂ 09ರ ಅಡಿ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿತ್ತು. ಪ್ರಕರಣ ಸಂಬಂಧ ನವೆಂಬರ್ 24ರೊಳಗೆ ವರದಿ ಸಲ್ಲಿಸುವಂತೆ ಜಿಲ್ಲಾ ಪಂಚಾಯತಿ ಸಿಇಒಗೆ ನಿರ್ದೇಶಿಸಲಾಗಿತ್ತು. ಆದರೆ, ಅವರು ಇದೂವರೆಗೂ ವರದಿ ಸಲ್ಲಿಸಿಲ್ಲ.

ಹೀಗಾಗಿ, ಅವರನ್ನು ಬಂಧಿಸುವಂತೆ ನ್ಯಾಯಾಲಯ ಆದೇಶಿಸಿದೆ. ಫೆಬ್ರವರಿ 16 ರಂದು ಅವರು ನ್ಯಾಯಾಲಯದ ಮುಂದೆ ಖುದ್ದು ಹಾಜರಾಗಬೇಕು. ತಪ್ಪದೆ ವರದಿ ಸಲ್ಲಿಸಬೇಕು. ಅಲ್ಲದೆ, 25,000 ರೂ. ದಂಡ ಕಟ್ಟಿ, ಮುಚ್ಚಳಿಕೆ ಬರೆದುಕೊಟ್ಟರೆ ಅವರನ್ನು ಬಿಡುಗಡೆ ಮಾಡಬಹುದು ಎಂದು ಆದೇಶದಲ್ಲಿ ಹೇಳಿದೆ.

Leave a Reply

Your email address will not be published. Required fields are marked *