ಸರ್ಕಾರಿ ಶಾಲೆ ಉಳಿಸಿ, ಬೆಳೆಸಲು ವಿದ್ಯಾವಂತ ಯುವಸಮೂಹ ಮುನ್ನಲೆಗೆ ಬರುವುದು ಅತ್ಯಗತ್ಯ – ವಲಯ ಅರಣ್ಯಾಧಿಕಾರಿ ರಾಘವೇಂದ್ರ
ಪ್ರಸ್ತುತ ಕಾಲದಲ್ಲಿ ಸರ್ಕಾರಿ ಶಾಲೆಗಳನ್ನು ಉಳಿಸುವಲ್ಲಿ ವಿದ್ಯಾವಂತ ಯುವಕರು ಮುನ್ನಲೆಗೆ ಬರಬೇಕು ಎಂದು ಹೊಸನಗರ ವಲಯ ಅರಣ್ಯಾಧಿಕಾರಿ ರಾಘವೇಂದ್ರ ರವರು ಹೇಳಿದರು.
ಹೊಸನಗರ ತಾಲೂಕಿನ ಮಾರುತಿಪುರ ಗ್ರಾಪಂ ವ್ಯಾಪ್ತಿಯ ಹೊವಿನಕೋಣೆ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಪೋಸ್ಟ್ ಮ್ಯಾನ್ ಸುದ್ದಿ ಬಳಗದ ವತಿಯಿಂದ ಆಯೋಜಿಸಲಾಗಿದ್ದ “ಕನ್ನಡ ಶಾಲೆಯ ಅಭಿಮಾನ, ಸುಣ್ಣ ಬಣ್ಣದ ಅಭಿಯಾನ” ಕಾರ್ಯಕ್ರಮಕ್ಕೆ ಬಣ್ಣ ಹೊಡೆಯುವ ಮೂಲಕ ಚಾಲನೆ ನೀಡಿ ಮಾತನಾಡಿ ಹಿಂದಿನ ಸರ್ಕಾರಿ ಶಾಲೆಯಲ್ಲಿ ಶಿಕ್ಷಣ ಪಡೆದು ಉನ್ನತ ಉದ್ಯೋಗದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಯುವ ಸಮೂಹ ಇಂದಿನ ಸರ್ಕಾರಿ ಶಾಲೆಗಳ ಅಭಿವೃದ್ಧಿಯ ಬಗ್ಗೆ ಚಿಂತನೆ ನಡೆಸಿ ಆಲೋಚಿಸುವ ಅಗತ್ಯವಿದೆ.
ಸರ್ಕಾರಿ ಶಾಲೆಗಳಲ್ಲಿ ಗುಣ ಮಟ್ಟದ ಶಿಕ್ಷಕರುಗಳಿದ್ದು ಬಡ ಮಕ್ಕಳ ವಿದ್ಯಾರ್ಜನೆ ಕೇಂದ್ರಗಳಾಗಿವೆ. ಆದರೆ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಮೂಲಭೂತ ಸೌಕರ್ಯಗಳು ದೊರೆಯುವಂತಾಗಬೇಕು ಈ ದೆಸೆಯಲ್ಲಿ ಶಾಲೆಗಳಿಗೆ ಹೊಸ ಚೈತನ್ಯ ನೀಡಲು ವಿದ್ಯಾವಂತ ಯುವ ಸಮೂಹ ಮುಂದಾಗುವ ಮೂಲಕ ಖಾಸಗಿ ಶಾಲೆಗಳಿಗಿಂತ ಸರ್ಕಾರಿ ಶಾಲೆಗಳು ಯಾವುದರಲ್ಲೂ ಕಡಿಮೆಯಿಲ್ಲ ಎಂಬುವುದನ್ನು ಸಾಬೀತುಪಡಿಸಬೇಕಾಗಿದೆ ಎಂದರು.
ಸುಣ್ಣಬಣ್ಣ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಹೊಸನಗರ ಪಿಎಸ್‌ಐ ಶಿವಾನಂದ್ ಕೆ ಮಾತನಾಡಿ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಇರುವಷ್ಟು ಧೈರ್ಯ ಮತ್ತು ನೈತಿಕತೆ ಮತ್ಯಾರಿಗೂ ಇರಲು ಸಾಧ್ಯವಿಲ್ಲ,
ಸರ್ಕಾರ ಶಾಲೆಗಳಿಗೆ ಮೂಲಭೂತ ಸೌಲಭ್ಯ ಕಲ್ಪಿಸಿದರೆ, ಮುಚ್ಚುವ ಸ್ಥಿತಿಯಲ್ಲಿರುವ ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳನ್ನು ಉಳಿಸಿಕೊಳ್ಳಬಹುದಾಗಿದೆ ಎಂದರು.
ಪೋಸ್ಟ್ ಮ್ಯಾನ್ ಸುದ್ದಿ ಬಳಗ ಆಯೋಜಿಸಿರುವ ಸರ್ಕಾರಿ ಶಾಲೆಗಳಿಗೆ ಸುಣ್ಣ ಬಣ್ಣ ಅಭಿಯಾನ ಕಾರ್ಯಕ್ರಮ ಎಲ್ಲಾರಿಗೂ ಮಾದರಿಯಾಗಿದೆ. ಸರ್ಕಾರದ ನಾಲ್ಕನೇ ಅಂಗವಾಗಿರುವ ಪತ್ರಿಕಾ ವೃತ್ತಿಯಲ್ಲಿರುವ ಈ ಬಳಗದ ಸ್ನೇಹಿತರು ಇಂತಹ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಕೊಂಡಿರುವುದು ಹೆಮ್ಮೆಯ ಸಂಗತಿಯಾಗಿದೆ.
ಈ ಬಳಗದ ವತಿಯಿಂದ ಹೊಸನಗರ ತಾಲೂಕಿನ 21 ಶಾಲೆಗಳಿಗೆ ಉಚಿತವಾಗಿ ಸುಣ್ಣಬಣ್ಣ ಮಾಡಿಕೊಡುವ ಅಭಿಯಾನದಲ್ಲಿ ಈಗಾಗಲೇ ಏಳು ಶಾಲೆಗಳಿಗೆ ಬಣ್ಣದ ರಂಗು ನೀಡಲಾಗಿದೆ. ಪೋಸ್ಟ್ ಮ್ಯಾನ್ ಬಳಗದ ಈ ಕಾರ್ಯ ಶ್ಲಾಘನೀಯವಾಗಿದೆ ಎಂದರು.
ಈ ಸಂಧರ್ಭದಲ್ಲಿ ಪೋಸ್ಟ್ ಮ್ಯಾನ್ ಸುದ್ದಿ ಸಂಸ್ಥೆಯ ರಫ಼ಿ ರಿಪ್ಪನ್‌ಪೇಟೆ ,ಸಬಾಸ್ಟಿಯನ್ , ಹಸನಬ್ಬ , ಸಚಿನ್ ಗೌಡ ಎಸ್ ಡಿ ಎಂಸಿ ಅಧ್ಯಕ್ಷರಾದ ರಮೇಶ್, ಶಾಲೆಯ ಮುಖ್ಯೋಪಾಧ್ಯಾಯ ತೀರ್ಥಕುಮಾರ್ ,ಶಿಕ್ಷಕರಾದ ಅಲ್ತಾಫ಼್ ಅಹಮದ್, ಹಿರಿಯ ವಿದ್ಯಾರ್ಥಿಗಳ ಸಂಘದ ಪದಾಧಿಕಾರಿಗಳು ,ಎಸ್ ಡಿಎಂಸಿ ಸದಸ್ಯರೂ ಸೇರಿದಂತೆ ಗ್ರಾಮಸ್ಥರು ಇದ್ದರು.