ಚಿಕ್ಕಜೇನಿ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಯ ಅಪೂರ್ವ ಸಾಧನೆ -ಪರಿಸರ ಸ್ನೇಹಿ ಸೋಲಾರ್ ಹುಲ್ಲು ಕಟಾವ್ ಯಂತ್ರ ರಾಜ್ಯಮಟ್ಟಕ್ಕೆ ಆಯ್ಕೆ
ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಚಿಕ್ಕಜೇನಿ ಸರಕಾರಿ ಪ್ರೌಡಶಾಲೆಯ 9ನೇ ತರಗತಿಯ ವಿದ್ಯಾರ್ಥಿ ಅಭಿಷೇಕ್ ಸಿದ್ಧಪಡಿಸಿರುವ ಪರಿಸರ ಸ್ನೇಹಿ ಸೌರ ಆಧಾರಿತ ಹುಲ್ಲು ಕಟಾವ್ ಯಂತ್ರ ರಾಜ್ಯಮಟ್ಟದ ವಿಜ್ಞಾನ ವಸ್ತು ಪ್ರದರ್ಶನಕ್ಕೆ ಆಯ್ಕೆಯಾಗಿದೆ.
ಮಂಗಳವಾರ ಶಿವಮೊಗ್ಗದಲ್ಲಿ ನಡೆದ ಜಿಲ್ಲಾ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಅಭಿಷೇಕ್ ಸಿದ್ದಪಡಿಸಿರುವ ಸೋಲಾರ್ ಹುಲ್ಲು ಕಟಾವ್ ಯಂತ್ರ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದೆ
ಮನೆಯಲ್ಲಿಯೇ ಲಭ್ಯವಿದ್ದ ಸೋಲಾರ್ ಪ್ಲೇಟ್,ಕಟ್ ಪೀಸ್ ಕಬ್ಬಿಣದ ಸಹಾಯದಿಂದ ಒಂದು ಸಾವಿರ ರೂ. ಖರ್ಚಿನಲ್ಲಿ ಈ ಯಂತ್ರವನ್ನು ಸಿದ್ಧಪಡಿಸಲಾಗಿದ್ದು,ವಿಜ್ಞಾನದ ಶಿಕ್ಷಕ ಮಹೇಶ್ ವಿದ್ಯಾರ್ಥಿ ಅಭಿಷೇಕ್ ಗೆ ಮಾರ್ಗದರ್ಶನ ನೀಡಿದ್ದಾರೆ.ಮನೆಯ ಸುತ್ತಮುತ್ತ ಬೆಳೆದಂತಹ ಹುಲ್ಲುಗಳನ್ನು ಕಡಿಮೆ ವೆಚ್ಚದ ಈ ಪರಿಸರ ಸ್ನೇಹಿ ಸೋಲಾರ್ ಯಂತ್ರದ ಮೂಲಕ ಕಟಾವ್ ಕಾರ್ಯಕ್ಕೆ ಬಳಸಬಹುದಾಗಿದೆ.
ಕಾರಕ್ಕಿ ನಿವಾಸಿಗಳಾದ ಸತೀಶ್ ಹಾಗೂ ಆಶಾ ದಂಪತಿಗಳ ಪುತ್ರನಾದ ಅಭಿಷೇಕ್ 9ನೇ ತರಗತಿಯಲ್ಲಿ ವ್ಯಾಸಾಂಗ ಮಾಡುತಿದ್ದಾನೆ.
ಈ ಬಗ್ಗೆ ಮಾತನಾಡಿದ ವಿದ್ಯಾರ್ಥಿ ಅಭಿಷೇಕ್ ಇಂದಿನ ಪೀಳಿಗೆಯಲ್ಲಿ ಪ್ರಮುಖ ಸಮಸ್ಯೆಗಳೆಂದರೆ ಮಾಲಿನ್ಯ, ವಿದ್ಯುತ್ ಕಡಿತ,ದುಬಾರಿ ತೈಲ ಬೆಲೆ ಹೀಗಾಗಿ ಈ ಸಮಸ್ಯೆಗಳಿಂದ ಹೊರಬರಲು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವ ಸಾಧನದ ಬಗ್ಗೆ ಯೋಚಿಸಿದ್ದೇನೆ. ಆದ್ದರಿಂದ ನಾನು ಸೌರಚಾಲಿತ ಹುಲ್ಲು ಕಟ್ಟರ್ ಯಂತ್ರ ಅಭಿವೃದ್ಧಿ ಪಡಿಸುವ ಇಂಗಿತ ವ್ಯಕ್ತಪಡಿಸಿದಾಗ ಶಾಲೆಯ ಮುಖ್ಯೋಪಾಧ್ಯಾಯರಾದ ಶಿವಾಜಿ ಹಾಗೂ ವಿಜ್ಞಾನ ಶಿಕ್ಷಕರಾದ ಮಹೇಶ್ ಉತ್ತಮ ರೀತಿಯಲ್ಲಿ ಸ್ಪಂದಿಸಿ ,ಅಗತ್ಯ ಮಾರ್ಗದರ್ಶಗಳನ್ನು ನೀಡಿದ್ದರಿಂದ ಸೌರಶಕ್ತಿಯಿಂದ ಸಂಪೂರ್ಣ ಸ್ವಯಂಚಾಲಿತವಾಗಿ ಕಾರ್ಯನಿರ್ವಹಿಸುವ ಯಂತ್ರವನ್ನು ಅಭಿವೃದ್ಧಿ ಪಡೆಸಿದ್ದೇನೆ ಎಂದರು.
ಈ ಯಂತ್ರಕ್ಕೆ DC ಮೋಟಾರ್ ಮಾತ್ರ ನಾನು ಖರೀದಿ ಮಾಡಿದ್ದೇನೆ ಉಳಿದಂತೆ ಸೋಲಾರ್ ಪ್ಲೇಟ್ , ಕಬ್ಬಿಣ ,ಬ್ಯಾಟರಿ ಎಲ್ಲವೂ ಮನೆಯಲ್ಲಿ ಇರುವುದನ್ನೇ ಬಳಸಿದ್ದೇನೆ ಹೀಗಾಗಿ ಪ್ರತಿಯೊಬ್ಬರು ಇದನ್ನು ಮನೆಯಲ್ಲಿಯೇ ಅಭಿವೃದ್ಧಿ ಪಡಿಸಿಕೊಂಡು ತಮ್ಮ ಮನೆಯ ಸುತ್ತಮುತ್ತ ಪ್ರದೇಶಗಳನ್ನು ಸ್ವಚ್ಚವಾಗಿಟ್ಟುಕೊಳ್ಳಬಹುದು, ರಾಜ್ಯ ಮಟ್ಟದ ಸ್ಪರ್ಧೆಗೆ ಇದನ್ನು ಇನ್ನೂ ಹೆಚ್ಚಿನ ರೀತಿಯಲ್ಲಿ ಅಭಿವೃದ್ಧಿ ಪಡಿಸುತ್ತೇನೆ ಎಂದರು.
ಶಾಲೆಯ ವಿಜ್ಞಾನ ವಿಭಾಗದ ಶಿಕ್ಷಕ ಮಹೇಶ್ ಮಾತನಾಡಿ ವಿದ್ಯಾರ್ಥಿಗಳಲ್ಲಿ ಕಲಿಕೆಯ ಬಗ್ಗೆ ಆಸಕ್ತಿ ಇದ್ದರೆ ಎಂತಹದನ್ನು ಸಾಧಿಸಿ ತೋರಿಸಬಹುದು ಎನ್ನುವುದಕ್ಕೆ ನನ್ನ ವಿದ್ಯಾರ್ಥಿ ಅಭಿಷೇಕ್ ಸಾಕ್ಶಿಯಾಗಿದ್ದಾನೆ,ಜಿಲ್ಲಾ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಸೋಲಾರ್ ಹುಲ್ಲು ಕಟಾವ್ ಯಂತ್ರ ಎಲ್ಲಾ ತೀರ್ಪುಗಾರರ,ವೀಕ್ಷಕರ ಗಮನ ಸೆಳೆದು ಪ್ರಥಮ ಸ್ಥಾನ ಗಳಿಸಿದೆ. ರಾಜ್ಯಮಟ್ಟದ ವಸ್ತು ಪ್ರದರ್ಶನಕ್ಕೆ ಈ ಯಂತ್ರವನ್ನು ಇನ್ನಷ್ಟೂ ಅಭಿವೃದ್ಧಿ ಪಡಿಸಲು ವಿದ್ಯಾರ್ಥಿ ಅಭಿಷೇಕ್ ಇಂಗಿತ ವ್ಯಕ್ತಪಡಿಸಿದ್ದು ಅಗತ್ಯ ಸಲಹೆ ನೀಡುತ್ತೇನೆ ಎಂದರು.
ಹಳ್ಳಿಗಾಡಿನ ಗ್ರಾಮೀಣ ಪ್ರತಿಭೆ ಅಭಿಷೇಕ್ ರವರಿಗೆ ಪೋಸ್ಟ್ ಮ್ಯಾನ್ ಸುದ್ದಿ ವಾಹಿನಿಯ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂಧರ್ಭದಲ್ಲಿ ಚಿಕ್ಕಜೇನಿ ಸರ್ಕರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಶಿವಾಜಿ ,ಕನ್ನಡ ಶಿಕ್ಷಕರಾದ ಎನ್ ಡಿ ಹೆಗಡೆ ,ಪೋಸ್ಟ್ ಮ್ಯಾನ್ ಸುದ್ದಿವಾಹಿನಿಯ ರಫ಼ಿ ರಿಪ್ಪನ್‌ಪೇಟೆ ,ಉಮೇಶ್ ಜಾಗದ್ದೆ , ಕೆ ಲೈವ್ ನ್ಯೂಸ್ ವರದಿಗಾರ ಆನಂದ್ ಮೆಣಸೆ , ವಿಜ್ಞಾನ ಶಿಕ್ಷಕ ಮಹೇಶ್ , ಎಸ್ ಡಿಎಂಸಿ ಅಧ್ಯಕ್ಷರಾದ ಉಮೇಶ್ ,ಆಶಾ ಹಾಗೂ ಇನ್ನಿತರರಿದ್ದರು.