Thirthahalli | ಗಣಿ ಅಧಿಕಾರಿ ಪ್ರತಿಮಾ ಕೊಲೆ ಪ್ರಕರಣ – ಅಂತ್ಯಕ್ರಿಯೆಗೂ ಮುನ್ನ ಆರೋಪಿಯನ್ನು ಬಂಧಿಸಿದ ಪೊಲೀಸ್
ತೀರ್ಥಹಳ್ಳಿ : ಗಣಿ ಮತ್ತು ಭೂ ವಿಜ್ಞಾನ ಅಧಿಕಾರಿ ಪ್ರತಿಮಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿಂತೆ ಬೆಂಗಳೂರು ಪೊಲೀಸರು ಓರ್ವ ಶಂಕಿತ ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದಾರೆ.
ಈತ ಪ್ರತಿಮಾ ಅವರ ಹಳೆ ಕಾರು ಚಾಲಕನಾಗಿದ್ದ. ಹಲವು ವರ್ಷಗಳಿಂದ ಕಾರು ಚಾಲಕನಾಗಿದ್ದ ಕಿರಣ್ ನನ್ನು ಪ್ರತಿಮಾ ಅವರು ತೆಗೆದುಹಾಕಿದ್ದರು. ಕೆಲಸದಿಂದ ತೆಗದುಹಾಕಿದ್ದಕ್ಕೆ ಕೊಲೆ ಮಾಡಿರುವುದಾಗಿ ಅನುಮಾನ ಮೂಡಿದೆ.
ಅಕ್ರಮ ಕಲ್ಲು ಗಣಿಗಾರಿಕೆ ಮೇಲೆ ರೇಡ್ ಹೋಗುವ ಮಾಹಿತಿಯನ್ನು ಕಿರಣ್ ಲೀಕ್ ಮಾಡುತ್ತಿದ್ದು ಈ ಕಾರಣಕ್ಕೆ ಪ್ರತಿಮಾ ಅವರು ಕಿರಣ್ ಗೆ ಎಚ್ಚರಿಕೆ ನೀಡಿದ್ದರು. ಮಾತ್ರವಲ್ಲದೇ ಕಾರು ಅಕ್ಸಿಡೆಂಟ್ ಮಾಡಿರುವ ಬಗ್ಗೆಯೂ ಮಾಹಿತಿ ಇದ್ದು ಈ ಎಲ್ಲಾ ಕಾರಣಗಳಿಗೆ ಪ್ರತಿಮಾ ಆತನನ್ನು ಕೆಲಸದಿಂದ ತೆಗೆದುಹಾಕಿದ್ದರು ಎನ್ನಲಾಗಿದೆ.
ಇನ್ನು ಕಿರಣ್ ಎಸ್ಕೇಪ್ ಆಗಿ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದು ಅಲ್ಲದೆ ವಿಚಾರಣೆಯ ವೇಳೆ ತಪ್ಪೊಪ್ಪಿಕೊಂಡಿದ್ದಾನೆ. 4 ವರ್ಷದಿಂದ ಕಾರು ಚಾಲಕನಾಗಿದ್ದ ಕಿರಣ್, ಬೇಜವಾಬ್ದಾರಿಯಿಂದ ಕಾರು ಓಡಿಸುತ್ತಿದ್ದನು. ಗುತ್ತಿಗೆ ಆಧಾರದಲ್ಲಿ ಚಾಲಕ ವೃತ್ತಿ ಮಾಡುತ್ತಿದ್ದ ಕಿರಣ್ ಕಳೆದ ತಿಂಗಳು ಹೊಸ ಸರ್ಕಾರಿ ಕಾರನ್ನು ಅಪಘಾತ ಮಾಡಿದ್ದನು. ಅಪಘಾತದ ನಂತರ ಕಚೇರಿಯಲ್ಲೇ ಕಾರು ಬಿಟ್ಟು ತೆರಳಿದ್ದನು.
ಕಿರಣ್ ನಡವಳಿಕೆಯಿಂದ ಕೋಪಗೊಂಡಿದ್ದ ಪ್ರತಿಮಾ, 10 ದಿನಗಳ ಹಿಂದೆ ಕೆಲಸದಿಂದ ತೆಗೆದು ಹಾಕಿದ್ದರು. ಈ ವೇಳೆ ಪ್ರತಿಮಾ ಕಾಲಿಗೆ ಬಿದ್ದು ಕೆಲಸಕ್ಕೆ ಸೇರಿಸಿಕೊಳ್ಳುವಂತೆ ಬೇಡಿಕೊಂಡಿದ್ದನು. ಆದರೆ ಪ್ರತಿಮಾ ಅವರು ಕಿರಣ್‍ನನ್ನು ಮತ್ತೆ ಕೆಲಸಕ್ಕೆ ಸೇರಿಸಿಕೊಳ್ಳಲು ನಿರಾಕರಿಸಿದ್ದರು. ಇದೇ ಕಾರಣಕ್ಕೆ ಪ್ರತಿಮಾ ಮೇಲೆ ದ್ವೇಷಕಾರಿದ್ದನು.
ಕೊಲೆ ದಿನವೂ ಪ್ರತಿಮಾ ಕಾಲಿಗೆ ಬಿದ್ದು ಕೆಲಸಕ್ಕೆ ಸೇರಿಸಿಕೊಳ್ಳುವಂತೆ ದುಂಬಾಲು ಬಿದ್ದಿದ್ದನು. ಆದರೆ ಆಕೆ ಅದನ್ನು ತಿರಸ್ಕರಿಸಿದ್ದರಿಂದ ಶನಿವಾರ ಮನೆ ಬಳಿಯೇ ಕಾದು ಕುಳಿತು ಹೊಂಚು ಹಾಕಿ ಕೊಲೆ ಮಾಡಿ ಕಿರಣ್ ಎಸ್ಕೇಪ್ ಆಗಿದ್ದನು.
ಒಕ್ಕಲಿಗ ಸಂಪ್ರದಾಯದಂತೆ ನಡೆದ ಅಂತ್ಯಕ್ರಿಯೆ
ತೀರ್ಥಹಳ್ಳಿ ಪಟ್ಟಣದ ಸಮೀಪದ ತುಡುಕಿಯಲ್ಲಿ ಒಕ್ಕಲಿಗ ಸಂಪ್ರದಾಯದಂತೆ ಅಂತಿಮ ವಿಧಿ ವಿಧಾನ ನಡೆಸಿ ನಂತರ ಕುರುವಳ್ಳಿಯ ಹಿಂದೂ ರುದ್ರ ಭೂಮಿಯಲ್ಲಿ ಪ್ರತಿಮಾ ಪುತ್ರ ಪಾರ್ಥನಿಂದ ಮೃತದೇಹಕ್ಕೆ ಅಗ್ನಿ ಸ್ಪರ್ಶ ಮಾಡಿಸಲಾಯಿತು.
ಈ ವೇಳೆ ಕುಟುಂಬಸ್ಥರು ಮಾತನಾಡಿ ಪ್ರತಿಮಾ ಸಾವಿಗೆ ಕಾರಣರಾದವರಿಗೆ ಸೂಕ್ತ ಶಿಕ್ಷೆ ನೀಡಬೇಕು. ದಕ್ಷ ಅಧಿಕಾರಿ ಹಾಗೂ ಪ್ರತಿಭಾವಂತ ಹೆಣ್ಣು ಮಗುವನ್ನು ಕಳೆದುಕೊಂಡಿದ್ದೇವೆ. ಸರ್ಕಾರ ಮಹಿಳಾ ಅಧಿಕಾರಿಗಳಿಗೆ ಸೂಕ್ತ ಭದ್ರತೆ ನೀಡಬೇಕು. ಸುಳ್ಳು ಸುದ್ಧಿಗಳಿಗೆ ಜನರು ಕಿವಿಕೊಡಬೇಡಿ. ಅವರ ಕುಟುಂಬ ಅನ್ಯೋನ್ಯ ವಾಗಿತ್ತು. ದಂಪತಿಗಳು ತುಂಬಾ ಚನ್ನಾಗಿ ಇದ್ದರು. ಇಂತಹ ದಕ್ಷ ಅಧಿಕಾರಿಗಳನ್ನು ನಾವು ಕಳೆದುಕೊಂಡ ಬಡವರಾಗಿದ್ದೇವೆ. ಎಲ್ಲರೂ ಪ್ರತಿಮಾ ಮಾದರಿಯಾಗಿದ್ದರು ಎಂದರು.
ಪ್ರತಿಮಾ ಅಂತ್ಯಸಂಸ್ಕಾರದಲ್ಲಿ ಬಂಧು- ಬಳಗದವರು, ಗ್ರಾಮಸ್ಥರು ಸೇರಿ ನೂರಾರು ಜನ ಭಾಗಿಯಾಗಿದ್ದರು.