Shivamogga| ಅರಣ್ಯಾಧಿಕಾರಿಗಳ ಕರ್ತವ್ಯಕ್ಕೆ ತೊಂದರೆ ನೀಡಿದ ಆರಗ ಜ್ಞಾನೇಂದ್ರ ವಿರುದ್ಧ ಕ್ರಮಕ್ಕೆ ಆಗ್ರಹ|
ಕಾಡು ಕೋಣ, ಜಿಂಕೆ, ಅಕ್ರಮ ನಾಡು ಬಂದೂಕು, ಶ್ರೀಗಂಧ ಸಂಗ್ರಹಣೆ ಮಾಡಿದ್ದ ಆರೋಪಿಗಳನ್ನು ರಕ್ಷಿಸಲು ಶಾಸಕ ಆರಗ ಜ್ಞಾನೇಂದ್ರ ಅರಣ್ಯಾಧಿಕಾರಿಗಳ ಬೆದರಿಸಿ ದರ್ಪ ಮೆರೆದಿದ್ದಾರೆ. ಕೂಡಲೇ ಅವರನ್ನು ಬಂಧಿಸುವಂತೆ ಒತ್ತಾಯಿಸಿ ಕೆಪಿಸಿಸಿ ವನ್ಯಜೀವಿ ವಿಭಾಗದಿಂದ ಶಿವಮೊಗ್ಗ ಡಿಸಿಎಫ್ಗೆ ಶುಕ್ರವಾರ ಮನವಿ ಸಲ್ಲಿಸಲಾಯಿತು.
ತೀರ್ಥಹಳ್ಳಿ ತಾಲ್ಲೂಕಿನ ಹಣಗೆರೆಕಟ್ಟೆ ಬಳಿಯ ಬಸವನಗದ್ದೆ ಗ್ರಾಮದ ಮನೆಯೊಂದರಲ್ಲಿ ಅಕ್ರಮವಾಗಿ ಕಾಡುಕೋಣ, ಜಿಂಕೆ ಕೊಂಬುಗಳು, ನಾಡಬಂದೂಕು ಹಾಗೂ ಗಂಧದ ತುಂಡುಗಳನ್ನು ಮನೆಯ ನೆಲಮಾಳಿಗೆಯಲ್ಲಿ ಸಂಗ್ರಹಿಸಲ್ಪಟ್ಟಿದ್ದ ಬಗ್ಗೆ ಬಂದ ದೂರು ಆಧರಿಸಿ ಅರಣ್ಯಾಧಿಕಾರಿ ಮನೆ ತಪಾಸಣೆಗೆ ಮುಂದಾದಾಗ ಅಲ್ಲಿಗೆ ಬಂದ ಶಾಸಕ ಆರಗ ಜ್ಞಾನೇಂದ್ರ ಗೂಂಡಾ ವರ್ತನೆ ತೋರಿದ್ದಾರೆ ಎಂದು ಕೆಪಿಸಿಸಿ ಮುಖಂಡರು ಆರೋಪಿಸಿದರು.
ಪ್ರಕರಣದಲ್ಲಿ ಅರಣ್ಯಾಧಿಕಾರಿಗಳು ಎಫ್ಐಆರ್ ದಾಖಲಿಸುವ ಮೊದಲೇ ಶಾಸಕರು ಬಿ ರೀಪೋರ್ಟ್ ಕೊಟ್ಟಿದ್ದಾರೆ. ಅವರ ವರ್ತನೆ ನೋಡಿದರೆ, ಮುಂದಿನ ದಿನಗಳಲ್ಲಿ ಕಾಡುಪ್ರಾಣಿಗಳ ಬೇಟೆಗಾರರು ಯಾವುದೇ ಭಯವಿಲ್ಲದೇ ಪ್ರಾಣಿಗಳನ್ನು ಕೊಂದು ಅದರ ಮಾಂಸ ಮತ್ತು ಅಂಗಗಳನ್ನು ಮಾರಿಕೊಳ್ಳುವ ದಿನಗಳು ದೂರ ಇಲ್ಲ. ಪ್ರಾಣಿಗಳ ಕೊಂಬು ಮತ್ತು ಅಂಗಗಳನ್ನು ಸಂಗ್ರಹಿಸಿದ್ದ ಆರೋಪಿಯನ್ನು ಬಂಧಿಸಿ ಜೈಲಿಗೆ ಕಳುಹಿಸಬೇಕು. ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿ ಆರೋಪಿಯ ರಕ್ಷಿಸಿದ ತೀರ್ಥಹಳ್ಳಿ ಶಾಸಕರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಯಿತು.
ಈ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಯದರ್ಶಿ ಕೆ.ದೇವೇಂದ್ರಪ್ಪ, ಉತ್ತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವಕುಮಾರ್, ಮಹಾನಗರ ಪಾಲಿಕೆಯ ವಿರೋಧ ಪಕ್ಷದ ನಾಯಕಿ ಮೆಹಕ್ ಷರೀಪ್, ಎಸ್.ಎನ್.ಮೂರ್ತಿ, ಪರ್ವಿಜ್ ಅಹಮ್ಮದ್, ಮೊಹಮ್ಮದ್ ಹುಸೇನ್, ಎಸ್.ಎ. ಬಾಬು, ಸಂದೀಪ್, ಮಾನಸ, ಬಾಲಾಜಿ, ಷಾಮೀರ್ಖಾನ್, ಯಮುನಾ ರಂಗೇಗೌಡ ಇದ್ದರು.
 
                         
                         
                         
                         
                         
                         
                         
                         
                         
                        
