Shivamogga |ಖಾಸಗಿ ಶಾಲೆಯಲ್ಲಿ ಶಿಕ್ಷಕನಿಂದ ವಿದ್ಯಾರ್ಥಿ ಮೇಲೆ ಹಲ್ಲೆ : ಆಸ್ಪತ್ರೆಗೆ ದಾಖಲು

ಖಾಸಗಿ ಶಾಲೆಯಲ್ಲಿ ಶಿಕ್ಷಕನಿಂದ ವಿದ್ಯಾರ್ಥಿ ಮೇಲೆ ಹಲ್ಲೆ : ಆಸ್ಪತ್ರೆಗೆ ದಾಖಲು

ಕ್ಷುಲ್ಲಕ ಕಾರಣಕ್ಕೆ ಶಿಕ್ಷಕರೊಬ್ಬರು ವಿದ್ಯಾರ್ಥಿ ಮೇಲೆ ಹಲ್ಲೆ ಮಾಡಿದ ಘಟನೆ ಶಿವಮೊಗ್ಗದ ಸಾಂದೀಪನಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದಿದೆ.

ಶಿಕ್ಷಕ ಲೋಕೇಶ್ ಎಂಬುವವರು, 10ನೇ ತರಗತಿ ವಿದ್ಯಾರ್ಥಿ ಧನುಷ್ ಮೇಲೆ ಕೋಲಿನಿಂದ ಹಲ್ಲೆ ಮಾಡಿದ್ದಾರೆ. ಇದರಿಂದ ವಿದ್ಯಾರ್ಥಿ ಕಾಲು, ತೊಡೆ, ಬೆನ್ನಿಗೆ ಬಾಸುಂಡೆ ಬಂದಿದೆ. ಗಾಯಾಳು ವಿದ್ಯಾರ್ಥಿಗೆ ಶಿವಮೊಗ್ಗದ ಮೆಗ್ಗಾನ್ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಸಾಂದೀಪನಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿಜ್ಞಾನ ವಸ್ತು ಪ್ರದರ್ಶನ ಏರ್ಪಡಿಸಲಾಗಿತ್ತು. ಈ ವೇಳೆ ವಿದ್ಯಾರ್ಥಿ ಧನುಷ್ ತಾಯಿ ಕೂಡ ಬಂದಿದ್ದರು. ವಿದ್ಯಾರ್ಥಿ ತನ್ನ ತಾಯಿಯ ಮೊಬೈಲ್ ತೆಗೆದುಕೊಂಡು ತಾನು ತಯಾರಿಸಿದ್ದ ವಿಜ್ಞಾನದ ಮಾಡೆಲ್ ಗಳನ್ನು ಚಿತ್ರೀಕರಿಸಿದ್ದ. ಇದೇ ವಿಚಾರವಾಗಿ ಕೋಪಗೊಂಡ ಶಿಕ್ಷಕ ಲೋಕೇಶ್ ವಿದ್ಯಾರ್ಥಿಯನ್ನು ಮನಬಂದಂತೆ ಹೊಡೆದಿದ್ದಾರೆ. ಗಂಭೀರವಾಗಿ ಹಲ್ಲೆಗೊಳಗಾಗಿರುವ ವಿದ್ಯಾರ್ಥಿಯನ್ನು ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಗನ ಮೇಲೆ ಮನಬಂದಂತೆ ಹೊಡೆದಿದ್ದಕ್ಕೆ ಪೋಷಕರು ಶಿಕ್ಷಕನನ್ನು ಪ್ರಶ್ನಿಸಿದ್ದಾರೆ. ಶಿಕ್ಷಕ ಲೋಕೇಶ್ ಪೋಷಕರ ಮೇಲೂ ದರ್ಪ ತೋರಿದ್ದಾರೆ. ಶಿಕ್ಷಕನ ವರ್ತನೆಗೆ ಪೋಷಕರು ಆಡಳಿತ ಮಂಡಳಿಗೆ ದೂರಿದ್ದಾರೆ. ಅಲ್ಲದೇ ವಿನೋಬಾನಗರ ಠಾಣೆಗೂ ದೂರು ನೀಡಿದ್ದಾರೆ.

Leave a Reply

Your email address will not be published. Required fields are marked *