ಕನಕದಾಸರು ಜಾತ್ಯತೀತ ದಾರ್ಶನಿಕರಾಗಿದ್ದರು – ಜನಾರ್ಧನ್ ಬಿ ನಾಯಕ್
ರಿಪ್ಪನ್ ಪೇಟೆ : ಜಗತ್ತು ಕಂಡ ಸರ್ವ ಶ್ರೇಷ್ಠ ಮಾನವತಾವಾದಿ ಜಾತಿ ವ್ಯವಸ್ಥೆಯನ್ನು ವಿರೋಧಿಸುತ್ತಿದ್ದ ಕನಕದಾಸರು ಕುಲ ಕುಲ ಕುಲವೆಂದು ಹೊಡೆದಾಡದಿರಿ, ನಿಮ್ಮ ಕುಲದ ನೆಲೆ ಏನಾದರೂ ಬಲ್ಲಿರಾ? ಎಂದು ಹಾಡಿ ಜಾತ್ಯತೀತ ದಾರ್ಶನಿಕರಾಗಿ ಇತಿಹಾಸದಲ್ಲಿ ಅಚ್ಚಳಿಯದೇ ಉಳಿದಿದ್ದಾರೆ ಎಂದು ಉಪನ್ಯಾಸಕ ಜನಾರ್ಧನ್.ಬಿ.ನಾಯಕ್ ಹೇಳಿದರು.
ಗುರುವಾರ ಪಟ್ಟಣದ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡ ಕನಕ ಜಯಂತಿ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.
ಸಮಾಜದಲ್ಲಿ ಸಮಾನತೆ ಪ್ರತಿಪಾದಿಸಿದ ದಾಸ ಶ್ರೇಷ್ಠ ಕನಕದಾಸರನ್ನು ಕೇವಲ ಒಂದು ಜಾತಿಗೆ ಸೀಮಿತವಾಗಿ ಮಾಡದೇ ಮನುಕುಲದ ಉದ್ಧಾರಕ ಎಂದು ಭಾವಿಸಬೇಕು. ಕನಕರು ಓರ್ವ ತತ್ವಜ್ಞಾನಿಯಾಗಿ, ಸಮಾಜ ಸುಧಾರಕರಾಗಿ, ದಾಸ ಶ್ರೇಷ್ಠರಾಗಿ, ಕೀರ್ತನೆಕಾರರಾಗಿ ಅವರು ನೀಡಿದ ಕೊಡುಗೆಗಳು ಸರ್ವಕಾಲಿಕ ಸತ್ಯವಾಗಿದೆ ಎಂದರು.
ಉಪನ್ಯಾಸಕ ಈಶ್ವರ್ ಮಾತನಾಡಿ, ಕನಕ ದಾಸರ ವಿಚಾರಧಾರೆಗಳನ್ನು ಪ್ರತಿಯೊಬ್ಬರು ಅರಿಯಬೇಕಿದೆ. ಈ ನಿಟ್ಟಿನಲ್ಲಿ ಕನಕದಾಸರ ಜಯಂತಿ ಆಚರಣೆ ಮಾಡುವುದು ಮತ್ತು ಮಕ್ಕಳು ಸಹ ಕನಕದಾಸರ ಬಗ್ಗೆ ಅರಿತುಕೊಳ್ಳಲು ಪಠ್ಯ ಪುಸ್ತಕಗಳಲ್ಲಿ ಅವರ ಜೀವನ ವಿಚಾರೆಧಾರೆಗಳನ್ನು ಸೇರ್ಪಡಿಸಲಾಗಿದೆ ಎಂದರು.
ಉಪನ್ಯಾಸಕ ಸಬಾಸ್ಟಿನ್ ಸೇರಿದಂತೆ ಕಾಲೇಜಿನ ಉಪನ್ಯಾಸಕ ವರ್ಗದವರು ಹಾಗೂ ಸಿಬ್ಬಂದಿಗಳು, ವಿದ್ಯಾರ್ಥಿಗಳು ಇತರರಿದ್ದರು