ಶಿವಮೊಗ್ಗ ಮೂಲದ ಶಂಕಿತ ಐಸಿಸ್ ಉಗ್ರ ಅರಾಫತ್ ಅಲಿ ದೆಹಲಿಯಲ್ಲಿ ಸೆರೆ
ಶಿವಮೊಗ್ಗ ಮೂಲದ ಐಸಿಸ್ ಉಗ್ರ ಆರೋಪಿ ಅರಾಫತ್ ಅಲಿಯನ್ನು ದೆಹಲಿ ವಿಮಾನ ನಿಲ್ದಾಣದಲ್ಲಿ ಎನ್‌ಐಎ ಅಧಿಕಾರಿಗಳ ತಂಡ ಬಂಧಿಸಿದೆ. 2020ರಿಂದ ತಲೆಮರೆಸಿಕೊಂಡಿದ್ದ ಅರಾಫತ್ ಅಲಿಯನ್ನು ಬಂಧಿಸುವಲ್ಲಿ ಎನ್‌ಐಎ ಸಫಲವಾಗಿದೆ.
ಅರಾಫತ್ ಅಲಿ ಕೀನ್ಯಾದ ನೈರೋಬಿಯಿಂದ ಬರುತ್ತಿದ್ದಾಗ ದೆಹಲಿಯಲ್ಲಿ ಬಂಧನ ಮಾಡಲಾಗಿದೆ. ಈ ಮೂಲಕ ವಿದೇಶಿ ಮೂಲದ ಮಾಡ್ಯೂಲ್‌ಗಳ ಪಿತೂರಿಯನ್ನು ಎನ್‌ಐಎ ಭೇದಿಸಿದಂತಾಗಿದೆ. ಈ ಬೆಳವಣಿಗೆಯಿಂದ ಎನ್‌ಐಎ ಮಹತ್ವದ ಮೈಲಿಗಲ್ಲು ಸಾಧಿಸಿದಂತಾಗಿದೆ.
ಐಸಿಸ್ ಪ್ರಚಾರ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದ ಅರಾಫತ್, ಹಲವು ಉಗ್ರ ಚಟುವಟಿಕೆಯಲ್ಲಿ ಭಾಗಿಯಾಗಿದ್ದ ಎನ್ನಲಾಗಿದೆ. ಇಸ್ಲಾಮಿಕ್ ಸ್ಟೇಟ್‌ನ ಭಾರತ ವಿರೋಧಿ ಭಯೋತ್ಪಾದಕ ಅಜೆಂಡಾವನ್ನು ಉತ್ತೇಜಿಸಲು ಈತ ವಿದೇಶದಿಂದ ಕಾರ್ಯಾಚರಣೆ ನಡೆಸುತ್ತಿದ್ದ.
ಮುಸ್ಲಿಂ ಯುವಕರನ್ನು ಐಸಿಸ್‌ಗೆ ಸೇರಿಸುವಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಅರಾಫತ್, ಕುಕ್ಕರ್ ಸ್ಫೋಟ ಉಗ್ರ ಮೊಹಮ್ಮದ್ ಶಾರಿಕ್ ಸಹಚರರೊಂದಿಗೆ ಸಂಪರ್ಕದಲ್ಲಿದ್ದ ಎಂದು ತಿಳಿದುಬಂದಿತ್ತು.
2020ರ ಮಂಗಳೂರು ಗೀಚುಬರಹ ಪ್ರಕರಣದಲ್ಲೂ ಅರಾಫತ್ ಆರೋಪಿಯಾಗಿದ್ದಾನೆ.ಅರಾಫತ್ ಅಲಿ ನಿರ್ದೇಶನದ ಮೇರೆಗೆ ಮೊಹಮ್ಮದ್ ಶಾರಿಕ್, ಮಾಜ್ ಮುನೀರ್ ಅಹ್ಮದ್ ಗೋಡೆ ಬರಹ ಬರೆದಿದ್ದರು ಎಂದು ಎನ್‌ಐಎ ತನಿಖೆ ವೇಳೆ ತಿಳಿದುಬಂದಿತ್ತು.
ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಅರಾಫತ್ ಮೇಲೆ ಕಣ್ಣಿಟ್ಟಿದ್ದ ಎನ್‌ಐಎ, ಆತನ ನವ ದೆಹಲಿಯ ವಿಮಾನ ನಿಲ್ದಾಣಕ್ಕೆ ಬರುತ್ತಿದ್ದಂತೆ ಬಂಧಿಸಿ ಕರೆದೊಯ್ದಿದೆ. ಈಗ ಈತನನ್ನು ವಿಚಾರಣೆಗೆ ಒಳಪಡಿಸಲಿದ್ದು, ಮತ್ತಷ್ಟು ಸ್ಫೋಟಕ ಮಾಹಿತಿ ಹೊರಬೀಳುವ ಸಾಧ್ಯತೆ ಇದೆ.