Breaking
15 Jan 2026, Thu

ರೈಲ್ವೆ ಪೊಲೀಸರ ಮಿಂಚಿನ ಕಾರ್ಯಾಚರಣೆ – ತಾಮ್ರದ ತಂತಿ ಕಳ್ಳತನವೆಸಗಿದ್ದ ಆರೋಪಿಗಳ ಬಂಧನ|arrested

2 ಲಕ್ಷ ರೂ. ಮೌಲ್ಯದ ರೈಲ್ವೇ ಒಹೆಚ್‍ಇ ತಾಮ್ರದ ತಂತಿ ಕಳ್ಳತನ ; ಆರೋಪಿಗಳ ಬಂಧನ

ಸಾಗರ : ಆನಂದಪುರ ಬಳಿ ಸುಮಾರು 2 ಲಕ್ಷ ರೂ. ಮೌಲ್ಯದ ರೈಲ್ವೇ ಒಹೆಚ್‍ಇ ತಾಮ್ರದ ತಂತಿಯನ್ನು ಕಳವು ಮಾಡಿ ಮಾರಾಟ ಮಾಡಿದ್ದ 3 ಮಂದಿ ಆರೋಪಿಗಳು ಮತ್ತು ತಂತಿ ಖರೀದಿಸಿದ್ದ ಇಬ್ಬರು ಅಂಗಡಿ ಮಾಲೀಕರನ್ನು ಮೈಸೂರು ರೈಲ್ವೇ ರಕ್ಷಣಾ ವಿಶೇಷ ತಂಡ ಬಂಧಿಸಿದೆ.

ಸೆ.13 ರಂದು ರಾತ್ರಿ ರೈಲ್ವೆ ರಕ್ಷಣಾ ಪಡೆಯ ವಿಶೇಷ ತಂಡ, ಮೈಸೂರು ಅಪರಾಧ ವಿಭಾಗದ ನಿರೀಕ್ಷಕ ಎಂ ನಿಶಾದ್ ನೇತೃತ್ವದಲ್ಲಿ ತಪ್ಪಿತಸ್ಥರನ್ನು ಬಂಧಿಸಲಾಗಿದೆ.

ಕಳ್ಳತನ ಮಾಡಲು ಬಳಸುತ್ತಿದ್ದ ಒಂದು ನಾಲ್ಕು ಚಕ್ರದ ವಾಹನ (ಟಾಟಾ ಏಸ್) ಮತ್ತು 1 ದ್ವಿಚಕ್ರ ವಾಹನ, ಕಟ್ಟರ್ ಮತ್ತು ಲ್ಯಾಡರ್ ಟ್ರಾಲಿ ಅಥವಾ ರೈಲ್ವೆ ವಿದ್ಯುದ್ದೀಕರಣ ಉಪಕರಣವನ್ನು ಸಹ ವಶಪಡಿಸಿಕೊಳ್ಳಲಾಗಿದೆ.

ಕುಂಸಿಗೆ ಸೇರಿದ ನೂರುಲ್ಲಾ ತಂದೆ ಬಾಬಾ ಜಾನ್, ಮಂಜು ತಂದೆ ಆನಂದಪ್ಪ ಮತ್ತು ಹರೀಶ ತಂದೆ ಮಂಜಪ್ಪ ಇವರನ್ನು ಬಂಧಿಸಲಾಗಿದೆ ಹಾಗೂ ಕಳ್ಳತನ ಮಾಡಲಾದ ತಾಮ್ರದ ತಂತಿ ಖರೀದಿಸಿದ್ದ ಶಿವಮೊಗ್ಗದ ಐಶ್ವರ್ಯ ಸ್ಟೀಲ್ಸ್ ಮಾಲೀಕ ನಾರಾಯಣ, ಸ್ವಸ್ತಿಕ್ ಸ್ಟೀಲ್ಸ್ ಮಾಲೀಕ ಜ್ಞಾನೇಶ್ವರ ಒಟ್ಟು 5 ಮಂದಿಯನ್ನು ಬಂಧಿಸಿ ಇವರಿಂದ ಸುಮಾರು 2 ಲಕ್ಷ ಮೌಲ್ಯದ 200 ಕೆ.ಜಿ ತಾಮ್ರದ ತಂತಿಗಳನ್ನು ಸೆ.14 ರಂದು ವಶಪಡಿಸಿಕೊಳ್ಳಲಾಗಿದೆ.

ಸೆ.06 ಮತ್ತು 07 ರಂದು ರಾತ್ರಿ ರೂ. 2 ಲಕ್ಷ ಮೌಲ್ಯದ ಸುಮಾರು 260 ಮೀಟರ್ ರೈಲ್ವೆ ಒಹೆಚ್‍ಇ ತಾಮ್ರದ ತಂತಿಯನ್ನು ಶಿವಮೊಗ್ಗದ ಸಾಗರ ಮತ್ತು ಆನಂದಪುರ ಮಧ್ಯದ ರೈಲು ನಿಲ್ದಾಣ ಕಿ. ಮೀ.ಸಂಖ್ಯೆ 120/800 ರ ಬಳಿ ಕಳ್ಳತನ ಮಾಡಲಾಗಿತ್ತು.

ಮೈಸೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾದ ಶಿಲ್ಪಿ ಅಗರ್ವಾಲ್ ರವರ ಸೂಚನೆಯಂತೆ ಹುಬ್ಬಳ್ಳಿ ಮತ್ತು ಮೈಸೂರು ವಿಭಾಗೀಯ ರೈಲ್ವೆ ರಕ್ಷಣಾ ಆಯುಕ್ತರಾದ ಜೆ ಕೆ ಶರ್ಮಾ ಘಟನಾ ಸ್ಥಳಕ್ಕೆ ಭೇಟಿ ನೀಡಿ, ಸ್ಥಳದಲ್ಲಿ ಲಭ್ಯವಿರುವ ಸಾಕ್ಷ್ಯಗಳನ್ನು ಪರಿಶೀಲನೆ ನಡೆಸಿದರು.

 ಸ್ಥಳೀಯ ಪೊಲೀಸ್ ಮತ್ತು ಆರ್‍ ಪಿಎಫ್‍ನ ಶ್ವಾನ ದಳವನ್ನು ಸೇವೆಗೆ ಕರೆ ತರತಂದು ಪ್ರಕರಣದ ಪತ್ತೆಗೆ ಮೈಸೂರು, ಬೆಂಗಳೂರು ಮತ್ತು ಹುಬ್ಬಳ್ಳಿಯ ಅಪರಾಧ ವಿಭಾಗದ ಸಿಬ್ಬಂದಿಗಳಾದ ಎಂ ನಿಶಾದ್, ಕ್ರೈಂ ಇನ್ಸ್‌ಪೆಕ್ಟರ್ ಮೈಸೂರು ಮತ್ತು ಶಿವಮೊಗ್ಗ ಇನ್ಸ್‌ಪೆಕ್ಟರ್ ಬಿ ಎನ್ ಕುಬೇರಪ್ಪ ಅವರ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಲಾಯಿತು.

ಈ ತಂಡ ದಿನಾಂಕ ಸೆ.07 ರಂದು ಶಂಕಿರನ್ನು ಗುರುತಿಸಿ, ಮೂಲ ಮಾಹಿತಿಯ ಆಧಾರದ ಮೇಲೆ ಮತ್ತು ಶಂಕಿತರ ಟವರ್ ಡಂಪ್ ಮತ್ತು ಕರೆ ದಾಖಲೆಗಳಿಗಾಗಿ ಅರ್ಜಿ ಸಲ್ಲಿಸಿ ಸೆ.12 ರಂದು, ಟವರ್ ಡಂಪ್ ಮತ್ತು ಕರೆ ದಾಖಲೆಗಳನ್ನು ಸ್ವೀಕರಿಸಿ ಶಂಕಿತರ ಗುರುತು ಪತ್ತೆ ಹಚ್ಚಿತು ಮತ್ತು ಅವರ ಚಲನ ವಲನಗಳ ಮೇಲೆ ನಿಗಾ ಇಡಲಾಯಿತು. ಸೆ. 13ರಂದು ವಿಶೇಷ ತಂಡವು ಆರೋಪಿಗಳ ವಿಳಾಸ, ಚಲನಗಳನ್ನು ಪತ್ತೆ ಮಾಡಿ, ಅವರನ್ನು ವಶಕ್ಕೆ ಪಡೆದು ಬಂಧಿಸಿತು.

ಈ ಎಲ್ಲಾ 5 ಬಂಧಿತ ಆರೋಪಿಗಳನ್ನು ಸಾಗರದ ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಗಿದೆ. ಮೈಸೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕರು ರೈಲ್ವೆ ಒಹೆಚ್‍ಇ ಕಳ್ಳರ ಗುಂಪನ್ನು ಸೆರೆ ಹಿಡಿದ ಆರ್. ಪಿ. ಎಫ್ ನ ವಿಶೇಷ ತಂಡದ ಕಾರ್ಯವನ್ನು ಶ್ಲಾಘಿಸಿದ್ದಾರೆ.


 ಈ ಪ್ರಕರಣವನ್ನು ಭೇದಿಸುವಲ್ಲಿ ಆರ್.ಪಿ.ಎಫ್ ನ ವಿಶೇಷ ತಂಡದಲ್ಲಿ ಎಸ್.ಐ ಗಳಾದ ಸಂತೋಷ ಗಾಂಕರ್, ಜ್ಯೋತಿ ಸ್ವರೂಪ್, ಎ.ಎಸ್.ಐ ಗಳಾದ ಎಂ.ಪಿ. ತಮ್ಮಯ್ಯ, ಅನ್ವರ್ ಸಾದಿಕ್, ಬಿ. ಆನಂದ್, ವಿ. ಸುರೇಶ,, ಶರಣಪ್ಪ, ಮತ್ತು ಮುಖ್ಯ ಪೇದೆಗಳಾದ ಎಚ್. ಆರ್. ರಮೇಶ್, ಸಿ. ಎ. ಕುಮಾರ್, ಡಿ. ಚೇತನ್, ಫಯಾಜ್ ಅಹ್ಮದ್, ವಿ. ಕುಮಾರ್ ಮತ್ತು ಪೇದೆಗಳಾದ  ಪ್ರವೀಣ್ ಕುಮಾರ್, ಪರಮೇಶ್ವರಪ್ಪ, ಏಳಂಗೋವನ್ ಈರೇಶಪ್ಪ, ಎಂ. ಪ್ರಕಾಶ್ ಮತ್ತು ರಾಘವೇಂದ್ರ ಇದ್ದರು.

About The Author

By ರಫ಼ಿ ರಿಪ್ಪನ್ ಪೇಟೆ

ನಾನು ಪೋಸ್ಟ್ ಮ್ಯಾನ್ ನ್ಯೂಸ್ ಮಾದ್ಯಮದ ಹಿಂದೆ ಇರುವ ಒಬ್ಬ ಸ್ಥಳೀಯ ಸುದ್ದಿಪ್ರೇಮಿ ಪತ್ರಕರ್ತ. ಕಳೆದ ಐದು ವರ್ಷಗಳಿಂದ ಒಂದು ಕನಸನ್ನು ಜೀವಂತವಾಗಿಟ್ಟಿದ್ದೇನೆ — ನಮ್ಮೂರ ಸುದ್ದಿಗಳು ಲೋಕದವರೆಗೆ ತಲುಪಬೇಕು ಎಂಬದು. ಸ್ಥಳೀಯ ಪತ್ರಿಕೆಗಳಿಂದ ಆರಂಭಿಸಿ, ರಾಜ್ಯಮಟ್ಟದ ನ್ಯೂಸ್ ಚಾನೆಲ್‌ಗಳ ಬೆಂಗಳೂರು ಕಚೇರಿಯವರೆಗೆ ಮಾಧ್ಯಮದ ಎಲ್ಲಾ ಹಂತಗಳಲ್ಲಿ ಕೆಲಸ ಮಾಡಿದ ಅನುಭವ ನನ್ನದಾಗಿದೆ. ಆದರೆ ಅಲ್ಲಿ ಒಂದು ಖಾಲಿ ಅನಿಸಿತು — ನಿಜವಾದ ಸ್ಥಳೀಯ ಧ್ವನಿಗೆ ವೇದಿಕೆ ಇಲ್ಲ. ಅದಕ್ಕೆ ಪರ್ಯಾಯವಾಗಿ ಹುಟ್ಟಿತು “ಪೋಸ್ಟ್ ಮ್ಯಾನ್ ನ್ಯೂಸ್.” ಇಲ್ಲಿ ಸುದ್ದಿ ಅಂದ್ರೆ ಸುದ್ದಿ ಮಾತ್ರ. ಯಾರ ಪರವೂ ಅಲ್ಲ, ಯಾವ ಪಕ್ಷದ ಪರವೂ ಅಲ್ಲ. ನನ್ನ ನಿಲುವು ಸ್ಪಷ್ಟ — ಸುದ್ದಿ ಹೇಳಬೇಕು, ತೀರ್ಪು ಕೊಡಬಾರದು. ಕೆಲವೊಮ್ಮೆ ಓದುಗರ ಪ್ರತಿಕ್ರಿಯೆಗಳು ಬೇರೆ ಬಣ್ಣ ತೊಡುತ್ತವೆ, ಆದರೆ ನನ್ನ ಪ್ರತಿಕ್ರಿಯೆ ಕೆಲಸದ ಮೂಲಕವೇ. ಪೋಸ್ಟ್ ಮ್ಯಾನ್ ನ್ಯೂಸ್ ಇಂದು ಕೇವಲ ಒಂದು ಪೇಜ್ ಅಲ್ಲ, ಅದು ಒಂದು ಚಳವಳಿಯಾಗಿದೆ — ಪೋಸ್ಟ್ ಮ್ಯಾನ್ ನ್ಯೂಸ್‌ನ ಉದ್ದೇಶ ಕೇವಲ ವರದಿ ಮಾಡುವುದು ಅಲ್ಲ; ನಮ್ಮೂರ ಘಟನೆಗಳು, ಪ್ರತಿಭೆಗಳು, ಸಮಸ್ಯೆಗಳು, ಸಾಧನೆಗಳು — ಇವುಗಳನ್ನು ಹೊರಲೋಕಕ್ಕೆ ತಲುಪಿಸುವ ಸೇತುವೆಯಾಗಿರಬೇಕು. ಹಣ ಪಡೆದು ಸುದ್ದಿ ಮಾಡುವ ಅಭ್ಯಾಸವೂ ಇಲ್ಲ, ಹವ್ಯಾಸವೂ ಇಲ್ಲ. ಮುಂದಿನ ಹಂತದಲ್ಲಿ ನಾವು ಔಟ್‌ಸೋರ್ಸ್ ವ್ಯವಸ್ಥೆ ಮೂಲಕ ಸ್ಥಳೀಯ ವರದಿಗಾರರನ್ನು, ಕಥೆಗಾರರನ್ನು ಸೇರಿಸಿಕೊಂಡು ಈ ವೇದಿಕೆಯನ್ನು ಇನ್ನಷ್ಟು ಜೀವಂತಗೊಳಿಸುವ ಉದ್ದೇಶದಲ್ಲಿದ್ದೇವೆ. ನಮ್ಮ ಗುರಿ ಒಂದೇ — ಸಣ್ಣ ಊರುಗಳ ಸತ್ಯ ಕತೆಗಳು ದೊಡ್ಡ ಮಟ್ಟದಲ್ಲಿ ಲೋಕದ ಕಿವಿಗೆ ತಲುಪಬೇಕು. - ರಫ಼ಿ ರಿಪ್ಪನ್ ಪೇಟೆ ಸಂಪಾದಕರು , ಪೋಸ್ಟ್ ಮ್ಯಾನ್ ನ್ಯೂಸ್

Leave a Reply

Your email address will not be published. Required fields are marked *