ರಿಪ್ಪನ್ಪೇಟೆ : ಮಳೆಯಿಲ್ಲದೇ ಮಲೆನಾಡಿನಲ್ಲಿ ಬಿಸಿಲಿನ ಆರ್ಭಟ ಹೆಚ್ಚಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆಯೇ ಇಲ್ಲದ ಕಾರಣ ಕೆರೆಗಳು ಬತ್ತಿ ಹೋಗಿದ್ದು, ರೈತರ ಬೆಳೆಗಳಿಗೆ ಸಹ ಸಮಸ್ಯೆ ಆಗುತ್ತಿದೆ. ಸರಿಯಾಗಿ ಮಳೆ ಬಾರದೇ ಕುಡಿಯಲು ನೀರಿಲ್ಲದೇ ಜನ ತತ್ತರಿಸಿ ಹೋಗಿದ್ದಾರೆ.
ಪಟ್ಟಣದ ಸಮೀಪದ ಹೆದ್ದಾರಿಪುರ ಗ್ರಾಪಂ ವ್ಯಾಪ್ತಿಯ ತಳಲೆ ಗ್ರಾಮದ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಸಹ ಮಳೆಯಾಗಲಿ ಎಂದು ಗ್ರಾಮಸ್ಥರು ವಿಶೇಷ ಪೂಜೆ ಸಲ್ಲಿಸಿದ್ದು, ಕಷ್ಟ ನೀಗಿಸುವಂತೆ ಕೋರಿಕೊಂಡಿದ್ದಾರೆ.
ಪ್ರಸಕ್ತ ವರ್ಷ ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ತಳಲೆ ಗ್ರಾಮದ ಗ್ರಾಮಸ್ಥರು,ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಮಳೆಗಾಗಿ ವಿಶೇಷ ಪೂಜೆ ಸಲ್ಲಿಸಿದರು. ಈ ವಿಶೇಷ ಪೂಜೆಯ ಸಂದರ್ಭದಲ್ಲಿ ಸಾಲುಗಟ್ಟಿ ನಿಂತು ದೇವಿಯ ದರ್ಶನ ಪಡೆದಿದ್ದು, ಮಳೆಗಾಗಿ ಪ್ರಾರ್ಥನೆ ಮಾಡಿದ್ದಾರೆ.ಈ ಸಂಧರ್ಭದಲ್ಲಿ ನೂರಾರು ಸಂಖ್ಯೆಯಲ್ಲಿ ಭಕ್ತಾಧಿಗಳು ಭಾಗವಹಿಸಿದ್ದರು, ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.