ರಿಪ್ಪನ್‌ಪೇಟೆ : ವರ್ಗಾವಣೆಗೊಂಡ ಮುಖ್ಯ ಶಿಕ್ಷಕನ ಅಧಿಕಾರ ಸ್ವೀಕಾರಕ್ಕೆ ತೀವ್ರ ವಿರೋಧ
ರಿಪ್ಪನ್‌ಪೇಟೆ : ಅಮಾನತ್ತುಗೊಂಡಿದ್ದ ಶಿಕ್ಷಕನೊಬ್ಬನನ್ನು ಏಕಾಏಕಿ ಪಟ್ಟಣದ ಗವಟೂರು ಶಾಲೆಗೆ ಮುಖ್ಯೋಪಾಧ್ಯಾಯರಾಗಿ ವರ್ಗಾವಣೆಗೊಳಿಸಿದ್ದನ್ನು ವಿರೋಧಿಸಿ ಪೋಷಕರು ಹಾಗೂ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ಇತ್ತೀಚೆಗೆ ಅರಸಾಳು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ತಮ್ಮಡಿಕೊಪ್ಪ ಸರ್ಕಾರಿ ಪ್ರಾಥಮಿಕ ಪಾಠಶಾಲೆಯ ಮುಖ್ಯೋಪಾದ್ಯಾಯ ಗಂಗಾನಾಯ್ಕ್ ಎಂಬುವರು ಸರಿಯಾಗಿ ಶಾಲೆಗೆ ಹಾಜರಾಗುತ್ತಿಲ್ಲ ಎಂದು ಆರೋಪಿಸಿ ಶಾಲಾ ಪೋಷಕವರ್ಗ ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಅಮಾನತ್ತು ಪಡಿಸಲಾಗಿದ್ದ ಮುಖ್ಯೋಪಾಧ್ಯಾಯನನ್ನು ರಿಪ್ಪನ್‌ಪೇಟೆಯ ಗವಟೂರು ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಗೆ ಏಕಾಏಕಿ ವರ್ಗಾವಣೆ ಮಾಡಿರುವುದನ್ನು ವಿರೋಧಿಸಿ ಇಂದು ಗವಟೂರು ಗ್ರಾಮಸ್ಥರು ಮತ್ತು ವಿದ್ಯಾರ್ಥಿಗಳು ಪೋಷಕವರ್ಗ ಪ್ರತಿಭಟನೆ ನಡೆಸಿದರು.
ಅಮಾನತ್ತು ಮಾಡಲಾದ ಮುಖ್ಯೋಪಾದ್ಯಾಯ ಗಂಗಾನಾಯ್ಕ್ ಇವರನ್ನು ಏಕಾಏಕಿ ಗವಟೂರು ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಗೆ ವರ್ಗಾಯಿಸಿರುವ ಸುದ್ದಿ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಮತ್ತು ಪೋಷಕವರ್ಗ ವಿದ್ಯಾರ್ಥಿ ವೃಂದ ಇಂದು ಶಾಲೆಯ ಮುಂಭಾಗದಲ್ಲಿ ದಿಡೀರ್ ಪ್ರತಿಭಟನೆ ನಡೆಸುವ ಮೂಲಕ ಅಧಿಕಾರ ಸ್ವೀಕರಿಸದಂತೆ ತಡೆ ನೀಡಿ ನಮ್ಮೂರಿಗೆ ಈ ಮುಖ್ಯೋಪಾದ್ಯಾಯರು ಬೇಡವೇ ಬೇಡಾ ಎಂದು ಪಟ್ಟು ಹಿಡಿದು ಪ್ರತಿಭಟನೆ ನಡೆಸಿದರು.
ಪ್ರತಿಭಟನಾ ಸ್ಥಳಕ್ಕೆ ಸಂಬಂಧಪಟ್ಟ ಕ್ಷೇತ್ರ ಶಿಕ್ಷಣಾಧಿಕಾರಿ ಮತ್ತು ಜಿಲ್ಲಾ ಸಾರ್ವಜನಿಕ ಉಪನಿರ್ದೇಶಕರು ಬರುವವರೆಗೂ ನಾವು ಪ್ರತಿಭಟನೆ ಕೈಬಿಡುವುದಿಲ್ಲ ಎಂದು ಎಸ್.ಡಿ.ಎಂ.ಸಿ.ಸದಸ್ಯರುಗಳು ಗ್ರಾಮಸ್ಥರು ವಿದ್ಯಾರ್ಥಿ ಸಮೂಹ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಸ್ಥಳಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್.ಅರ್,ಕೃಷ್ಣಮೂರ್ತಿ ಭೇಟಿ ನೀಡಿ ಪ್ರತಿಭಟನಾಕಾರರ ಮನವಿ ಸ್ವೀಕರಿಸಿ ಸಂಬಂಧಪಟ್ಟ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳ ಗಮನಕ್ಕೆ ತರುವುದರೊಂದಿಗೆ ಈ ಶಾಲೆಗೆ ಮುಖ್ಯ ಶಿಕ್ಷಕ ಗಂಗಾನಾಯ್ಕ್ ನೇಮಕಾತಿಯನ್ನು ರದ್ದುಗೊಳಿಸಿ ಅದೇಶಿಸುವ ಬಗ್ಗೆ ಭರವಸೆ ನೀಡಿದರ ಹಿನ್ನೆಲೆಯಲ್ಲಿ ಪ್ರತಿಭಟನಾ ನಿರಂತರು ಪ್ರತಿಭಟನೆಯನ್ನು ಹಿಂಪಡೆದರು.