ಪ್ರಧಾನಿ ಮೋದಿ ವಿರುದ್ದ ನಿಂದನಾತ್ಮಕ ಪದ ಬಳಕೆ – ಸಾಗರದಲ್ಲಿ ಪ್ರಕರಣ ದಾಖಲು|modi

ಪ್ರಧಾನಿ ಮೋದಿ ವಿರುದ್ದ ನಿಂದನಾತ್ಮಕ ಪದ ಬಳಕೆ – ಸಾಗರದಲ್ಲಿ ಪ್ರಕರಣ ದಾಖಲು
ಸಾಗರ : ರಾಣೆಬೆನ್ನೂರಿನ ನ್ಯಾಯವಾದಿ ನಾಗರಾಜ್ ಕುಡುಪಲಿ ಎಂಬುವವರು ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಹಾಗೂ ತಮ್ಮ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿರುವ ಕ್ರಮವನ್ನು ಖಂಡಿಸಿ ಅವರನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸುವಂತೆ ಸಾಗರ ನ್ಯಾಯವಾದಿ ಕೆ.ವಿ.ಪ್ರವೀಣ್ ನಗರ ಠಾಣೆಗೆ ಶುಕ್ರವಾರ ದೂರು ನೀಡಿದ್ದಾರೆ.

ಮೈಸೂರಿನಲ್ಲಿ ಆ.12 ಮತ್ತು 13ರಂದು ನಡೆದ ರಾಜ್ಯಮಟ್ಟದ ವಕೀಲರ ಸಮ್ಮೇಳನದಲ್ಲಿ ನನಗೆ ನಾಗರಾಜ ಅವರ ಪರಿಚಯವಾಗಿತ್ತು. ಆ. 12 ರಂದು ಅವರು ನನ್ನೊಂದಿಗೆ ಮಾತನಾಡುತ್ತಾ, ನರೇಂದ್ರ ಮೋದಿಯವರು ಮತ್ತೊಮ್ಮೆ ಈ ದೇಶದ ಪ್ರಧಾನಿಯಾಗುವುದಿಲ್ಲ ಎಂದು ನನ್ನ ಜತೆ ಚಾಲೆಂಜ್ ಮಾಡಿದ್ದಾರೆ. ಹೀಗೆ ಚಾಲೆಂಜ್ ಮಾಡಿದ ವಿಡಿಯೋವನ್ನು ನಾವಿಬ್ಬರು ಪರಸ್ಪರ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದೇವೆ. ಕುಡುಪಲಿ ಅವರು ತಮ್ಮ ಫೇಸ್‌ಬುಕ್ ಖಾತೆ ಸುದ್ದಿ ಚಾವಡಿಗೆ ವಿಡಿಯೋವನ್ನು ಅಪ್‌ಲೋಡ್ ಮಾಡಿದ್ದಾರೆ. ಆ 14ರಂದು ಪುನಃ ಅವರು ಇನ್ನೊಂದು ವಿಡಿಯೋ ಮಾಡಿ ಅದನ್ನು ತಮ್ಮ ಸುದ್ದಿ ಚಾವಡಿ ಖಾತೆಗೆ ಅಪ್‌ಲೋಡ್ ಮಾಡಿದ್ದಾರೆ.

ಆ ವಿಡಿಯೋದಲ್ಲಿ ”ಬಿಜೆಪಿ ಮುಕ್ತ ಕರ್ನಾಟಕವಾಗಬೇಕು. ಮೋದಿಯೇನು ದೇವರೇನ್ರಿ, ಹಿ ವಾಸ್ ಒನ್ ಆಫ್ ದಿ ಟೆವೆಂಡರ್, ಹುದ್ದೆ ಬಿಟ್ಟರೆ ಯಾರವರು, ಹೂ ಈಸ್ ಹಿ, ಸ್ವತಂತ್ರವಾಗಿ ವಿಮಾನದಲ್ಲಿ ಅಡ್ಡಾಡುವ ಶಕ್ತಿ ಅವನಿಗೆ ಇಲ್ಲ, ನಾನು ದುಡಿದ ಹಣದಲ್ಲಿ ವಿಮಾನದ ಟಿಕೆಟ್ ತೆಗೆದುಕೊಂಡು ಓಡಾಡುತ್ತೇನೆ. ಅವರದೇನಿದೆ ದುಡಿಮೆ ಎಂದು ಹೇಳಿರುವ ಜತೆಗೆ, ಇವತ್ತು ಒಬ್ಬ ಪ್ರವೀಣ ಎಂಬ ಕೋಮುವಾದಿ ನನ್ನನ್ನು ಭೇಟಿಯಾಗಿದ್ದು ಫೇಸ್‌ಬುಕ್ ಮತ್ತು ಫೋನ್‌ನಲ್ಲಿರುವ ದುಷ್ಟಬುದ್ಧಿ ಇರುವವನು ಎಂದು ಅವಹೇಳನಾಕಾರಿಯಾಗಿ ದೇಶದ ಪ್ರಧಾನಮಂತ್ರಿಗಳು ಮತ್ತು ನನ್ನ ಬಗ್ಗೆ ಮಾತನಾಡಿದ್ದಾರೆ.ದೇಶದ ಪ್ರಧಾನಿ ವಿರುದ್ಧ ಅವಹೇಳನಕಾರಿಯಾಗಿ ಏಕವಚನದಲ್ಲಿ ಮಾತನಾಡಿದ್ದು, ನನ್ನ ವಿರುದ್ದವೂ ಮಾನಹಾನಿಯಾಗುವಂತಹ ಟೀಕೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ನಾಗರಾಜ್ ಕುಡುಪಲಿ ಎಂಬುವವರನ್ನು ಕರೆಸಿ ವಿಚಾರಣೆ ನಡೆಸುವ ಜೊತೆಗೆ ಸೂಕ್ತ ಕಾನೂನುಕ್ರಮ ಜರುಗಿಸಬೇಕು ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಕೆ.ವಿ.ಪ್ರವೀಣ್ ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *