ಶಿವಮೊಗ್ಗ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮಳೆ ಹಾನಿ ಸಂಬಂಧ ನಡೆಯುತ್ತಿದ್ದ ಪರಿಶೀಲನಾ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪರವರಿಗೆ ಕಪ್ಪು ಪಟ್ಟಿ ಪ್ರದರ್ಶನ ಮಾಡಿದ ಘಟನೆ ನಡೆದಿದೆ.
ಜಿಲ್ಲಾ ಪಂಚಾಯತ್ನಲ್ಲಿ ಸಭೆ ಆರಂಭವಾಗುತ್ತಲೇ , ಶಿಕ್ಷಣ ಸಚಿವ ಮಧು ಬಂಗಾರಪ್ಪರನವರ ವಿರುದ್ಧ ಘೋಷಣೆಗಳನ್ನು ಕೂಗುತ್ತ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಸಭಾಂಗಣದ ಒಳಗೆ ಪ್ರವೇಶ ಮಾಡಿದರು, ವೇದಿಕೆಯ ಸಮೀಪದವರೆಗೂ ಘೋಷಣೆಗಳನ್ನು ಕೂಗುತ್ತಾ ಬಂದ ಪ್ರತಿಭಟನಾಕಾರರು, ಸಭೆಯಲ್ಲಿ ,ಕರಪತ್ರಗಳನ್ನು ಎಸೆದರು. ಅಲ್ಲದೆ ಕಪ್ಪು ಪಟ್ಟಿಗಳನ್ನು ಪ್ರದರ್ಶನ ಮಾಡಿ, ಸಚಿವರ ವಿರುದ್ಧ ಧಿಕ್ಕಾರ ಕೂಗಿದರು.
ಬಿಜೆಪಿ ಯುವ ಮೋರ್ಚದ ಜಿಲ್ಲಾಧ್ಯಕ್ಷ ಹರಿಕೃಷ್ಣ, ಮತ್ತು ಕಾರ್ಯಕರ್ತರಾದ ಜಗದೀಶ್, ದರ್ಶನ್, ಪ್ರದೀಪ್ ವಿಶ್ವನಾಥ್ ಮೊದಲಾದವರು ಸಭೆಗೆ ಸಚಿವರು ಬರುತ್ತಿದ್ದಂತೆ ಪ್ರತಿಭಟನೆ ನಡೆಸಿದರು. ವೀರ ಸಾವರ್ಕರ್ ರವರ ಪಠ್ಯವನ್ನು ಶಾಲಾ ಪುಸ್ತಕಗಳಲ್ಲಿ ಕೈ ಬಿಟ್ಟಿರುವ ಹಿನ್ನೆಲೆಯಲ್ಲಿ ಯುವ ಮೋರ್ಚಾ ಈ ಪ್ರತಿಭಟನೆಯನ್ನು ನಡೆಸಿದೆ.
ಸಚಿವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಏಕಾಏಕಿ ಸಭಾಂಗಣದ ಒಳಗೆ ಪ್ರವೇಶ ಮಾಡಿ ಪ್ರತಿಭಟನೆ ನಡೆಸಿದ್ದು, ನೆರೆದವರಿಗೆ ಇರುಸುಮುರುಸು ಉಂಟುಮಾಡಿತ್ತು. ಅಲ್ಲದೆ, ಸೂಕ್ತ ಭದ್ರತೆಯನ್ನು ಒದಗಿಸಿರಲಿಲ್ಲವೇ ಎಂಬ ಅನುಮಾನ ಮೂಡಿಸಿತ್ತು. ಇನ್ನೂ ಸ್ವತಃ ಎಸ್ಪಿ ಮಿಥುನ್ ಕುಮಾರ್ ವೇದಿಕೆಯಿಂದ ಎದ್ದುಬಂದು ಪ್ರತಿಭಟನಾಕಾರರನ್ನು ಹೊರಕ್ಕೆ ತಳ್ಳಿದರು.
ಇನ್ನೂ ಪ್ರತಿಭಟನಾಕಾರರು ಹೊರಕ್ಕೆ ಬರುತ್ತಲೇ ಪೊಲೀಸರು ಎಲ್ಲರನ್ನು ಎತ್ತಿಕೊಂಡು ಹೋಗಿ ಜೀಪ್ನಲ್ಲಿ ಕೂರಿಸಿ ಕರೆದೊಯ್ದರು.