ಶಿವಮೊಗ್ಗ : ರಾಜ್ಯಾದ್ಯಂತ ಸಂಚಲನ ಸೃಷ್ಠಿ ಮಾಡಿದ್ದ ಶಿವಮೊಗ್ಗದ ಬಸ್ ನಿಲ್ದಾಣದ ಬಳಿ ಯುವತಿಯನ್ನ ಅಪಹರಿಸಲಾದ ಪ್ರಕರಣ ಪೊಲೀಸ್ ಠಾಣೆಯಲ್ಲಿ ಸುಖಾಂತ್ಯಗೊಂಡಿದೆ.
ಘಟನೆ ಹಿನ್ನಲೆ ಏನು?
ಸೋಮವಾರ ಬೆಳಗ್ಗೆ ತಾಯಿಯೊಂದಿಗೆ ಸಾಗರಕ್ಕೆ ಪೂಜೆಗೆಂದು ಶಿವಮೊಗ್ಗ ಬಸ್ ನಿಲ್ದಾಣದ ಬಳಿ ತಾಯಿ ಮಗಳು ನಡೆದುಕೊಂಡು ಹೋಗುತ್ತಿದ್ದ ವೇಳೆ ಇನ್ನೋವಾ ಕಾರೊಂದರಲ್ಲಿ ಬಂದ ಪತಿ ತನ್ನ ಪತ್ನಿಯನ್ನೇ ಅಪಹರಣ ಮಾಡಿದ್ದಾನೆ ಎಂಬ ಸುದ್ದಿ ಎಲ್ಲಡೆ ಹರಡಿತ್ತು.
ಈ ವಿಚಾರವಾಗಿ ದೊಡ್ಡಪೇಟೆ ಠಾಣೆ ಮೆಟ್ಟಿಲು ಹತ್ತಿದ ತಾಯಿ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣ ಬೆನ್ನು ಹತ್ತಿದ ದೊಡ್ಡಪೇಟೆ ಪೊಲೀಸರು ಇನ್ನೋವಾ ಕಾರಿನ ಬೆನ್ನು ಬಿದ್ದರು.
ಕೊಪ್ಪ ಪೊಲೀಸ್ ಠಾಣೆಯಲ್ಲಿ ಆಗಿದ್ದೇನು?
ಪತಿ ಮತ್ತು ಪತ್ನಿ ಕೊಪ್ಪ ಪೊಲೀಸ್ ಠಾಣೆಯ ಕದತಟ್ಟಿ ತಮ್ಮ ಲವ್ ಸ್ಟೋರಿಯನ್ನ ಬಿಚ್ಚಿಟ್ಟಿದ್ದಾರೆ. ತಾವು ವಯಸ್ಸಿನಲ್ಲಿ ಮೇಜರ್ ಆಗಿದ್ದು, ಕಳೆದ ನಾಲ್ಕು ತಿಂಗಳ ಹಿಂದೆ ರಿಜಿಸ್ಟಾರ್ ಮ್ಯಾರೇಜ್ ಆಗಿರುವುದನ್ನ ಪೊಲೀಸ್ ಠಾಣೆಯಲ್ಲಿ ತಿಳಿಸಿದ್ದಾರೆ. ನಮಗೆ ಮನೆಯವರ ವಿರೋಧವಿತ್ತು . ಇದರಿಂದ ಪ್ರತಿದಿನ ಮೊಬೈಲ್ ನಲ್ಲಿ ನಿರಂತರ ಸಂಪರ್ಕದಲ್ಲಿದ್ದ ಈ ಜೋಡಿ ಇಂದು ಪತಿಯೊಂದಿಗೆ ಹೋಗುವ ಪ್ಲಾನ್ ಇಬ್ಬರೂ ಮಾಡಿಕೊಂಡಿದ್ದರು. ತಮ್ಮ ಪ್ರೀತಿಗೆ ಕುಟುಂಬದ ವಿರೋಧವಿದೆ ಎಂದು ಭಾವಿಸಿ ಈ ರೀತಿಯ ಯೋಜನೆ ಮಾಡಿರುವುದಾಗಿ ಪೋಲೀಸರ ಬಳಿ ಹೇಳಿಕೊಂಡಿದ್ದಾರೆ ಎನ್ನಲಾಗಿದೆ.
ಜೋಡಿಯ ಮದ್ಯೆ ಲವ್ ಆಗಿದ್ದು ಹೇಗೆ?
ಯುವಕನ ಮನೆ ಗಾಜನೂರು, ಯುವತಿಯ ಮನೆ ಹೊಸಮನೆ, ಯುವಕ ಭರತ್ ಸಿಸಿ ಟಿವಿ ಕ್ಯಾಮರ ಅಳವಡಿಸುವ ವ್ಯವಹಾರ ಮಾಡುತ್ತಿದ್ದು, ಈತನ ಅಂಗಡಿ ಹೊಸಮನೆಯಲಿತ್ತು. ಅಂಗಡಿ ಪಕ್ಕದ್ದೇ ಯುವತಿಯ ಮನೆ. ಇದರಿಂದ ಇಬ್ಬರ ನಡುವೆ ಪ್ರೀತಿ ಹುಟ್ಟಿತ್ತು.
ಕೊಪ್ಪಕ್ಕೆ ಹೋಗಿದ್ದು ಯಾಕೆ?
ಕಿಡ್ನಾಪ್ ವಿಚಾರವಾಗಿ ಪೊಲೀಸರು ಬೆನ್ನುಬಿದ್ದಿದ್ದಾರೆ ಎಂಬ ಮಾಹಿತಿ ತಿಳಿದು ಅಲರ್ಟ್ ಆದ ನವ ಜೋಡಿಗಳು ಕೊಪ್ಪದ ಪೊಲೀಸ್ ಠಾಣೆಗೆ ಬಂದಿದ್ದಾರೆ. ಠಾಣೆಯಲ್ಲಿ ಎಲ್ಲಾ ವಿಷಯ ತಿಳಿಸಿದ್ದಾರೆ. ಠಾಣೆಯಲ್ಲಿ ಯುವತಿ ವಾಪಾಸ್ ತವರು ಮನೆಗೆ ಹೋಗುವುದಿಲ್ಲ ಎಂದು ಹೇಳಿಕೆ ನೀಡಿ ತಾನು ಪತಿಯ ಜೊತೆಯೇ ಇರುವುದಾಗಿ ಹೇಳಿರುವ ಕಾರಣ ಈ ಪ್ರಕರಣ ಸುಖಾಂತ್ಯಗೊಂಡಿದೆ.