ಸಾರ್ವಜನಿಕ ಸ್ಥಳದಲ್ಲಿ ಮದ್ಯ ಸೇವಿಸಿ ಗಲಾಟೆ ಮಾಡುತ್ತಿದ್ದ ಯುವಕನನ್ನ 112 ಪೊಲೀಸರು ಠಾಣೆಗೆ ಕರೆತಂದು ಆತನ ಪೊಷಕರ ಜೊತೆ ಕಳುಹಿಸಿದ್ದ ಪ್ರಕರಣ ಈಗ ತಿರುವು ಪಡೆದುಕೊಂಡಿದ್ದು ಘಟನೆ ನಡೆದು ನಾಲ್ಕು ದಿನಗಳ ಬಳಿಕ ಯುವಕ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಮೃತನ ಪತ್ನಿ ಪೊಲೀಸರ ಟಾರ್ಚರ್ ಗೆ ಸಾವನ್ಬಪ್ಪಿರುವುದಾಗಿ ಆರೋಪಿಸಿ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಶಿವಮೊಗ್ಗ ಜಿಲ್ಲೆ ಹೊಳೆಹೊನ್ನೂರು ಹೋಬಳಿಯ ಒಂದು ಗ್ರಾಮದ ನಿವಾಸಿ ಮಂಜುನಾಥ್. ಅವರು ಮೊನ್ನೆ 15 ನೇ ತಾರೀಖು ಮನೆಯ ಹಾಲ್ನಲ್ಲಿದ್ದ ಅಡಿಕೆ ದಬ್ಬೆಗೆ ಸೀರೆ ಕಟ್ಟಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಂಬಂಧ ಅವರ ಪತ್ನಿ ದೂರು ನೀಡಿದ್ದು ಪೊಲೀಸ್ ಸಿಬ್ಬಂಧಿ ನಡೆಸಿದೆ ಹಲ್ಲೆ ಕಾರಣಕ್ಕೆ ನೊಂದು ಮಂಜುನಾಥ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ. ಅಲ್ಲದೆ ತಮಗೆ ನ್ಯಾಯಬೇಕು ಎಂದು ಆಗ್ರಹಿಸಿದ್ದಾರೆ.
ಕಳೆದ 11 ನೇ ತಾರೀಖು ಮಂಜುನಾಥ್ ಹೊಳೆಹೊನ್ನೂರು ಪಟ್ಟಣ ಪಂಚಾಯಿತಿ ಎದುರು ನಿಂತಿದ್ದರಂತೆ. ಆ ಸಂದರ್ಭದಲ್ಲಿ ಅಲ್ಲಿಗೆ ಬಂದ ಪೊಲೀಸ್ ಸಿಬ್ಬಂದಿ, ಮಂಜುನಾಥ್ರನ್ನ ಹಿಗ್ಗಾಮುಗ್ಗಾ ಥಳಿಸಿದ್ದಾರೆ ಎಂಬುದು ಆರೋಪ. ಯಾವ ಕಾರಣಕ್ಕೆ ಥಳಿಸಿದ್ದರು ಎಂಬುದು ಇನ್ನಷ್ಟೆ ಗೊತ್ತಾಗಬೇಕಿದೆ. ಆದರೆ, ಕೈ, ಕಾಲು, ಕಪಾಳ, ಬೆನ್ನಿಗೆ ಥಳಿಸಿದ ಸಿಬ್ಬಂದಿ ಆನಂತರ ಮಂಜುನಾಥ್ನನ್ನ ಸ್ಟೇಷನ್ಗೆ ಕರೆದೊಯ್ದಿದ್ದಾರೆ. ಸಂಜೆ ಹೊತ್ತಿಗೆ ಆತನನ್ನ ಸಹೋದರ ಬಿಡಿಸಿಕೊಂಡು ಮನೆಗೆ ಬಂದಿದ್ದಾರೆ. ಆದರೆ ಈ ಘಟನೆ ನಂತರ ಮಂಜುನಾಥ್ ಖಿನ್ನತೆಗೆ ಜಾರಿದ್ದ, ಯಾರೊಂದಿಗೂ ಮಾತನಾಡದೇ ಮೌನಿಯಾಗಿದ್ದ ಮಂಜುನಾಥ್ 15 ರ ರಾತ್ರಿ ತನ್ನ ಪತ್ನಿಗೆ ಮನೆಮುಂದಿನ ಕೋಣೆಯಲ್ಲಿ ಮಲಗಲು ತಿಳಿಸಿದ್ದಾನೆ. ಆನಂತರ ಹಾಲ್ನಲ್ಲಿ ನೇಣುಬಿಗಿದುಕೊಂಡಿದ್ದಾನೆ. 16 ರ ಬೆಳಗ್ಗೆ ಪತ್ನಿ ಕೋಣೆಯಿಂದ ಹೊರಬಂದಾಗ ವಿಚಾರ ಗೊತ್ತಾಗಿದೆ. ಸದ್ಯ ಪ್ರಕರಣ ಸಂಬಂಧ ಹೊಳೆಹೊನ್ನೂರು ಇನ್ಸ್ಪೆಕ್ಟರ್ಗೆ ದೂರು ಸಲ್ಲಿಕೆಯಾಗಿದೆ. ಈ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆ ಇದೆ.
