ತೀರ್ಥಹಳ್ಳಿ : ರಾಜ್ಯದ ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು ರಾಜ್ಯದ ಪ್ರತಿಷ್ಠಿತ ಕ್ಷೇತ್ರವಾದ ತೀರ್ಥಹಳ್ಳಿಯಲ್ಲಿ ಈ ಬಾರಿ ಚುನಾವಣೆ ರಂಗೇರಿದೆ. ಈ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದ ಮದ್ಯೆ ಪೈಪೋಟಿ ಮತ್ತಷ್ಟು ರೋಚಕತೆಯಿಂದ ಇರಬಹುದು ಎಂದು ಅಂದಾಜಿಸಲಾಗುತ್ತಿದೆ.
ಕಿಮ್ಮನೆ ರತ್ನಾಕರ್ ಕಾಂಗ್ರೆಸ್ ಟಿಕೆಟ್ ಘೋಷಣೆ ಬೆನ್ನಲ್ಲೇ ಆರ್ ಎಂ ಮಂಜುನಾಥ ಗೌಡರು ವಿವಿಧ ಕಡೆ ತಮ್ಮ ಬೆಂಬಲಿಗರೊಂದಿಗೆ ಸಭೆ ನಡೆಸುತ್ತಿದ್ದ ಕಾರಣ ಬಂಡಾಯ ಏಳಬಹುದು ಎನ್ನಲಾಗುತಿತ್ತು.
ಆದರೆ ಜೋಡೆತ್ತುಗಳು ಒಂದಾಗಿ ಚುನಾವಣೆ ಎದುರಿಸಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ನಿರ್ಧರಿಸಿ ಕಾಂಗ್ರೆಸ್ ರಥ ಸಿದ್ದಪಡಿಸಿಕೊಂಡಿದ್ದು ಆರ್ ಎಂಎಂ ಸಾರಥಿಯಾಗಲು ಒಪ್ಪಿಕೊಂಡಿದ್ದಾರೆ.
ಆರ್ ಎಂಎಂ ಮನೆಗೆ ಕಿಮ್ಮನೆ ದಿಡೀರ್ ಭೇಟಿ
ಕಾಂಗ್ರೆಸ್ ಅಧಿಕೃತ ಅಭ್ಯರ್ಥಿ ಕಿಮ್ಮನೆ ರತ್ನಾಕರ್ ಶನಿವಾರ ಸಂಜೆ ನೇರವಾಗಿ ಆರ್ ಎಂಎಂ ಮನೆಗೆ ಮುಖಂಡರೊಂದಿಗೆ ತೆರಳಿ ಮಾತುಕತೆ ನಡೆಸುವ ಮೂಲಕ ಕ್ಷೇತ್ರದಾದ್ಯಂತ ಹುಟ್ಟಿಕೊಂಡಿದ್ದ ಉಹಾಪೋಹಗಳಿಗೆ ತೆರೆ ಎಳೆದಿದ್ದಾರೆ.
ಈ ಸಂಧರ್ಭದಲ್ಲಿ ಕಿಮ್ಮನೆ ನೇತೃತ್ವದ ಕಾಂಗ್ರೆಸ್ ರಥಕ್ಕೆ ಆರ್ ಎಂ ಮಂಜುನಾಥ್ ಗೌಡರನ್ನು ಸಾರಥಿಯಾಗುವಂತೆ ಕೇಳಿಕೊಂಡಿದ್ದು ಇದಕ್ಕೆ ಆರ್ ಎಂಎಂ ಸಹಮತ ವ್ಯಕ್ತಪಡಿಸಿದ್ದಾರೆ.
ಏ.12 ರಿಂದ ಸಭೆಗಳಿಗೆ ಜೋಡೆತ್ತುಗಳು ಒಟ್ಟಾಗಿ ಚುನಾವಣೆ ಪ್ರಚಾರ ಕಾರ್ಯದಲ್ಲಿ ನಿರತರಾಗಲು ನಿರ್ಧರಿಸಲಾಗಿದೆ ಎನ್ನಲಾಗುತ್ತಿದೆ.
ಒಟ್ಟಾರೆಯಾಗಿ ತೀರ್ಥಹಳ್ಳಿ ಕ್ಷೇತ್ರದಾದ್ಯಂತ ಕಾಂಗ್ರೆಸ್ ಕಾರ್ಯಕರ್ತರಲ್ಲಿದ್ದ ಗೊಂದಲ ಸದ್ಯಕ್ಕೆ ಬಗೆಹರಿದಿದ್ದು ಕಾರ್ಯಕರ್ತರ ಉತ್ಸಾಹವನ್ನು ಇಮ್ಮಡಿಗೊಳಿಸಿದೆ.