ಶುದ್ದ ರಾಜಕಾರಣದ ಮಾತನಾಡುವ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ಇಬ್ಬರು ಅಭ್ಯರ್ಥಿಗಳು ಚುನಾವಣೆ ಹಿಂದಿನ ದಿನ ತಮ್ಮ ಕಾರ್ಯಕರ್ತರ ಮೂಲಕ ಮತದಾರನ ಮನೆ ಬಾಗಿಲು ತಟ್ಟುವುದು ಯಾಕೆ ಎಂದು  ಜೆಡಿಎಸ್ ಪಕ್ಷದ ಅಭ್ಯರ್ಥಿ ಯಡೂರು ರಾಜಾರಾಂ ಪ್ರಶ್ನೆ ಮಾಡಿದರು.
ಹುಂಚಾ ಹೋಬಳಿ ವ್ಯಾಪ್ತಿಯ ಹುಂಚ, ಹೆದ್ದಾರಿಪುರ, ಕೋಡೂರು, ಅಮೃತ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಬರುವ ಹಲವು ಗ್ರಾಮಗಳಿಗೆ ಭೇಟಿ ನೀಡಿ ಮತಯಾಚಿಸಿ ಕಲ್ಲೂರು ಗ್ರಾಮದಲ್ಲಿ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಿ,ಸಚ್ಚಾರಿತ್ರ್ಯದ ನಾಟಕವಾಡುವ ಇಬ್ಬರು ರಾಷ್ಟ್ರೀಯ ಪಕ್ಷದ ರಾಜಕಾರಣಿಗಳು ಚುನಾವಣೆಯ ಹಿಂದಿನ ದಿನ ಮತದಾರನ ಮನೆ ಬಾಗಿಲಿಗೆ ಹೋಗಿ ಹಣ ಹೆಂಡ ಹಂಚುವ ಹುನ್ನಾರ ನಡೆಸಿದ್ದಾರೆ ಎಂದು ಆರೋಪಿಸಿದರು.
ಮೇ 10 ರಂದು ನಡೆಯುವ ವಿಧಾನಸಭಾ ಕ್ಷೇತ್ರದ ತೀರ್ಥಹಳ್ಳಿ ಕ್ಷೇತ್ರದ ಜೆಡಿಎಸ್ ಪಕ್ಷದ ಅಭ್ಯರ್ಥಿ ರಾಜಾರಾಂ ವಿರುದ್ದ ಕಾಂಗ್ರೆಸ್ ಪಕ್ಷದವರು ಇಲ್ಲಸಲ್ಲದ ಆರೋಪ ನಡೆಸುತ್ತಾ ನನ್ನ ತೇಜೋವಧೆ ಮಾಡುವ ಹುನ್ನಾರ ನಡೆಸುತ್ತಿದ್ದಾರೆಂದು ಆರೋಪಿಸಿದರು.
 ರಾಜ್ಯಕ್ಕೆ ಬೆಳಕು ನೀಡುವ ಉದ್ದೇಶದಿಂದಾಗಿ ಶರಾವತಿ ಚಕ್ರಾ, ವರಾಹಿ, ಸಾವೇಹಕ್ಲು, ಮುಳುಗಡೆ ಸಂತ್ರಸ್ತರ ಸಮಸ್ಯೆಗಳು ಕ್ಷೇತ್ರದಲ್ಲಿ ಇಂದಿಗೂ ಜೀವಂತವಾಗಿವೆ. ಕ್ಷೇತ್ರದ ಜ್ವಲಂತ ಸಮಸ್ಯೆಗಳಿಗೆ ಸೂಕ್ತ ಕಲ್ಪಿಸುವಲ್ಲಿ ಕಳೆದ ನಾಲ್ಕು ದಶಕಗಳಿಂದ ಆಡಳಿತ ನಡೆಸಿದ ಎಲ್ಲಾ ರಾಷ್ಟ್ರೀಯ ಪಕ್ಷಗಳ ಜನಪ್ರತಿನಿಧಿಗಳು ಸೋತಿದ್ದಾರೆ. ಇದಕ್ಕಾಗಿ ಈ ಭಾರಿ ಜೆಡಿಎಸ್ ಪಕ್ಷದ ಆಭ್ಯರ್ಥಿಗೆ ತಮ್ಮ ಮತ ನೀಡುವ ಮೂಲಕ ರಾಜ್ಯದಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದ ಜೆಡಿಎಸ್ ಸರ್ಕಾರ ಅಧಿಕಾರದ ಚುಕ್ಕಾಣಿ ಹಿಡಿಯುವಂತೆ ಆಶೀರ್ವದಿಸಬೇಕೇಂದು ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಯಡೂರು ರಾಜಾರಾಂ ಮತದಾರರಲ್ಲಿ ಮನವಿ ಮಾಡಿದರು.
ಬರೀ ರಸ್ತೆ, ಚರಂಡಿ, ಮೋರಿ ಸೇತುವೆ ನಿರ್ಮಾಣದಿಂದ ಕ್ಷೇತ್ರದ ಅಭಿವೃದ್ದಿ ಸಾಧ್ಯವಿಲ್ಲ. ದುಡಿಯುವ ಕೈಗಳಿಗೆ ಕೆಲಸದ ಅವಶ್ಯಕತೆ ಇದೆ. ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಆಗಲಿ ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ ಆಗಲಿ ಕ್ಷೇತ್ರಕ್ಕೆ ಈವರೆಗೂ ಯಾವುದೇ ಕೈಗಾರಿಕೆ ಕಾರ್ಖಾನೆಗಳನ್ನು ತರುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಇದರಿಂದಾಗಿ ಯುವ ವಿದ್ಯಾವಂತ ಯುವ ಸಮೂಹ ಮಹಾನಗರಗಳತ್ತ ಮುಖಮಾಡಿದ್ದಾರೆ. ಯುವ ಸಮೂಹ ಸ್ಥಳೀಯ ಕೊಂಡಿ ಕಳಚದಂತೆ ನೋಡಿಕೊಳ್ಳುವ ಹೊಣೆಗಾರಿಕೆ ಪ್ರತಿಯೊಬ್ಬ ನಾಗರೀಕನ ಮೇಲಿದೆ. ಅಲ್ಲದೆ ಸ್ಥಳೀಯವಾಗಿ ಉದ್ಯೋಗ ಸೃಷ್ಠಿಯ ಅಗತ್ಯತೆಯೂ ಇದೆ. ಆದರೆ ಇಂತಹ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳದೇ ಹಾಲಿ ಹಾಗೂ ಮಾಜಿ ಶಾಸಕರು ಇದು ಕೊನೆಯ ಚುನಾವಣೆ ದಯಮಾಡಿ ಗೆಲ್ಲಿಸಿ ಎಂದು ಮತದಾರರಲ್ಲಿ ಗೀಳಿಡುತ್ತಿರುವುದು ನೋವಿನ ಸಂಗತಿಯಾಗಿದೆ ಎಂದು ಆರೋಪಿಸಿದರು.
ಆಧಿಕಾರ ಇರಲಿ ಇಲ್ಲದೇ ಇರಲಿ ನಾನು ಜನನಾಯಕ ಕುಮಾರಣ್ಣ ಪಕ್ಷವನ್ನು ಬಿಡದೇ ನನ್ನ ಉಸಿರಿರುವವರೆಗೂ ನಾನು ಜೆಡಿಎಸ್ ಪಕ್ಷದಲ್ಲಿದ್ದು ಕ್ಷೇತ್ರದ ಸರ್ವಾಂಗೀಣ ಅಭಿವೃದ್ದಿಗೆ ಸ್ಪಂದಿಸುವುದಾಗಿ ತಿಳಿಸಿ ಎಂತಹ ಸಮಸ್ಯೆ ಎದುರಾದರೂ ಎದುರಿಸುವುದಾಗಿ ಹೇಳಿ ಶಾಂತವೇರಿ ಗೋಪಾಲಗೌಡರ ಭಾವಚಿತ್ರವನ್ನು ಹಿಡಿದುಕೊಂಡು ಬಾವುಕರಾಗುವುದರೊಂದಿಗೆ ಗಳಗಳನೇ ಬಿಕ್ಕಳಿಸಿ ಕಣ್ಣೀರು ಹಾಕಿದರು.
ಶಿವಮೊಗ್ಗ ಜಿಲ್ಲೆಯಲ್ಲಿ ಕಲ್ಲೂರು ಎರಡನೇ ಹಾಸನವೆಂದು ಹೇಳಿ ಇಲ್ಲಿನ ಮತದಾರರು ಸದಾ ಜೆಡಿಎಸ್ ಮುಖಂಡ ದೇವೇಗೌಡರು ಮತ್ತು ಕುಮಾರಣ್ಣನವರ ಕೈಬಿಡದೇ ಭದ್ರಕೋಟೆಯನ್ನಾಗಿಸಿದ್ದಾರೆಂದರು.
ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಎನ್.ವರ್ತೇಶ್, ಕಾರ್ಯದರ್ಶಿ ತ್ರಿಣಿವೆ ಜಯರಾಂಶೆಟ್ಟಿ, ತೀರ್ಥಹಳ್ಳಿ ತಾಲ್ಲೂಕಿನ ಪಕ್ಷದ ಪ್ರಮುಖ ರಾಘವೇಂದ್ರ ತೆಲಗಿ, ಕಲ್ಲೂರು ಈರಪ್ಪ, ಪ್ರವೀಣ್ ಕಟ್ಟೆ ಪಕ್ಷದ ಇನ್ನಿತರ ಮುಖಂಡರು ಹಾಜರಿದ್ದರು.
 
                         
                         
                         
                         
                         
                         
                         
                         
                         
                        