ರಿಪ್ಪನ್ ಪೇಟೆ : ಜ್ಞಾನವು ಎಲ್ಲರನ್ನೂ ಸನ್ಮಾರ್ಗಕ್ಕೆ ತೆಗೆದುಕೊಂಡು ಹೋಗುವ ದಿವ್ಯಶಕ್ತಿಯಾಗಿದೆ. ಅಜ್ಞಾನದಿಂದ, ಅಂಧಕಾರದಿಂದ ಬೆಳಕಿನ ಕಡೆಗೆ ತೆಗೆದುಕೊಂಡು ಹೋಗುವ ಶಕ್ತಿ ಜ್ಞಾನದಲ್ಲಿರುತ್ತದೆ. ಜ್ಞಾನದ ಶಕ್ತಿಯು ಪ್ರತಿಯೊಬ್ಬರಲ್ಲಿಯೂ ಕೂಡ ಸಮನಾಗಿದ್ದರೂ ಅದರ ಅಭಿವೃದ್ಧಿ ಎಲ್ಲರಲ್ಲಿಯೂ ಸಮಾನಾಗಿರುವುದಿಲ್ಲ. ಎಲ್ಲಾ ಶಿಲೆಯಲ್ಲಿಯೂ ಮೂರ್ತಿಯಾಗುವ ಅರ್ಹತೆ ಇದ್ದರೂ ಶಿಲ್ಪಿ ತನ್ನ ಕೌಶಲ್ಯವನ್ನು ಎಷ್ಟರ ಮಟ್ಟಿಗೆ ಉಪಯೋಗಿಸುತ್ತಾನೆಯೂ ಅಷ್ಟರ ಮಟ್ಟಿಗೆ ಅದು ರೂಪುಗೊಳುತ್ತದೆ. ಹಾಗೆಯೇ ಮನುಷ್ಯನು ತನ್ನಲ್ಲಿರುವ ಜ್ಞಾನದ ಶಕ್ತಿಯನ್ನು ರೂಪುಗೊಳಿಸಿಕೊಳ್ಳಬೇಕು ಎಂದು ಹೊಂಬುಜ ಜೈನ ಮಠದ  ಡಾ. ಶ್ರೀ ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಗಳವರು ಆಶೀರ್ವಚನ ನೀಡಿದರು.
ಶಿವಮೊಗ್ಗ ಜಿಲ್ಲೆಯ ಹೊಸನಗರ  ತಾಲ್ಲೂಕಿನ ರಿಪ್ಪನ್ ಪೇಟೆ ಸಮೀಪದ ಗುಡ್ಡದ ಬಸದಿ ತ್ರಿಕೂಟ ಜಿನಾಲಯದಲ್ಲಿ  10ನೇ ವರ್ಷದ ವಾರ್ಷಿಕ ಪೂಜಾ ಮಹೋತ್ಸವದ ಪಾವನ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. 
ಸಾಮರಸ್ಯದ ಸಮಾಜ ನಿರ್ಮಾಣದ ಜವಾಬ್ದಾರಿ ಪ್ರತಿಯೊಬ್ಬ ಪ್ರಜೆಯ ಹೊಣೆಗಾರಿಕೆಯಾಗಿದ್ದು, ಅನುಷ್ಠಾನಗೊಳಿಸುವಲ್ಲಿ ಜನತೆ ಪ್ರಮುಖ ಪಾತ್ರ ವಹಿಸಬೇಕಿದೆ ಎಂದರು.
ಮುನಿಗಳಿಗೆ ಆಹಾರ ದಾನ ಮಾಡುವುದು ‘ಅಕ್ಷಯ ಪುಣ್ಯಕ್ಕೆ ಕಾರಣ’ವೃಷಭನಾಥರಿಗೆ ಮೊದಲು ಆಹಾರ (ಪಾರಣಾ) ವಾದ ದಿವಸ ವೈಶಾಖ ಶುಕ್ಲ ತೃತೀಯ ತಿಥಿಯಿದ್ದ ಕಾರಣ ಆ ದಿನವನ್ನು ಅಕ್ಷಯ ತೃತೀಯವೆಂದು ಆಚರಿಸಲಾಗುತ್ತದೆ. ಜೈನ ಧರ್ಮದಲ್ಲಿ ಮುನಿಗಳಿಗೆ ಆಹಾರ ದಾನ ಮಾಡುವುದೆಂದರೆ ಅತ್ಯಂತ ಅತಿಶಯ, ಅಕ್ಷಯ ಪುಣ್ಯಕ್ಕೆ ಕಾರಣ ಎಂದು ಹೇಳಲಾಗಿದೆ. ಈ ದಿನ ಬಸದಿಗಳಲ್ಲಿ ವಿಶೇಷವಾಗಿ ಅಭಿಷೇಕ ಪೂಜೆ, ಉತ್ಸವಗಳನ್ನು ಆಚರಿಸಲಾಗುತ್ತದೆ. ಈ ದಿನ ದಿಗಂಬರ ಮುನಿಗಳಿಗೆ, ವಿಶೇಷವಾಗಿ ಕಬ್ಬಿನ ಹಾಲನ್ನು ಆಹಾರ ದಾನದಲ್ಲಿ ನೀಡುವುದರಿಂದ ದವಸ-ಧಾನ್ಯಗಳು, ಮನೆಯಲ್ಲಿ ಸುಖ-ನೆಮ್ಮದಿ ಅಕ್ಷಯವಾಗಿ ವೃದ್ಧಿಯಾಗುತ್ತದೆ ಎಂದರು.
	ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ಭಗವಾನ ಶ್ರೀ ಪಾರ್ಶ್ವನಾಥ ಸ್ವಾಮಿ, ಭಗವಾನ ಶ್ರೀ ಶಾಂತಿನಾಥ ಸ್ವಾಮಿ, ಭಗವಾನ ಶ್ರೀ ಬಾಹುಬಲಿ ಸ್ವಾಮಿಗೆ ವಿಶೇಷ ಪಂಚಾಮೃತ ಅಭಿಷೇಕ ಹಾಗೂ 108 ಕಳಶಾಭಿಷೇಕಗಳು ನೆರವೇರಿಸಲಾಯಿತು. ಈ ಸುಸಂದರ್ಭದಲ್ಲಿ ಧರಣೇಂದ್ರ ಯಕ್ಷ ಹಾಗೂ ಪದ್ಮಾವತಿ ದೇವಿಯ ವಿಶೇಷ ಪೂಜಾ ಕಾರ್ಯಗಳು ಸಂಪನ್ನಗೊಂಡವು.ದೇಶದ ಹಾಗೂ  ರಾಜ್ಯದ  ವಿವಿಧಡೆಯಿಂದ  ಆಗಮಿಸಿದ   ಜೈನ ಬಾಂಧವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
		 
                         
                         
                         
                         
                         
                         
                         
                         
                         
                        