ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನ ಪಟ್ಟಣದ ಸಮೀಪವಿರುವ ಮಾರ್ಕೆಟ್ ಬಳಿಯಲ್ಲಿ ವ್ಯಕ್ತಿಯೊಬ್ಬರ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಲಾಗಿದೆ. ನಿನ್ನೆ ರಾತ್ರಿ ಈ ಘಟನೆ ನಡೆದಿರುವ ಸಾಧ್ಯತೆ ಇದ್ದು, ಸ್ಥಳಕ್ಕೆ ಪೊಲೀಸರು ತೆರಳಿ ಪರಿಶೀಲನೆ ನಡೆಸುತಿದ್ದಾರೆ.
ಕೊಲೆಯಾದ ವ್ಯಕ್ತಿಯನ್ನು ತೀರ್ಥಹಳ್ಳಿ ಪೊಲೀಸ್ ಸ್ಟೇಷನ್ನಲ್ಲಿ ಪೇದೆಯಾಗಿ ಕೆಲಸ ನಿರ್ವಹಿಸಿದ್ದ ಪೂರ್ಣೇಶ್ ಎಂದು ಗುರುತಿಸಲಾಗಿದೆ.
ಮದ್ಯವ್ಯಸನಿಯಾಗಿದ್ದ ಪೂರ್ಣೇಶ್, ಇದೇ ಕಾರಣಕ್ಕೆ ಪೊಲೀಸ್ ಕೆಲಸದಿಂದ ವಜಾಗೊಂಡಿದ್ದ ಎನ್ನಲಾಗಿದೆ.
ತೀರ್ಥಹಳ್ಳಿಯ ಮೀನು ಮಾರುಕಟ್ಟೆಯಲ್ಲಿ ಘಟನೆ ಸಂಭವಿಸಿದೆ. ಮೃತನನ್ನು ಪೂರ್ಣೇಶ್ ಎಂದು ಗುರುತಿಸಲಾಗಿದೆ. ಪೂರ್ಣೇಶ್ ಅವರ ತಲೆ ಮೇಲೆ ಕಲ್ಲು ಹೊತ್ತು ಹಾಕಿರುವ ಶಂಕೆ ಇದೆ. ಮೃತದೇಹದ ಪಕ್ಕದಲ್ಲಿ ದೊಡ್ಡ ಕಲ್ಲು ಇದೆ. ರಕ್ತದ ಮಡುವಿನಲ್ಲಿ ಮೃತದೇಹ ಇರುವುದನ್ನು ಕಂಡು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಪೂರ್ಣೇಶ್ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಈ ಹಿಂದೆ ಜೋಗ, ತೀರ್ಥಹಳ್ಳಿ, ಆಗುಂಬೆ, ಮಾಳೂರು ಪೊಲೀಸ್ ಠಾಣೆಗಳಲ್ಲಿ ಸೇವೆ ಸಲ್ಲಿಸಿದ್ದರು. ಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ತೀರ್ಥಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.