Headlines

ಗೃಹ ಸಚಿವರ ಕ್ಷೇತ್ರದಲ್ಲಿ ಹಲವು ದಶಕಗಳಿಂದ ಮರೀಚಿಕೆಯಾದ ಮೂಲ ಸೌಕರ್ಯ – ಮಾದ್ಲುಮನೆ ,ಉಂಬ್ಳೆಬೈಲ್ ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರ

ದಶಕಗಳಿಂದ ಮರೀಚಿಕೆಯಾದ ಮೂಲ ಸೌಕರ್ಯ – ಮಾದ್ಲುಮನೆ ,ಉಂಬ್ಳೆಬೈಲ್ ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರ

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಹುಂಚದಕಟ್ಟೆ ಗ್ರಾಪಂ ವ್ಯಾಪ್ತಿಯ ಮೂಲಸೌಕರ್ಯ ವಂಚಿತ ಮಾದ್ಲುಮನೆ ,ಉಂಬ್ಳೆಬೈಲು ಗ್ರಾಮಸ್ಥರು ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಮತದಾನ ಬಹಿಷ್ಕರಿಸಲು ನಿರ್ಧರಿಸಿದ್ದಾರೆ. 




60 ವರ್ಷಗಳಿಂದ ಗ್ರಾಮ ಮೂಲಭೂತ ಸೌಕರ್ಯ ವಂಚಿತವಾಗಿದ್ದು, ಚುನಾವಣಾ ಸಮಯದಲ್ಲಿ ಜನಪ್ರತಿನಿಧಿಗಳ ಸುಳ್ಳು ಭರವಸೆಗಳಿಗೆ ತುತ್ತಾಗಿರುವುದಕ್ಕೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 


ಸುಳ್ಳು ಭರವಸೆಗಳಿಂದ ಬೇಸತ್ತಿರುವ ಗ್ರಾಮಸ್ಥರು, ಸಾಮೂಹಿಕವಾಗಿ ಚುನಾವಣೆಯನ್ನು ಬಹಿಷ್ಕರಿಸುತ್ತಿರುವುದಾಗಿ ಘೋಷಿಸಿದ್ದಾರೆ. ಗ್ರಾಮಸ್ಥರಿಗೆ ಚುನಾವಣೆಯನ್ನು ಬಹಿಷ್ಕರಿಸಲು ಕರೆ ನೀಡಲಾಗಿದೆ.


ವಿದ್ಯಾರ್ಥಿಗಳು ಶಾಲೆಗೆ ಹೋಗುವುದಕ್ಕೆ ಯುವಕರು ಕೆಲಸಕ್ಕೆ ಹೋಗುವುದಕ್ಕೆ, ಸರಕು ಸಾಗಣೆಗೂ ಇದೇ ಮಾರ್ಗ ಬಳಸಬೇಕಾಗಿದ್ದು, ಹದಗೆಟ್ಟ ರಸ್ತೆಯಲ್ಲಿ ಬಿದ್ದು ಅನೇಕರು ಕಾಲು ಮುರಿದುಕೊಂಡಿದ್ದಾರೆ. ಕುಡಿಯುವ ನೀರು ಸಮರ್ಪಕವಾಗಿ ನೀಡುತ್ತಿಲ್ಲ,ಹಲವಾರು ದಶಕಗಳಿಂದ ನಮ್ಮೂರಿಗೆ ಒಂದು ನಯಾ ಪೈಸೆ ಸರ್ಕಾರದಿಂದ ಅನುದಾನ ದೊರಕಿಲ್ಲ ಎಂದು ತಮ್ಮ ಸಮಸ್ಯೆಗಳನ್ನು ತಿಳಿಸಿದ್ದಾರೆ.

ಕ್ಷೇತ್ರದ ಶಾಸಕ ಆರಗ ಜ್ಞಾನೇಂದ್ರ ಗೃಹ ಸಚಿವರಾದರೂ ರಸ್ತೆ ಅಭಿವೃದ್ಧಿ ಆಗಿಲ್ಲ. ಜಿಲ್ಲಾ, ತಾಲೂಕು, ಗ್ರಾ.ಪಂ. ಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನ ಆಗಿಲ್ಲ. ಶಾಲಾ ಮಕ್ಕಳು ಸೇರಿದಂತೆ ಗ್ರಾಮಸ್ಥರ ಸಂಚಾರಕ್ಕೆ ಹಳ್ಳ ಗುಂಡಿಯ ರಸ್ತೆ ಮಾರ್ಗ ಅನಿವಾರ‍್ಯ. ಮತ ಕೊಟ್ಟರೂ ಕೆಲಸ ಆಗಲ್ಲ ಎಂದ ಮೇಲೆ ಮತ ಕೊಡದೆ ಸುಮ್ಮನಿರುವುದು ಲೇಸು ಎಂಬುದು ಗ್ರಾಮಸ್ಥರ ದಿಟ್ಟ ನಿರ್ಧಾರವಾಗಿದೆ.




ಹುಂಚದಕಟ್ಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಉಂಬ್ಳೆಬೈಲು, ಮಾದ್ಲುಮನೆ, ಸಣ್ಣಮನೆ, ಹೊಸಕೊಪ್ಪ, ಕಪ್ಪೆಹೊಂಡ, ಆಲೂರು, ಹತ್ತಳ್ಳಿ, ಚಿಕ್ಕಮತ್ತಿಗ, ಕಲ್ಲಳ್ಳಿ, ಶಿವಳ್ಳಿಕೊಪ್ಪ, ದೇಮ್ಲಾಪುರ, ಮಳಲಿಮಕ್ಕಿ, ಕೋಣಂದೂರು ಸಂಪರ್ಕಿಸುವ ನಾಲ್ಕೈದು ಕಿ. ಮೀ ರಸ್ತೆಯು ಸಂಪೂರ್ಣ ಹದಗೆಟ್ಟ ಕಾರಣ ಕಾಲ್ನಡಿಗೆಯಲ್ಲೂ ಹೋಗುವುದು ಕಷ್ಟಕರವಾಗಿದ್ದು, ತುರ್ತು ಪರಿಸ್ಥಿತಿಯಲ್ಲಿ ಯಾವ ಆಟೋ ಚಾಲಕರು, ಆ್ಯಂಬುಲೆನ್ಸ್, ಶಾಲಾ ವಾಹನಗಳು, ಈ ರಸ್ತೆಯಲ್ಲಿ ಬರಲು ಒಪ್ಪದೆ ಇರುವುದರಿಂದ ನಿತ್ಯ ಸಂಕಷ್ಟದಲ್ಲಿ ದಿನ ಕಳೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಸರಕು ಸಾಮಾನುಗಳನ್ನು ತಲೆ ಮೇಲೆ ಹೊತ್ತುಕೊಂಡು ಹೋಗುವ ಪರಿಸ್ಥಿತಿ ಇಲ್ಲಿಂದಾಗಿದೆ.

ರಸ್ತೆ ಹದಗೆಟ್ಟಿರುವ ಬಗ್ಗೆ ಇಲ್ಲಿನ ಜನಪ್ರತಿನಿಧಿಗಳ ಹತ್ತಿರ ಸುಮಾರು ಇಪ್ಪತ್ತು ವರ್ಷಗಳಿಂದ ಸರಿ ಮಾಡಿಸಿಕೊಡುವಂತೆ ಮನವಿ ಮಾಡಿದರೂ ಯಾವುದೇ ರೀತಿಯ ಪ್ರಯೋಜನವಾಗಿಲ್ಲ ಎಂದು ಗ್ರಾಮದ ನಾಗರಿಕರು ಚುನಾವಣಾ ಬಹಿಷ್ಕಾರಕ್ಕೆ ಮುಂದಾಗಿದ್ದಾರೆ.

ಸದ್ಯ ಇದೀಗ ತಮ್ಮ ಗ್ರಾಮಕ್ಕೆ ಕನಿಷ್ಠ ಸೌಲಭ್ಯವನ್ನೂ ಒದಗಿಸಿಕೊಡದ ಜನಪ್ರತಿನಿಧಿಗಳ ವಿರುದ್ಧ ಸಿಟ್ಟಿಗೆದ್ದ ಹಲವು ಗ್ರಾಮಸ್ಥರು ಚುನಾವಣಾ ಬಹಿಷ್ಕಾರ ಹಾಕ್ತಿದ್ದಾರೆ. ನಮ್ಮೂರಿಗೆ ಸೌಕರ್ಯ ಒದಗಿಸದ ಜನಪ್ರತಿನಿಧಿಗಳ ವಿರುದ್ಧ ಸಿಟ್ಟಿಗೆದ್ದು “ನೀವೇನಾರಾ ಹೇಳಿ, ನಾವ್ ವೋಟ್ ಹಾಕಲ್ಲ” ಎಂದು ಬಂಡೇಳುತ್ತಿದ್ದಾರೆ.

ಕೋಣಂದೂರು ಲಯನ್ಸ್ ನಿರ್ದೇಶಕ ನಾಗೇಶ್ ಉಂಬ್ಳೆಬೈಲು, ಹುಂಚದಕಟ್ಟೆ ಗ್ರಾಮ ಪಂಚಾಯ್ತಿ ಸದಸ್ಯ ಎಸ್.ಕೆ.ಶಿವಾನಂದ ಹಾಗೂ ಗ್ರಾಮ ಪಂಚಾಯ್ತಿ ಮಾಜಿ ಸದಸ್ಯೆ ಶೈಲಜಾ ವೆಂಕಟೇಶ್ ಗ್ರಾಮಸ್ಥರಾದ ಕೆ.ಸಿ.ರಮೇಶ್, ಸೀತಾರಾಮ,ಗಣೇಶ್ ಮಾದ್ಲಮನೆ, ಪುಟ್ಟಸ್ವಾಮಿ, ಮುರಳಿಧರ ಇನ್ನಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.



Leave a Reply

Your email address will not be published. Required fields are marked *