Headlines

ಮೇ.10 ರಂದು ಮತದಾನ,ಮೇ 13ಕ್ಕೆ ಫಲಿತಾಂಶ-ಇಂದಿನಿಂದಲೇ ನೀತಿ ಸಂಹಿತೆ ಜಾರಿ|ನೀತಿ ಸಂಹಿತೆ ಅಂದ್ರೆ ಏನು ? ಹೇಗಿರುತ್ತೆ? ಇಲ್ಲಿದೆ ಮಾಹಿತಿ|election

ಕರ್ನಾಟಕ ವಿಧಾನಸಭಾ ಚುನಾವಣಾ  ದಿನಾಂಕವನ್ನು ಕೇಂದ್ರ ಚುನಾವಣಾ ಆಯೋಗ ಘೋಷಣೆ ಮಾಡಿದ್ದು, ಮೇ 10ರಂದು ರಾಜ್ಯಾದ್ಯಂತ ಏಕಕಾಲಕ್ಕೆ ಚುನಾವಣೆ ನಡೆಯಲಿದೆ.




ದೆಹಲಿಯ ವಿಜ್ಞಾನ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಚುನಾವಣಾ ಆಯೋಗದ ಮುಖ್ಯಸ್ಥ ರಾಜೀವ್ ಕುಮಾರ್, ಮೇ 10ರಂದು ಕರ್ನಾಟಕದಲ್ಲಿ ಚುನಾವಣೆ ನಡೆಯಲಿದೆ. ಒಂದೇ ಹಂತದಲ್ಲಿ ಮತದಾನ ನಡೆಯುತ್ತದೆ. ಮೇ 13 ಕ್ಕೆ ಫಲಿತಾಂಶ ಪ್ರಕಟವಾಗಲಿದೆ.   ಇಂದಿನಿಂದಲೇ ಚುನಾವಣಾ ನೀತಿ ಸಂಹಿತೆ ಜಾರಿಯಾಗಲಿದೆ.

ಕರ್ನಾಟಕ ಎಲೆಕ್ಷನ್‌ ಮತ್ತು ಉಪಚುನಾವಣೆ ದಿನಾಂಕ ಪ್ರಕಟಿಲಿದ್ದೇವೆ. ಇತ್ತೀಚೆಗೆ ಈಶಾನ್ಯ ರಾಜ್ಯದ ಚುನಾವಣೆಗಳನ್ನು ಯಶಸ್ವಿಯಾಗಿ ಮುಗಿಸಿದ್ದೇವೆ. ಸದ್ಯ ಕರ್ನಾಟಕ ಚುನಾವಣೆಗೆ ಎಲ್ಲಾ ಸಿದ್ಧತೆಗಳು ನಡೆದಿವೆ. ಕರ್ನಾಟಕದಲ್ಲಿ 5,21,73579 ಒಟ್ಟು ಮತದಾರರಿದ್ದು, 2, 62,42, 561 ಪುರುಷರು, 2,59,26,319 ಮಹಿಳೆಯರು, 4,699 ತೃತೀಯ ಲಿಂಗಿ ಹಾಗೂ 5.55 ಲಕ್ಷ ದಿವ್ಯಾಂಗ ಮತದಾರರಿದ್ದಾರೆ. 9.17.241 ಮಂದಿ ಮೊದಲ ಸಲ ಮತದಾನ ಮಾಡುತ್ತಿದ್ದಾರೆ ಎಂದು  ಹೇಳಿದರು.



2023ರ ಮೇ 23ರ ಒಳಗೆ ವಿಧಾನಸಭೆ ಅಂತ್ಯವಾಗಬೇಕು. ಅದಕ್ಕೂ ಮುನ್ನ ಹೊಸ ಸರ್ಕಾರ ರಚನೆ ಆಗಬೇಕು. ಮೇ 24ಕ್ಕೆ ವಿಧಾನಸಭೆ 15ನೇ ವಿಧಾನಸಭೆ ಅವಧಿ ಮುಕ್ತಾಯವಾಗಲಿದೆ.  ಮೊದಲ ಬಾರಿಗೆ 80 ವರ್ಷ ಮೇಲ್ಪಟ್ಟವರಿಗೆ ಮನೆಯಿಂದ ಮತ ಚಲಾಯಿಸುವ ಅವಕಾಶ ನೀಡಲಾಗುತ್ತಿದೆ. ಸಾಕಷ್ಟು ಚಾಲೆಂಜ್ ಗಳಿವೆ, ಅವುಗಳನ್ನು ಸುಧಾರಿಸಿದೆ.  ಬುಡಕಟ್ಟು ಸಮುದಾಯ ಮತದಾನಕ್ಕೂ ವ್ಯವಸ್ಥೆ ಮಾಡಲಾಗಿದೆ. ತೃತೀಯ ಲಿಂಗಿಗಳು ಮತದಾರರ ಸೇರ್ಪಡೆಗೆ ಹಿಂದೇಟು ಹಾಕುತ್ತಾರೆ. ಅವರಿಗೆ ನೋಂದಣಿ ಮಾಡಿಕೊಳ್ಳಲು ಮನವಿ ಮಾಡಲಾಗಿದೆ ಎಂದರು.

58,282 ಒಟ್ಟು ಮತಗಟ್ಟೆಗಳ ಸ್ಥಾಪನೆ ಮಾಡಲಾಗುತ್ತಿದೆ. ಒಂದೊಂದು ಮತಗಟ್ಟೆಗೆ 883 ಮಂದಿ ಮತದಾರರಿಗೆ ಅವಕಾಶ ಮಾಡಿಕೊಡಲಾಗುತ್ತದೆ. ನಗರ ಪ್ರದೇಶದಲ್ಲಿ 24,063, ಗ್ರಾಮೀಣ ಭಾಗದಲ್ಲಿ 34,219 ಹಾಗೂ 1320 ಮಹಿಳಾ ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತದೆ. ಇನ್ನು ಯುವಕರಿಗಾಗಿ 224 ಮತಗಟ್ಟೆಗಳ ಸ್ಥಾಪನೆ ಮಾಡಲಾಗುತ್ತದೆ ಎಂದು ತಿಳಿಸಿದರು.

ಇತರೆ ಮಹಾನಗರಗಳಿಗೆ ಹೋಲಿಸಿದರೆ ಬೆಂಗಳೂರಿನಲ್ಲಿ ಮತದಾನದ ಪ್ರಮಾಣ ಉತ್ತಮವಾಗಿದೆ. ಕಳೆದ ಬಾರಿ ಬೆಂಗಳೂರಿನಲ್ಲಿ ಕಡಿಮೆ ಮತದಾನವಾಗಿದೆ. ಹೀಗಾಗಿ ಈ ಬಾರಿ ಮತದಾನ ಹೆಚ್ಚಿಸಲು ಪ್ರಯತ್ನ ಮಾಡುತ್ತಿದ್ದು, ಮತದಾನ ಹೆಚ್ಚಿಸಲು ಜಾಗೃತಿ ಮೂಡಿಸಲಾಗುತ್ತಿದೆ. ಬಹಳಷ್ಟು ಐಟಿ ಕಂಪನಿಗಳು ಇದಕ್ಕೆ ಸಹಕಾರ ನೀಡುತ್ತಿವೆ.

ಅಭ್ಯರ್ಥಿಗಳ ಮಾಹಿತಿ, ಪ್ರಮಾಣ ಪತ್ರ ಚುನಾವಣಾ ವೆಬ್‌ಸೈಟ್‌ನಲ್ಲಿ ಲಭ್ಯವಾಗಲಿದೆ. ಈ ಮೂಲಕ ಜನರು ತಮ್ಮ ಅಭ್ಯರ್ಥಿಯ ಬಗ್ಗೆ ಮಾಹಿತಿ ಪಡೆದುಕೊಳ್ಳಬಹುದು. ಅಫಿಡೆವಿಟ್ APPನಲ್ಲಿ ಅಪ್ಲೋಡ್ ಮಾಡಲಾಗುವುದು. ಆ್ಯಪ್ ಸಹಾಯದಿಂದ ಚುನಾವಣಾ ಅಕ್ರಮಗಳನ್ನು ಜನರು ದೂರು ನೀಡಬಹುದು. ಈ ಹಿಂದೆ ನಡೆದ ಐದು ರಾಜ್ಯಗಳ ಚುನಾವಣೆಯಲ್ಲಿ 1028 ಕೋಟಿ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಕರ್ನಾಟಕದಲ್ಲಿ ಅಕ್ರಮ ತಡೆಯಲು 2400 ತಂಡಗಳನ್ನು ರಚಿಸಿದೆ. ವಿಮಾನ ನಿಲ್ದಾಣಗಳಲ್ಲಿ ಪರಿಶೀಲನೆಗಳನ್ನು ನಡೆಸಲಾಗುತ್ತದೆ ಎಂದರು.




ರಾಜೀವ್ ಕುಮಾರ್ ಜೊತೆಗೆ ಚುನಾವಣಾ ಆಯುಕ್ತರಾದ ಅರುಣ್ ಗೋಯಲ್, ಅನುಪ್ ಚಂದ್ರ ಪಾಂಡೆ, ನಿತೇಶ್ ವೈಷ್ಯ, ಧರ್ಮೇಂದ್ರ ಶರ್ಮಾ ಮತ್ತಿತರರು ಭಾಗಿಯಾಗಿದ್ದಾರೆ.

ಚುನಾವಣೆ ದಿನಾಂಕ ಘೋಷಣೆ ಆಗುತ್ತಿದ್ದಂತೆ ನೀತಿ ಸಂಹಿತೆ ಜಾರಿಯಾಗುತ್ತದೆ. ಮುಕ್ತ, ನ್ಯಾಯ ಸಮ್ಮತ, ಶಾಂತಿಯುತ ಚುನಾವಣೆ ನಡೆಸುವ ಕಾನೂನು ಕ್ರಮವೆ ನೀತಿ ಸಂಹಿತೆ. ಇದು ರಾಜಕಾರಣಿಗಳು, ಅಧಿಕಾರಿಗಳಿಗೆ ಅನ್ವಯವಾಗಲಿದೆ. ಜನರಿಗೂ ನೀತಿ ಸಂಹಿತೆಯ ಬಿಸಿ ತಟ್ಟಲಿದೆ. ಹಾಗಾಗಿ ನೀತಿ ಸಂಹಿತೆ ಕುರಿತು ಎಲ್ಲರು ತಿಳಿಯಬೇಕಾದ ಪ್ರಮುಖ ವಿಚಾರಗಳು ಇಲ್ಲಿದೆ.

ನೀತಿ ಸಂಹಿತೆಯ ಅಂಶಗಳು ಏನು ?

🔵 ಈ ಮೊದಲು ಚುನಾವಣೆ ದಿನಾಂಕ ಘೋಷಣೆಯಾಗಿ, ನಾಮಪತ್ರ ಸಲ್ಲಿಕೆಯ ದಿನಾಂಕದಿಂದ ನೀತಿ ಸಂಹಿತೆ ಜಾರಿಗೆ ಬರುತ್ತಿತ್ತು. ಈಗ ಚುನಾವಣಾ ಆಯೋಗ ಪತ್ರಿಕಾಗೋಷ್ಠಿ ನಡೆಸಿ, ಚುನಾವಣೆ ದಿನಾಂಕ ಘೋಷಿಸುತ್ತಿದ್ದಂತೆಯೇ ನೀತಿ ಸಂಹಿತೆ ಜಾರಿಯಾಗುತ್ತದೆ. ಕರ್ನಾಟಕದಲ್ಲೂ ಕೂಡ ಈಗ ನೀತಿ ಸಂಹಿತೆ ಜಾರಿಯಾಗಿದೆ.

🔵 ನೀತಿ ಸಂಹಿತೆ ಜಾರಿಯಾಗುತ್ತಿದ್ದಂತೆ ಆಡಳಿತ ಯಂತ್ರದಲ್ಲಿ ಮಹತ್ವದ ಬದಲಾವಣೆಯಾಗಲಿದೆ. ರಾಜಕಾರಣಿಗಳ ಹಸ್ತಕ್ಷೇಪವಿಲ್ಲದೆ ಆಡಳಿತ ಯಂತ್ರ ಕಾರ್ಯನಿರ್ವಹಿಸಲಿದೆ. ಅಧಿಕಾರಿಗಳೆ ಎಲ್ಲವನ್ನು ನಿರ್ವಹಿಸುತ್ತಾರೆ. ಸರ್ಕಾರದ ಕೆಲಸಗಳು ಎಂದಿನಂತೆ ನಡೆಯಲಿದೆ. ಆದರೆ ಅಧಿಕಾರಿಗಳು ಚುನಾವಣೆ ಕರ್ತವ್ಯದಲ್ಲಿ ತೊಡಗುವುದರಿಂದ ಸಾರ್ವಜನಿಕ ಸೇವೆಗಳಿಗೆ ವ್ಯತ್ಯಯವಾಗಲಿದೆ. ಇನ್ನು, ಮುಖ್ಯಮಂತ್ರಿ ಹಂಗಾಮಿಯಾಗುತ್ತಾರೆ. ತುರ್ತು ಸಂದರ್ಭ ಎದುರಾದರೆ ಮಾತ್ರ ಸಚಿವರು ಇಲಾಖೆಯ ಜವಾಬ್ದಾರಿ ನಿರ್ವಹಿಸಬಹುದು.

🔵 ನೀತಿ ಸಂಹಿತೆ ಜಾರಿಯಾದ ಅವಧಿಯಲ್ಲಿ ಅನುದಾನ ಬಿಡುಗಡೆ, ಯೋಜನೆಗಳ ಘೋಷಣೆ, ಶಂಕುಸ್ಥಾಪನೆ, ಗುದ್ದಲಿ ಪೂಜೆ, ಉದ್ಘಾಟನೆ, ನೇಮಕಾತಿ ಮಾಡುವಂತಿಲ್ಲ. ಇವುಗಳು ಮತದಾರರ ಮೇಲೆ ಪ್ರಭಾವ ಉಂಟು ಮಾಡುವ ಸಾಧ್ಯತೆ ಇರುವುದರಿಂದ ಇವುಗಳಿಗೆ ನಿಷೇಧವಿದೆ.

🔵 ಸಚಿವರು ಸರ್ಕಾರಿ ಯಂತ್ರವನ್ನು ಉಪಯೋಗಿಸಲು ನಿರ್ಬಂಧವಿರಲಿದೆ. ಸರ್ಕಾರದ ವಾಹನಗಳನ್ನು ಬಳಸುವಂತಿಲ್ಲ. ಸರ್ಕಾರಿ ಸಿಬ್ಬಂದಿ, ಅಧಿಕಾರಿಗಳ ನೆರವು ಕೂಡ ಪಡೆಯುವಂತಿಲ್ಲ.

🔵 ಸರ್ಕಾರದ ಪ್ರವಾಸಿ ಮಂದಿರ, ಕಟ್ಟಡಗಳನ್ನು ಉಪಯೋಗಿಸುವಂತಿಲ್ಲ. ತುರ್ತು ಸಂದರ್ಭದಲ್ಲಿ ಮಾತ್ರ ಬಳಕೆಗೆ ಅವಕಾಶವಿರಲಿದೆ. ಆದರೆ ಅದು ಒಂದೆ ಪಕ್ಷಕ್ಕೆ ಸೀಮಿತವಾಗಿರುವಂತಿಲ್ಲ.

🔵 ನೀತಿ ಸಂಹಿತೆ  ಜಾರಿಯಲ್ಲಿರುವ ಅವಧಿಯಲ್ಲಿ ಮಾಧ್ಯಮಗಳಲ್ಲಿ ಸರ್ಕಾರದ ಖರ್ಚಿನಲ್ಲಿ ಜಾಹೀರಾತು ಪ್ರಕಟಿಸುವಂತಿಲ್ಲ. ಅಲ್ಲದೆ ಸರ್ಕಾರವು ಮಾಧ್ಯಮಗಳನ್ನು ಬಳಕೆ ಮಾಡಿಕೊಂಡು ಸಾಧನೆಗಳನ್ನು ಬಿಂಬಿಸಿಕೊಳ್ಳುವ ಪ್ರಯತ್ನವನ್ನು ಮಾಡುವಂತಿಲ್ಲ.

🔵 ರಾಜಕೀಯ ಸಭೆ, ಸಮಾರಂಭಗಳು ನಡೆಸಲು ಆಡಳಿತದ ಅನುಮತಿ ಕಡ್ಡಾಯ. ಸ್ಪೀಕರ್, ಮೈಕ್ ಬಳಕೆ, ಪೊಲೀಸ್ ಬಂದೋಬಸ್ತ್ ಪಡೆಯಲು ಚುನಾವಣಾ ಆಯೋಗದ ಅನುಮತಿ ಪಡೆಯಬೇಕು. ಅಲ್ಲದೆ ಷರತ್ತುಗಳನ್ನು ಕಡ್ಡಾಯವಾಗಿ ಪಾಲಿಸಬೇಕು.

🔵 ರಾಜಕೀಯ ಪಕ್ಷಗಳು ಅಥವಾ ಅಭ್ಯರ್ಥಿಯು ಮೆರವಣಿಗೆ ನಡೆಸಲು ಅನುಮತಿ ಕಡ್ಡಾಯ. ಮೆರವಣಿಗೆ ಸಾಗುವ ಮಾರ್ಗದ ಕುರಿತು ಮುಂಚಿತವಾಗಿ ತಿಳಿಸಬೇಕು. ಆ ಮಾರ್ಗದ ಹೊರತು ಅನ್ಯ ಮಾರ್ಗ ಬಳಸಬಾರದು. ಇನ್ನು, ಮೆರವಣಿಗೆ ವೇಳೆ ಅನ್ಯ ಪಕ್ಷಗಳ ನಾಯಕರ ಪ್ರತಿಕೃತಿಯನ್ನು ಕೊಂಡೊಯ್ಯುವುದು, ಪ್ರತಿಕೃತಿ ದಹಿಸುವುದಕ್ಕೆ ನಿಷೇಧವಿದೆ.




🔵 ಜಾತಿ, ಧರ್ಮದ ವಿಚಾರವಾಗಿ ನಿಂದನಾತ್ಮಕ ಭಾಷಣ ಮಾಡುವಂತಿಲ್ಲ. ದೇಗುಲ, ಮಸೀದಿ, ಚರ್ಚ್ ಸೇರಿದಂತೆ ಧಾರ್ಮಿಕ ಸ್ಥಳಗಳಲ್ಲಿ ರಾಜಕೀಯ ಪ್ರಚಾರ ನಿಷಿದ್ಧ. ಕಾರ್ಯಕ್ರಮ, ಯೋಜನೆಗಳ ಆಧಾರದಲ್ಲಿ ವಾಗ್ದಾಳಿಗೆ ಅವಕಾಶವಿದೆ. ಅದರೆ ವೈಯಕ್ತಿಕ, ಖಾಸಗಿ ವಿಚಾರಗಳನ್ನು ಮುಂದಿಟ್ಟುಕೊಂಡು ಭಾಷಣ ಮಾಡುವಂತಿಲ್ಲ.

🔵 ನಾಗರಿಕರ ಶಾಂತಿಯುತ ದೈನಂದಿನ ಬದುಕಿಗೆ ಭಂಗ ಉಂಟು ಮಾಡುವಂತಿಲ್ಲ. ಯಾವುದೆ ವ್ಯಕ್ತಿಯ ಅಭಿಪ್ರಾಯ, ರಾಜಕೀಯ ಪಾಲ್ಗೊಳ್ಳುವಿಕೆ ವಿರುದ್ಧ ಆತನ ಮನೆ ಮುಂದೆ ಧರಣಿ, ಪ್ರತಿಭಟನೆ ಮಾಡುವಂತಿಲ್ಲ. ಸಾರ್ವಜನಿಕರ ಅನುಮತಿ ಇಲ್ಲದೆ ಅವರ ಮನೆ ಗೋಡೆಗಳ ಮೇಲೆ ಪಕ್ಷ, ಅಭ್ಯರ್ಥಿ ಪ್ರಚಾರದ ಪೇಂಟಿಂಗ್ ಬರೆಯುವಂತಿಲ್ಲ. ಅನುಮತಿ ಇಲ್ಲದೆ ಪಕ್ಷದ ಧ್ವಜಗಳನ್ನು ಕಟ್ಟುವಂತಿಲ್ಲ.



Leave a Reply

Your email address will not be published. Required fields are marked *