ಶಿಕಾರಿಪುರ ತಾಲ್ಲೂಕಿನ ತಾಲ್ಲೂಕು ಆಫೀಸ್ ಹಾಗೂ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪನವರ ನಿವಾಸದ ಬಳಿ ನಡೆದ ಬಂಜಾರ, ಬೋವಿ, ಕೊರಮ, ಕೊರಚ ಸಮುದಾಯದ ಪ್ರತಿಭಟನೆ ಇದೀಗ ಜಿಲ್ಲಾ ಕೇಂದ್ರಕ್ಕೂ ವ್ಯಾಪಿಸಿದೆ.
ಒಳ ಮೀಸಲಾತಿ ಜಾರಿ ಸಂಬಂಧ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲು ರಾಜ್ಯ ಸರ್ಕಾರ ನಿರ್ಧಾರ ಕೈಗೊಂಡಿದೆ ಎಂದು ಆರೋಪಿಸಿ ಹೆದ್ದಾರಿಯಲ್ಲಿ ರಸ್ತೆ ತಡೆದು ಗ್ರಾಮಸ್ಥರು ಪ್ರತಿಭಟನೆ ನಡೆಸುತ್ತಿದ್ದಾರೆ.
ರಸ್ತೆ ಮೇಲೆ ತೆಂಗಿನ ಗರಿ ಇಟ್ಟು ಬೆಂಕಿ ಹಚ್ಚಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.ಶಿವಮೊಗ್ಗ – ಶಿಕಾರಿಪುರ ಹೆದ್ದಾರಿಯ ಕುಂಚೇನಹಳ್ಳಿಯಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ. ಗ್ರಾಮಸ್ಥರು ದಿಢೀರ್ ರಸ್ತೆಗಿಳಿದು, ಬಂಜಾರ ಸಮುದಾಯದ ಧ್ವಜಗಳನ್ನು ಹಿಡಿದು ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಿದ್ದಾರೆ.
ದಿಢೀರ್ ರಸ್ತೆ ತಡೆಯಿಂದಾಗಿ ಶಿವಮೊಗ್ಗ – ಶಿಕಾರಿಪುರ ಹೆದ್ದಾರಿಯಲ್ಲಿ ವಾಹನಗಳು ಸಾಲುಗಟ್ಟಿ ನಿಂತಿವೆ. ಹೆದ್ದಾರಿಯಲ್ಲಿ ಸಂಚಾರ ದಟ್ಟಣೆ ಉಂಟಾಗಿದೆ.