ಕರ್ನಾಟಕ ರಾಜ್ಯದ ವಿಧಾನಸಭೆ ಚುನಾವಣೆ ಇನ್ನೇನೂ ಕೆಲವೆ ದಿನಗಳಲ್ಲಿ ನಡೆಯಲಿದ್ದು ಈ ತಿಂಗಳ ಅಂತ್ಯದಲ್ಲಿ ನೀತಿಸಂಹಿತೆ ಜಾರಿಯಾಗುವ ಸಾಧ್ಯತೆ ಇದೆ.
ಸಾಗರ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ ಆಕಾಂಕ್ಷಿಗಳ ದೊಡ್ಡ ಪಟ್ಟಿಯೇ ಇದ್ದು ಇನ್ನೂ ಟಿಕೆಟ್ ಘೋಷಣೆಯಾಗಿಲ್ಲ ಆದರೆ ಮಾಜಿ ಶಾಸಕ ಹಾಗೂ ಕೆಪಿಸಿಸಿ ವಕ್ತಾರ ಬೇಳೂರು ಗೋಪಾಲಕೃಷ್ಣ ರವರ ಅಭಿಮಾನಿಗಳು ಈಗಲೇ ಚುನಾವಣೆಯ ಖರ್ಚುವೆಚ್ಚಗಳಿಗೆ ದೇಣಿಗೆ ನೀಡಲು ಸನ್ನದ್ದರಾಗಿದ್ದು ತಾ ಮುಂದೂ ನಾ ಮುಂದೂ ಎನ್ನುವ ರೀತಿಯಲ್ಲಿ ಸ್ಪರ್ಧೆಗೆ ಇಳಿದಿದ್ದಾರೆ.
ವಿರೋಧಿ ಅಭ್ಯರ್ಥಿಗಳು ಹಣದ ಹೊಳೆ ಹರಿಸುತ್ತಾರೆ ಎಂದು ಹಿಂಜರಿಕೆ ಬೇಡ, ನೀವು ಹಣ ಖರ್ಚು ಮಾಡುವುದು ಬೇಡ,ನಮ್ಮ ವ್ಯಾಪ್ತಿಯ ಬೂತ್ನ ಹೊಣೆಯನ್ನು ನಾವು ಹೊರುತ್ತೇವೆ ಎನ್ನುತ್ತಿದ್ದಾರೆ ಬೇಳೂರು ಗೋಪಾಲಕೃಷ್ಣ ರ ಕಟ್ಟಾ ಅಭಿಮಾನಿಗಳು.
ಪೊಸ್ಟ್ ಮ್ಯಾನ್ ಸುದ್ದಿ ಸಂಸ್ಥೆಗೆ ಲಭಿಸಿರುವ ಖಚಿತ ಮಾಹಿತಿ ಪ್ರಕಾರ ಸಾಗರ ವಿಧಾನಸಭಾ ಕ್ಷೇತ್ರದ ನೂರಾರು ಅಭಿಮಾನಿಗಳು ಲಕ್ಷಾಂತರ ರೂ ಹಣ ದೇಣಿಗೆ ನೀಡಲು ಮುಂದಾಗುತಿದ್ದಾರೆ ಎನ್ನಲಾಗುತ್ತಿದೆ.
ಹೊಸನಗರ ತಾಲೂಕಿನ ರಿಪ್ಪನ್ಪೇಟೆ ಪಟ್ಟಣದ ಬೇಳೂರು ಅಭಿಮಾನಿಗಳಾದ ವರ್ತಕರೊಬ್ಬರು ಸಂಪೂರ್ಣ ಕೆರೆಹಳ್ಳಿ ಹೋಬಳಿಯ ಚುನಾವಣೆ ಖರ್ಚು ವೆಚ್ಚಗಳನ್ನು ನೋಡಿಕೊಳ್ಳುವುದಾಗಿ ಗೋಪಾಲಕೃಷ್ಣ ಬೇಳೂರು ಮುಂದೆ ಪ್ರಸ್ತಾಪಿಸಿದಾಗ ನನಗೆ ಅಭಿಮಾನಿಗಳ ಪ್ರೀತಿ ವಿಶ್ವಾಸವೇ ಮುಖ್ಯ ಹೊರತು ದೇಣಿಗೆ ಮುಖ್ಯವಲ್ಲ ಎಂದು ದೇಣಿಗೆ ಪ್ರಸ್ತಾಪವನ್ನು ನಯವಾಗಿ ತಿರಸ್ಕರಿಸಿದ್ದಾರೆ ಎಂದು ತಿಳಿದುಬಂದಿದೆ.
ತಾಳಗುಪ್ಪ ಗ್ರಾಮದ ವೆಂಕಟೇಶ್ ಎಂಬುವವರು ತಮ್ಮ 1 ಎಕರೆ ತೋಟವನ್ನು ಮಾರಿ 45 ಲಕ್ಷ ರೂ ಹಣವನ್ನು ಬೇಳೂರು ಚುನಾವಣೆಗೆ ನೀಡುತ್ತೇನೆ ಎಂದು ಹೇಳಿದ್ದು ಈಗಾಗಲೇ ಜಾಗ ಮಾರಾಟ ಮಾಡಲು ಗಿರಾಕಿಯನ್ನು ಕೂಡ ಹುಡುಕಿಕೊಂಡಿದ್ದಾರೆ.ಇದಕ್ಕೆ ಅವರ ಪತ್ನಿಯ ಸಮ್ಮತಿ ಕೂಡ ಇದೆ.
ಈ ಬಗ್ಗೆ ವೆಂಕಟೇಶ್ ಬಳಿ ಕೇಳಿದರೇ ಬೇಳೂರು ಗೋಪಾಲಕೃಷ್ಣ ರವರಿಗೆ ಅಧಿಕಾರದ ಮದ ಇಲ್ಲ, ಜನರೊಂದಿಗೆ ಪ್ರೀತಿಯಿಂದ ನಡೆದುಕೊಳ್ಳುತ್ತಾರೆ ಕಳೆದ ಬಾರಿ ಅವರಿಗೆ ಕೊನೆ ಕ್ಷಣದಲ್ಲಿ ಟಿಕೆಟ್ ನೀಡದೇ ಮೋಸ ಮಾಡಿದ್ದಾರೆ ಆದರೆ ಈ ಬಾರಿ ಅವರನ್ನು ಶಾಸಕರನ್ನಾಗಿ ನೋಡುವ ಹಂಬಲದಿಂದ ಈ ನಿರ್ಧಾರ ಕೈಗೊಂಡಿದ್ದೇನೆ ಎನ್ನುತ್ತಾರೆ.
ಒಟ್ಟಾರೆಯಾಗಿ ಅಧಿಕಾರವಿಲ್ಲದೇ ಕಳೆದ 10 ವರ್ಷಗಳಿಂದ ಕ್ಷೇತ್ರದಲೇ ಇದ್ದು ಅಪಾರ ಅಭಿಮಾನಿ ಬಳಗವನ್ನು ಹೊಂದಿರುವ ಮಾಜಿ ಶಾಸಕ ಹಾಗೂ ಕೆಪಿಸಿಸಿ ವಕ್ತಾರ ಬೇಳೂರು ಗೋಪಾಲಕೃಷ್ಣ ವಿಧಾನಸಭಾ ಚುನಾವಣೆಯನ್ನು ಎದುರಿಸಲು ಅವರ ಅಭಿಮಾನಿಗಳು ಅವರ ಜೊತೆ ಟೊಂಕ ಕಟ್ಟಿ ನಿಂತಿದ್ದಾರೆ.