ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಎಸ್ ಬಂಗಾರಪ್ಪ ಹೆಸರು ಪರಿಗಣಿಸದೇ ಇರುವುದು ಬೇಸರದ ಸಂಗತಿ – ಜಿಲ್ಲಾ ಎಸ್ ಬಂಗಾರಪ್ಪ ಅಭಿಮಾನಿಗಳ ಸಂಘ
ಶಿವಮೊಗ್ಗ : ಈ ನಾಡು ಕಂಡ ಧೀಮಂತ ನಾಯಕ ಎಸ್ ಬಂಗಾರಪ್ಪ. ರಾಜ್ಯದ ಹಿಂದುಳಿದ ವರ್ಗಗಳ ಹಿತಾಸಕ್ತಿ ಕಾಯುವಲ್ಲಿ ಅವರ ಪಾತ್ರ ಮಹತ್ವದ್ದಾಗಿದೆ. ಅವರಿಗೆ ಸೂಕ್ತ ಗೌರವ ನೀಡಲು ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಸರ್ಕಾರ ಅವರ ಹೆಸರಿಡಬೇಕು ಎಂದು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮತ್ತು ಎಸ್ ಬಂಗಾರಪ್ಪ ಅಭಿಮಾನಿ ಸಂಘದ ಜಿಲ್ಲಾಧ್ಯಕ್ಷ ಅಮೀರ್ ಹಂಜಾ ಪತ್ರೀಕಾ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.
ಬಂಗಾರಪ್ಪ ಶಿವಮೊಗ್ಗ ಜಿಲ್ಲೆಯ ಸಂಪೂರ್ಣ ಅಭಿವೃದ್ಧಿಗೆ ನಾಂದಿ ಹಾಡಿದವರು.ಮೆಗ್ಗಾನ್ ಆಸ್ಪತ್ರೆ ತಂದ ಕೀರ್ತಿ ಅವರದ್ದು,ಶಾಶ್ವತ ಕುಡಿಯುವ ನೀರು ಯೋಜನೆ ಜಾರಿಗೆ ತಂದಿದ್ದರು. ಶಿವಮೊಗ್ಗ ಸ್ಮಾರ್ಟ್ ಸಿಟಿ ಬಗ್ಗೆ ಕನಸು ಕಂಡವರು ಎಂದರೆ ಅದು ಬಂಗಾರಪ್ಪನವರು. 
ತುಂಗಾ ಏತಾ ನೀರಾವರಿ ಹಾಗೂ ತುಂಗಾ ಮೇಲ್ದಂಡೆ ಯೋಜನೆ ಜಾರಿಗೆ ತಂದವರು.ಬರಗಾಲದ ಸಂಧರ್ಭದಲ್ಲಿ ಇಡೀ ಜಿಲ್ಲೆಗೆ ಸಿರಿಧಾನ್ಯಗಳನ್ನು ಹಂಚಿದವರು ಅಂತವರ ಹೆಸರನ್ನ ವಿಮಾನ ನಿಲ್ದಾಣಕ್ಕೆ ಹೆಸರಿಡಬೇಕಿತ್ತು ಎಂದು ಹೇಳಿದರು.
ಬಂಗಾರಪ್ಪ ಯಾವುದೇ ಪಕ್ಷ, ಜಾತಿ ನೋಡಿರದ ವ್ಯಕ್ತಿ. ಕಾವೇರಿ ನೀರು ವಿಚಾರ ಬಂದಾಗ ಸುಗ್ರೀವಾಜ್ಞೆ ಹೊರಡಿಸಿದವರು. ರೈತರಿಗೆ ಉಚಿತವಾಗಿ ವಿದ್ಯುತ್ ನೀಡಿದವರು. ಆಶ್ರಯ ಯೋಜನೆ, ಆರಾಧನಾ ಯೋಜನೆ ತಂದರು. 15% ಗ್ರಾಮೀಣ ಕೃಪಾಂಕವನ್ನು ತಂದಿದ್ದಾರೆ. ನೂರಾರು ಯೋಜನೆ ತಂದು ಧೀಮಂತ ನಾಯಕ ಎನಿಸಿಕೊಂಡಿದ್ದ ಬಂಗಾರಪ್ಪನವರ ಹೆಸರನ್ನು ಸೋಗಾನೆಯ ವಿಮಾನ ನಿಲ್ದಾಣಕ್ಕೆ ಇಡಬೇಕು ಎಂದು ಮನವಿ ಮಾಡಲಾಗಿತ್ತು.ಆದರೆ ಅವರ ಹೆಸರನ್ನು ಸರ್ಕಾರ ಪರಿಗಣಿಸದೇ ಇರುವುದು ಬೇಸರದ ಸಂಗತಿಯಾಗಿದೆ ಎಂದು ಹೇಳಿದರು.
 
                         
                         
                         
                         
                         
                         
                         
                         
                         
                        
