ಗ್ರಾಮೀಣ ಭಾಗದ ಆಸ್ಪತ್ರೆಗೆ ಖಾಯಂ ವೈದ್ಯರನನು ನೇಮಿಸುವಂತೆ ಒತ್ತಾಯಿಸಿ ಪ್ರಾಥಮಿಕ ಚಿಕಿತ್ಸಾ ಕೇಂದ್ರದ ಕಟ್ಟಡವನ್ನು ಏರಿ ಗ್ರಾಮಪಂಚಾಯಿತಿ ಅಧ್ಯಕ್ಷರೊಬ್ಬರು ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ.
ಶಿವಮೊಗ್ಗದ ಹೊಸನಗರ ತಾಲೂಕಿನ (ಬಿದನೂರು) ನಗರದ ಸರ್ಕಾರಿ ಆಸ್ಪತ್ರೆಗೆ ಖಾಯಂ ವೈದ್ಯರ ನೇಮಕ ಮಾಡುವಂತೆ ಆಗ್ರಹಿಸಿ ಆಸ್ಪತ್ರೆಯ ಕಟ್ಟಡ ಏರಿ ಗ್ರಾಪಂ ಅಧ್ಯಕ್ಷ ಕರುಣಾಕರ ಶೆಟ್ಟಿ ಪ್ರತಿಭಟಿಸಿದ್ದಾರೆ.
ಸುಮಾರು 30 ರಿಂದ 40 ಸಾವಿರ ಜನಸಂಖ್ಯೆ ಇರುವ ನಗರ ಹೋಬಳಿಯಲ್ಲಿ ಯಾವುದೇ ಖಾಯಂ ವೈದ್ಯರಿಲ್ಲದೇ ಸ್ಥಳೀಯರು ಪರದಾಡುವಂತಾಗಿದೆ. ಈ ಹಿನ್ನೆಲೆಯಲ್ಲಿ ಕಟ್ಟಡವೇರಿ ಪ್ರತಿಭಟನೆ ನಡೆಸಿರುವುದಾಗಿ ಮಾಧ್ಯಮಗಳಿಗೆ ತಿಳಿಸಿದರು.
ಈ ಹಿಂದೆ ತಾಲೂಕ್ ಕಛೇರಿ ಕಸ ಗುಡಿಸಿ ಪ್ರತಿಭಟನೆ ನಡೆಸಿದ್ದ ಕರುಣಾಕರ ಶೆಟ್ಟಿ.ನ್ಯಾಯಕ್ಕಾಗಿ ಈ ಹಿಂದೆ ಫಾರೆಸ್ಟ್ ಆಫೀಸ್ ಕಟ್ಟಡವನ್ನೂ ಕೂಡ ಏರಿ ಪ್ರತಿಭಟನೆ ನಡೆಸಿದ್ದರು.
ಗ್ರಾಮೀಣ ಭಾಗದ ಜನಪ್ರತಿನಿಧಿಗಳು ತಮ್ಮ ವ್ಯಾಪ್ತಿಯ ಜನಸಾಮಾನ್ಯರ ಸಮಸ್ಯೆಗಳನ್ನು ಸರ್ಕಾರದ ಗಮನ ಸೆಳೆಯಲು ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿ ಕಿವಿ ಹಿಂಡಿದರೂ ಸಂಬಂಧ ಪಟ್ಟ ಅಧಿಕಾರಿ ವರ್ಗದವರು ಈ ಬಗ್ಗೆ ತಲೆ ಕೆಡಿಸಿಕೊಳ್ಳದೇ ಇರುವುದು  ಬೇಸರದ ಸಂಗತಿಯಾಗಿದೆ.
 
                         
                         
                         
                         
                         
                         
                         
                         
                         
                        