ಭದ್ರಾವತಿಯಲ್ಲಿ ಹುಟ್ಟುಹಬ್ಬದ ಪಾರ್ಟಿ ವೇಳೆ ಯುವಕರ ಗುಂಪಿನ ಮೇಲೆ ಬಿಯರ್ ಬಾಟಲಿಯಿಂದ ದಾಳಿ ನಡೆಸಲಾಗಿದೆ. ಗಾಯಗೊಂಡಿರುವ ನಾಲ್ವರು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ.
ಭದ್ರಾವತಿಯ ಸಾಗರ, ನಾಗ ಪವನ್, ತೇಜಸ್, ಚೇತನ್ ಕುಮಾರ್ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.
ತೇಜಸ್ ಎಂಬುವವರ ಸ್ನೇಹಿತರೊಬ್ಬರ ಪತ್ನಿಯ ಹುಟ್ಟುಹಬ್ಬದ ಪಾರ್ಟಿಯನ್ನು ಶಿವಮೊಗ್ಗದ ಸೋಷಿಯಲ್ ಹಾರ್ಬರ್ ಕ್ಲಬ್ ನಲ್ಲಿ ಆಯೋಜಿಸಲಾಗಿತ್ತು. ರಾತ್ರಿ 11.30ರ ಹೊತ್ತಿಗೆ ಪಾರ್ಟಿಯಲ್ಲಿ ಮದ್ಯ ಸೇವಿಸಿದ್ದ ಗುಂಪೊಂದು ಏಕಾಏಕಿ ಚೇತನ್ ಎಂಬಾತನ ಮೇಲೆ ಹಲ್ಲೆ ನಡೆಸಲು ಆರಂಭಿಸಿದೆ. ಬಿಯರ್ ಬಾಟಲಿಯಿಂದ ಹೊಡೆದಿದ್ದಾರೆ.
ಸಾಗರ, ನಾಗ ಪವನ್, ತೇಜಸ್ ಅವರು ಜಗಳ ಬಿಡಿಸಲು ಹೋದಾಗ ಅವರ ಮೇಲೂ ಬಿಯರ್ ಬಾಟಲಿಯಿಂದ ಹೊಡೆದು ಹಲ್ಲೆ ಮಾಡಲಾಗಿದೆ. ಗಾಯಗೊಂಡಿದ್ದ ನಾಲ್ವರು ಅಲ್ಲಿಂದ ತಪ್ಪಿಸಿಕೊಂಡು, ತಮ್ಮ ಕಾರಿನಲ್ಲೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ.
ಪಾರ್ಟಿಯಲ್ಲಿದ್ದ ಆರೇಳು ಮಂದಿ ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.