ದೇವಸ್ಥಾನದ ಮುಂದೆ ಭಿಕ್ಷೆ ಬೇಡುತಿದ್ದ ಅಜ್ಜಿಯನ್ನು ಹಣದಾಸೆಗೆ ಕೊಲೆ ಮಾಡಿದ್ದ ಆರೋಪಿಯನ್ನು ಹೆಡೆಮುರಿ ಕಟ್ಟುವಲ್ಲಿ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ನಗರದ ಪೇಪರ್ ಟೌನ್ ಪೊಲೀಸರು ಯಶಸ್ವಿಯಾಗಿದ್ದಾರೆ.
ಡಿಸೆಂಬರ್ 3 ರಂದು ಭದ್ರಾವತಿಯ ಸುಣ್ಣದಹಳ್ಳಿ ಆಂಜನೇಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಕೊಲೆ ಮಾಡಿ ಆರೋಪಿ ಬಂಗಾರದ ಓಲೆ ಮತ್ತು ಮೂಗುತಿಯೊಂದಿಗೆ ಪರಾರಿಯಾಗಿದ್ದನು.
ಸದರಿ ಜಟಿಲ ಪ್ರಕರಣವನ್ನು ಕೈಗೆತ್ತಿಕೊಂಡ ಪೇಪರ್ ಟೌನ್ ಪೊಲೀಸರು ಕುಂದಾಪುರದ ಕರುಣಾಕರ ದೇವಾಡಿಗ (24) ಎಂಬಾತನನ್ನು ಬಂಧಿಸಿ 14000 ರೂ ಮೌಲ್ಯದ ಚಿನ್ನಾಭರಣಗಳನ್ನು ವಶಕ್ಕೆ ಪಡೆದಿದ್ದಾರೆ.
ಜಿಲ್ಲೆಯ ಹಿರಿಯ ಪೊಲೀಸ್ ಅಧಿಕಾರಿಗಳ ಮಾರ್ಗದರ್ಶನದೊಂದಿಗೆ ಪೇಪರ್ ಟೌನ್ ಸಿಪಿಐ ಮಂಜುನಾಥ್ ,ಪಿಎಸ್ ಐ ಶಿಲ್ಪಾ ನಾಯನೇಗಲಿ ನೇತ್ರತ್ವದಲ್ಲಿ ಸಿಬ್ಬಂದಿಗಳಾದ ರತ್ನಾಕರ್ ,ವಾಸುದೇವ್ ,ಚಿನ್ನ ನಾಯ್ಕ್ ,ಹನಮಂತ ಅವಟಿ ,ಆದರ್ಶ್ ಶೆಟ್ಟಿ ,ಮೌನೇಶ್ , ಅರುಣ್ ,ವಿಕ್ರಮ್ ರವರನ್ನೊಳಗೊಂಡ ತಂಡ ಆರೋಪಿಯನ್ನು ಪತ್ತೆ ಹಚ್ಚಿದ್ದಾರೆ.
ಜಟಿಲ ಪ್ರಕರಣವನ್ನು 15 ದಿನಗಳೊಳಗೆ ಭೇದಿಸಿದ ಪೊಲೀಸ್ ತಂಡಕ್ಕೆ ಪೊಲೀಸ್ ಅಧೀಕ್ಷಕರು ಅಭಿನಂದನೆ ಸಲ್ಲಿಸಿದ್ದಾರೆ.
ಘಟನೆಯ ಹಿನ್ನಲೆ :
ಭದ್ರಾವತಿಯ ಸುಣ್ಣದಹಳ್ಳಿ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಭಿಕ್ಷೆ ಬೇಡುತ್ತಿದ್ದ 70 ವರ್ಷದ ವೃದ್ಧೆಯೋರ್ವರು ಅನುಮಾನ ಸ್ಪದವಾಗಿ ಸಾವನ್ನಪ್ಪಿದ್ದು ಅವರ ಸಂಬಂಧಿಕರು ಕೊಲೆ ಎಂದು ಅನುಮಾನ ವ್ಯಕ್ತಪಡಿಸಿದ್ದರು.
ಶಂಕ್ರಮ್ಮ ಎಂಬ 70 ವರ್ಷದ ವೃದ್ದೆಗೆ ಗಂಡ ಮಕ್ಕಳು ಇಲ್ಲದ ಕಾರಣ ಇರುವ ಆಸ್ತಿಯನ್ನ ಮಾರಾಟ ಮಾಡಿ ಸುಣ್ಣದ ಹಳ್ಳಿ ದೇವಸ್ಥಾನದ ಬಳಿ ಭಿಕ್ಷೆ ಬೇಡುತ್ತಿದ್ದು ದೇವಸ್ಥಾನದ ಎದುರಿನಅಂತರಘಟ್ಟಮ್ಮ ದೇವಸ್ಥಾನದಲ್ಲಿ ಮಲಗುತ್ತಿದ್ದರು. ದೇವಸ್ಥಾನಕ್ಕೆ ಬರುವ ಭಕ್ತರಿಂದ ಭಿಕ್ಷೆ ಬೇಡಿ ಜೀವನ ಸಾಗಿಸುತ್ತಿದ್ದರು.ದೇವಸ್ಥಾನದ ಕಟ್ಟೆಯ ಮೇಲೆ ಕುಳಿತು ಭಿಕ್ಷೆ ಬೇಡುತ್ತಿದ್ದ ಶಂಕ್ರಮ್ಮ 03-12-2022 ರಂದು ಸಾವನ್ನಪ್ಪಿದ್ದರು.
ಅಜ್ಜಿಯನ್ನ ನೋಡಲು ಬಂದ ಅಕ್ಕ ಮಗಳು ಪುಷ್ಪ ನೆಲದ ಮಲಗಿದ್ದ ಅಜ್ಜಿಯ ಮುಖ ಭಾಗದ ಬಳಿ ರಕ್ತ ಸೋರಿರುವುದು ಕಂಡು ಬಂದಿದೆ. ಅಜ್ಜಿಯ ಮೂಗುತಿ ಮತ್ತು ಕಿವಿ ಓಲೆ ಕಿತ್ತುಕೊಂಡು ಹೋಗಲಾಗಿದೆ. ಚಿನ್ನಾಭರಣವನ್ನ ಕಿತ್ತುಕೊಂಡು ಹೋಗುವ ಉದ್ದೇಶದಿಂದ ಅಜ್ಜಿಯನ್ನಕೊಲೆ ಮಾಡಲಾಗಿದೆ ಎಂದು ಅವರು ಅನುಮಾನಿಸಲಾಗಿತ್ತು.