ರಿಪ್ಪನ್ ಪೇಟೆ : ಇಲ್ಲಿನ ಸಮೀಪದ ವರಾನಹೊಂಡದ ಭೂತರಾಯನ ಗುಡಿಯಲ್ಲಿ ಹುಂಡಿ ಒಡೆದು ಕಳ್ಳತನ ಮಾಡಿರುವ ಘಟನೆ ನಡೆದಿದೆ.
ಪಟ್ಟಣದ ತೀರ್ಥಹಳ್ಳಿ ರಸ್ತೆಯ ವರಾನಹೊಂಡದ ಶ್ರೀ ಭೂತರಾಯ ಸ್ವಾಮಿ ದೇವಸ್ಥಾನದ ಕಾಣಿಕೆ ಹುಂಡಿಯನ್ನು ಒಡೆದು ಕಳ್ಳತನ ಮಾಡಿದ್ದಾರೆ.ಭಾನುವಾರ ರಾತ್ರಿ ಕಳ್ಳತನ ನಡೆದಿರುವ ಸಾಧ್ಯತೆ ಇದೆ.
ರಿಪ್ಪನ್‌ಪೇಟೆ ಹಾಗೂ ಸುತ್ತಮುತ್ತಲಿನ ಜನರಿಗೆ ವರಾನಹೊಂಡದ ಭೂತರಾಯ ದೇವಸ್ಥಾನವೆಂದರೆ ಅಪಾರ ಭಕ್ತಿ ಹಾಗೂ ಭಯ, ನಂಬಿಕೆ ಇರುವ ಸ್ಥಳವಾಗಿದ್ದು ಈ ಕ್ಷೇತ್ರದಲ್ಲಿ ಕಳ್ಳರು ಕೈಚಳಕ ತೋರಿಸಿರುವುದು ಅವರ ಅವನತಿಗೆ ದಾರಿಯಾಗಿದೆ ಎಂದು ಭಕ್ತರೊಬ್ಬರು ಹೇಳುತಿದ್ದು,ಈ ಕ್ಷೇತ್ರದ ಪವಾಡಗಳ ಬಗ್ಗೆ ಹಲವಾರು ಘಟನೆಗಳನ್ನು ಮೆಲುಕು ಹಾಕುತಿದ್ದರು.
ಈ ಬಗ್ಗೆ ದೇವಸ್ಥಾನ ಸಮಿತಿಯ ಅಧ್ಯಕ್ಷ ಯೋಗೇಂದ್ರ ರವರ ಬಳಿ ಮಾಹಿತಿ ಕೇಳಿದಾಗ ಸಿಮೆಂಟ್ ನಲ್ಲಿ ನಿರ್ಮಿಸಿರುವ ಹುಂಡಿ ಹಾಗೂ ಕಬ್ಬಿಣದ ಬಾಕ್ಸ್ ನ್ನು ಮುರಿದು ಕಳ್ಳರು ನಿನ್ನೆಯ ದಿನ ರಾತ್ರಿ ಕಳ್ಳತನ ಮಾಡಿದ್ದಾರೆ.ಸಂಬಂಧಪಟ್ಟ ಇಲಾಖೆ ಕೂಡಲೇ ಕ್ರಮ ಕೈಗೊಳ್ಳಬೇಕಾಗಿದೆ ಎಂದರು.
ಒಟ್ಟಾರೆಯಾಗಿ ರಿಪ್ಪನ್‌ಪೇಟೆ ಸುತ್ತಮುತ್ತಲಿನಲ್ಲಿ ಇತ್ತೀಚಿಗೆ ಹಲವಾರು ಕಳ್ಳತನದ ಪ್ರಕರಣಗಳು ನಡೆಯುತಿದ್ದು ಈ ಬಗ್ಗೆ ಪೊಲೀಸ್ ಇಲಾಖೆ ಯಾವ ರೀತಿ ಕ್ರಮ ಕೈಗೊಳ್ಳುವುದು ಕಾದು ನೋಡಬೇಕಾಗಿದೆ.
ರಿಪ್ಪನ್‌ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.