ತೀರ್ಥಹಳ್ಳಿ : ಡಿಸೆಂಬರ್ 15 ರಂದು ತೀರ್ಥಹಳ್ಳಿ “ಸಿನಿ ಹಬ್ಬ” ಕಿರು ಚಿತ್ರೋತ್ಸವ ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಿತು. ಈ ಕಾರ್ಯಕ್ರಮವನ್ನು ತೀರ್ಥಹಳ್ಳಿಯ ಕುರ್ಕುರೆ ಕ್ರಿಯೇಷನ್ಸ್ ತಂಡ ಆಯೋಜಿಸಿದ್ದು , ಶಿವಮೊಗ್ಗ ಸಿನಿಮಾಸ್ ಅಡ್ಡ ಹಾಗೂ ಸತ್ಯ ಪಿಚ್ಚರ್ಸ್ ಅವರು ಭಾಗಿಯಾಗಿದ್ದರು, ಕಾರ್ಯಕ್ರಮದಲ್ಲಿ ರಿಪ್ಪನ್‌ಪೇಟೆ ಮೂಲದ ಯುವ ನಿರ್ದೇಶಕ ಜಿಲ್ಸನ್ ಜೊಸೇಫ್ ನಿರ್ದೇಶನದ ಸಂಭಾಷಣೆ ಇಲ್ಲದ ಸಮಾಜಕ್ಕೆ ಉತ್ತಮ ಸಂದೇಶ ನೀಡುವಂತಹ ಕಿರುಚಿತ್ರ “ಎಕ್ಸಿಬಿಷನಿಸಂ ” ಸೇರಿದಂತೆ 6 ಕಿರು ಚಿತ್ರಗಳ ಪ್ರದರ್ಶನವನ್ನು ಮಾಡಲಾಗಿತ್ತು.
ರಾಮಾ ರಾಮಾ ರೇ ಖ್ಯಾತಿಯ ನಿರ್ದೇಶಕರಾದ ಸತ್ಯ ಪ್ರಕಾಶ್ ಹಾಗೂ “ಒನ್ಸ್ ಅಪ್ ಆನ್ ಎ ಟೈಮ್ ಇನ್ ಜಮಾಲಿ ಗುಡ್ಡ” ಚಿತ್ರದ ನಿರ್ದೇಶಕರಾದ ಕುಶಾಲ್ ಗೌಡ್ರು ವಿಶೇಷ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದರು.
ಕಾರ್ಯಕ್ರಮಕ್ಕೆ ಸಾಕಷ್ಟು ಸಂಖ್ಯೆಯಲ್ಲಿ ಸಿನಿ ಪ್ರೇಮಿಗಳು ಹಾಗೂ ವಿದ್ಯಾರ್ಥಿಗಳು ಬಂದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿಕೊಟ್ಟರು.
ಕಾರ್ಯಕ್ರಮದ ಆರಂಭದಲ್ಲಿ ತೀರ್ಥಹಳ್ಳಿಯ ಹಾಗೂ ಮಲೆನಾಡಿನ ಬಗ್ಗೆ ಮಾಡಿದ ಅದ್ಭುತ ವಿಡಿಯೋ ತುಣುಕನ್ನು ಪ್ರದರ್ಶಿಸಲಾಯಿತು. ನಂತರ ಗೃಹ ಸಚಿವರ ಅನುಪಸ್ಥಿತಿಯಲ್ಲಿ ವೇದಿಕೆ ಕಾರ್ಯಕ್ರಮ ಆರಂಭಗೊಂಡಿತು.
ದಿ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹಾಗೂ ದಿ. ಶಂಕರ್ ನಾಗ್ ಅವರನ್ನ ಸ್ಮರಿಸಿದ ನಂತರ , ನಿರ್ಮಾಪಕರಾದ ಮಂಜುನಾಥ್ ಡಿ ಅವರು ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು, ಈ ಕಾರ್ಯಕ್ರಮದಲ್ಲಿ ಅನ್ಲಾಕ್ ರಾಘವ ಚಿತ್ರದ ನಾಯಕರದ ಮಿಲಿಂದ್ ಅವರು ಹಾಗೂ ಪಟ್ಟಣ ಪಂಚಾಯತ್ ಅಧ್ಯಕ್ಷರಾದ ಸುಶೀಲಾ ಶೆಟ್ಟಿ, ಹಬೀಬ್, ಕಾರ್ತಿಕ್ ಕುರ್ಕುರೆ, ಸತೀಶ್ ಆಡಿನಸರ, ಸುಕೇಶ್ ಕೋಣಂದೂರು, ಮುಡಬಾ ರಾಘವೇಂದ್ರ, ವಿನಯ್ ಕಣಿವೆ, ಕುರುವಳ್ಳಿ ನಾಗರಾಜ್, ನಾಗೇಂದ್ರ ಜೋಯ್ಸ್, ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಹಾಗೆ ವೇದಿಕೆ ಕಾರ್ಯಕ್ರಮದ ನಂತರ, ವಿಭಿನ್ನ ಕಥೆಯನ್ನ ಒಳಗೊಂಡಿರುವಂತಹ ಮಲೆನಾಡಿನ ಆರು ನಿರ್ದೇಶಕರ ಆರು ಕಿರು ಚಿತ್ರಗಳನ್ನ ಪ್ರದರ್ಶನ ಮಾಡಲಾಯಿತು.
ಯುವ ನಿರ್ದೇಶಕ ಜಿಲ್ಸನ್ ಜೋಸೆಫ್ ರವರ “ಎಕ್ಸಿಬಿಷನಿಸಂ ” ರಾಕೇಶ್ ಬಿ,ಜಿ ರವರ “ಮಾಧಪುರಾಣ” ಕಾರ್ತಿಕ್ ಕುರ್ಕುರೆ ಅವರ “ಅಧ್ಯಾಯ ಮೂರು”, ವಿನಯ್ ಶೆಟ್ಟಿ ರವರ “ಅಸ್ಪಷ್ಟ” , ಅನೀಶ್ ಎಸ್ ಶರ್ಮ ಅವರ “ವಡ್ಡಾರಾಧಕ”, ಕಾರ್ತಿಕ್ ಶ್ರೀಯನ್ ರವರ “ಕಂಪೋಸರ್”, ಎಂಬ ಅದ್ಭುತ ಕಿರುಚಿತ್ರಗಳು ಪ್ರೇಕ್ಷಕರನ್ನ ಮೆಚ್ಚಿಸಿ ಪ್ರಶಂಸೆ ಪಡೆದುಕೊಂಡವು.
ನಂತರ ಮಲೆನಾಡಿನ ಎಲ್ಲಾ ನಿರ್ದೇಶಕರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಕುರ್ಕುರೆ ಕ್ರಿಯೇಷನ್ ಪ್ರಮುಖರಾದ ಕಾರ್ತಿಕ್ ಮಾತನಾಡಿ, ತೀರ್ಥಹಳ್ಳಿಯಲ್ಲಿ ಶಾರ್ಟ್ ಮೂವಿ ಮಾಡಬೇಕು ಅಂತ ತುಂಬಾ ಜನರಿಗೆ ಇಷ್ಟ ಇದೆ, ಅವರಿಗೆಲ್ಲ ಅನುಕೂಲ ಆಗಲಿ ಎಂದು ಈ ಒಂದು ಕಾರ್ಯಕ್ರಮ ಮಾಡಿದ್ದೇವೆ. ಹಲವಾರು ದಿನಗಳ ಹಿಂದೆ ನನಗೆ ಮಾಡಬೇಕು ಅಂತ ಇಷ್ಟ ಇದ್ದರೂ, ಕೋವಿಡ್ ಕಾರಣದಿಂದಾಗಿ ಮಾಡಲು ಆಗಿರಲಿಲ್ಲ. ಈಗ ಈ ಕಾರ್ಯಕ್ರಮ ಮಾಡಲು ಆಗಿದೆ ಅಂದ್ರೆ ಅದಕ್ಕೆ ಸತ್ಯ ಪಿಚ್ಚರ್ ಪ್ರಮುಖರಾದ ಸತ್ಯ, ಶಿವಮೊಗ್ಗ ಸಿನಿಮಾಸ್ ಸಂಘದ ರಘು ಹಾಗೂ ಕುರ್ಕುರೆ ಕ್ರಿಯೇಶನ್ಸ್ ಕಾರ್ಯದರ್ಶಿ ವಿನಯ್ ಶೆಟ್ಟಿ ಇವರೆಲ್ಲರ ಬೆಂಬಲ ಇದೆ. ಅವರೆಲ್ಲರಿಗೂ ತುಂಬಾ ತುಂಬಾ ಧನ್ಯವಾದಗಳು. ತೀರ್ಥಹಳ್ಳಿಯ ಉದ್ಯಮಿಗಳು ನಮಗೆ ಬೆಂಬಲವಾಗಿ ನಿಂತಿದ್ದಾರೆ ಅವರೆಲ್ಲರಿಗೂ ಧನ್ಯವಾದ ಹೇಳಿದರು.
ಶಿವಮೊಗ್ಗದಲ್ಲಿ ಇದೇ ಪ್ರಪ್ರಥಮ ಬಾರಿಗೆ ಈ ರೀತಿ ಮಲೆನಾಡ ಕಿರು ಚಿತ್ರಗಳ ಪ್ರದರ್ಶನ ಏರ್ಪಡಿಸಲಾಗಿದ್ದು, ಇದರ ಸದುಪಯೋಗ ಪಡೆದುಕೊಂಡು ನಮ್ಮ ಮಲೆನಾಡಿನಿಂದ ಇನ್ನಷ್ಟು ಹೆಚ್ಚು ಅದ್ಭುತ ಚಿತ್ರಗಳು ಹೊರಬರಬೇಕೆಂಬುದೇ ಈ ಕಾರ್ಯಕ್ರಮದ ಉದ್ದೇಶವಾಗಿತ್ತು.
ಕಿರು ಚಿತ್ರೋತ್ಸವ ಪ್ರದರ್ಶನದ ನಂತರ ಅತ್ಯಂತ ಸಂತಸಗೊಂಡ ನಿರ್ಮಾಪಕ ಮಂಜುನಾಥ್ ಅವರು ಮಲೆನಾಡಿನ ಸಿನಿಮಾ ಹುಡುಗರಿಗೆ ಒಟ್ಟು ಐದು ಕಿರು ಚಿತ್ರಗಳನ್ನು ನಿರ್ಮಾಣ ಮಾಡಲು ಹಣ ಹೂಡುವುದಾಗಿ ತಿಳಿಸಿದ್ದಾರೆ. ತೀರ್ಥಹಳ್ಳಿ ಕಿರು ಸಿನಿಮಾ ಕ್ಷೇತ್ರದಲ್ಲಿ ಈ ಕಾರ್ಯಕ್ರಮ ಹೊಸ ಭರವಸೆ ಮೂಡಿಸಿದೆ.