ಜೆಡಿಎಸ್ ಪಕ್ಷದ ರಾಜ್ಯ ಕಾರ್ಯದರ್ಶಿಯಾಗಿ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್‌ಪೇಟೆ ನಿವಾಸಿ ಆರ್. ಎ. ಚಾಬುಸಾಬ್ ಅವರನ್ನು ನೇಮಿಸಿ ಇಂದಿನಿಂದಲೇ ಕಾರ್ಯಪ್ರವೃತ್ತರಾಗಿ ಪಕ್ಷ ಸಂಘಟನೆಗೆ ಅಣಿಯಾಗುವಂತೆ ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಆದೇಶ ನೀಡಿದ್ದಾರೆ.
ಸುಮಾರು 30 ವರ್ಷಗಳಿಗೂ ಹೆಚ್ಚು ಕಾಲ ಜೆಡಿಎಸ್ ಪಕ್ಷದ ಕಟ್ಟಾಳಾಗಿ ವಿವಿಧ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿರುವ ಚಾಬುಸಾಬ್ ಅವರು ಎರಡನೇ ಬಾರಿಗೆ ರಾಜ್ಯ ಕಾರ್ಯದರ್ಶಿ ಹುದ್ದೆ ಅಲಂಕರಿಸುತ್ತಿದ್ದಾರೆ.
ಮೊದಲಿಗೆ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷಕ್ಕೆ ಅಸ್ತಿತ್ವವೇ ಇಲ್ಲದೇ ಇರುವಾಗ ಪಕ್ಷ ಸಂಘಟನೆಗಾಗಿ ಹಾಗೂ ಪಕ್ಷದ ಜಿಲ್ಲಾ ಕಚೇರಿ ಉಳಿವಿಗಾಗಿ ಹೋರಾಟ ನಡೆಸಿದವರಲ್ಲಿ ಇವರು ಪ್ರಮುಖರಾಗಿದ್ದಾರೆ.
ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ಆಪ್ತ ಬಳಗದಲ್ಲಿ ಕಂಡುಬರುವ ಇವರ ನೇಮಕಾತಿಯನ್ನು ವಿಧಾನ ಪರಿಷತ್ ಸದಸ್ಯ ಭೋಜೆಗೌಡ,ತೀರ್ಥಹಳ್ಳಿ ಜೆಡಿಎಸ್ ಅಭ್ಯರ್ಥಿ ಯಡೂರು ರಾಜಾರಾಂ, ಜೆಡಿಎಸ್ ಪಕ್ಷದ ತಾಲೂಕು ಅಧ್ಯಕ್ಷ ಎನ್ ವರ್ತೆಶ್, ಪ್ರಧಾನ ಕಾರ್ಯದರ್ಶಿ ಜಯರಾಮ ಶೆಟ್ಟಿ,ಮುಖಂಡರಾದ ಕಲ್ಲೂರು ಮೇಘರಾಜ್, ಜಿ ಎಸ್ ವರದರಾಜ್ ,ಕಲ್ಲೂರು ಈರಣ್ಣ,ಮುಡುಬಾ ಧರ್ಮಪ್ಪ ಸ್ವಾಗತಿಸಿದ್ದಾರೆ.