ರಿಪ್ಪನ್‌ಪೇಟೆ : ಇಲ್ಲಿನ ಸಮೀಪದ ಹೆದ್ದಾರಿಪುರ ಗ್ರಾ.ಪಂ. ಅಧ್ಯಕ್ಷೆ ವಿರುದ್ಧ ಸದಸ್ಯರು ಶುಕ್ರವಾರ ಅವಿಶ್ವಾಸ ಗೊತ್ತುವಳಿ ಮಂಡನೆ ಮಾಡಿದ್ದು, ಮೂರನೇ ಎರಡು ಮತಗಳಿಂದ ಪಂಚಾಯತ್ ಅಧ್ಯಕ್ಷೆ ವನಿತಾ ಗಂಗಾಧರ್ ತನ್ನ ಸ್ಥಾನ ಕಳೆದುಕೊಂಡಿದ್ದಾರೆ.
ಹೆದ್ದಾರಿಪುರ ಗ್ರಾಮ ಪಂಚಾಯತ್ ನಲ್ಲಿ ಒಟ್ಟು 15 ಸದಸ್ಯರಿದ್ದು ಓರ್ವರು ಮೃತಪಟ್ಟಿದ್ದಾರೆ, ಈ ಪೈಕಿ 11 ಸದಸ್ಯರು ಅವಿಶ್ವಾಸ ಗೊತ್ತುವಳಿ ಪರ ಮತ ಚಲಾಯಿಸಿದ್ದಾರೆ.ಇದರಲ್ಲಿ 4 ಬಿಜೆಪಿ ಬೆಂಬಲಿತ ಸದಸ್ಯರು,5 ಕಾಂಗ್ರೆಸ್ ಬೆಂಬಲಿತರು ಹಾಗೂ 2 ಪಕ್ಷೇತರ ಸದಸ್ಯರು ಅವಿಶ್ವಾಸ ಗೊತ್ತುವಳಿ ಪರ ಮತ ಚಲಾಯಿಸಿದ್ದಾರೆ.ಮೂವರು ಗೈರುಹಾಜರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಅವಿಶ್ವಾಸ ಗೊತ್ತುವಳಿ ಯನ್ನು ಮೂರನೇ ಎರಡು ಬಹುಮತದೊಂದಿಗೆ ಅಂಗೀಕರಿಸಲಾಯಿತು.
ಇದರಿಂದ ಹೆದ್ದಾರಿಪುರ ಗ್ರಾಮ ಪಂಚಾಯತ್ ನಲ್ಲಿ 19 ತಿಂಗಳು ಆಡಳಿತ ನಡೆಸಿದ ವನಿತಾ ಗಂಗಾಧರ್ ಅಧ್ಯಕ್ಷ ಹುದ್ದೆ ಕಳೆದುಕೊಂಡ ಹಿನ್ನೆಲೆಯಲ್ಲಿ ಆಡಳಿತಕ್ಕೆ ಪೂರ್ಣ ವಿರಾಮ ಬಿದ್ದಿದೆ.
ವನಿತಾ ಗಂಗಾಧರ್ 2021ರ ಫೆಬ್ರವರಿ ತಿಂಗಳಲ್ಲಿ ಹೆದ್ದಾರಿಪುರ ಗ್ರಾಮ ಪಂಚಾಯತ್ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದರು. ಇತ್ತೀಚೆಗೆ ಸದಸ್ಯರ ಬೇಡಿಕೆಗಳಿಗೆ ಸಕಾರಾತ್ಮಕವಾಗಿ ಅಧ್ಯಕ್ಷರು ಸ್ಪಂದಿಸುತ್ತಿಲ್ಲ ಎಂಬ ಆರೋಪ ವ್ಯಕ್ತವಾಗಿತ್ತು. ಅದು ತಾರಕಕ್ಕೇರಿ ಹೆದ್ದಾರಿಪುರ ಗ್ರಾಮ ಪಂಚಾಯತ್ ಸದಸ್ಯರು ಅಧ್ಯಕ್ಷೆ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡನೆಗೆ ತಿಂಗಳ ಹಿಂದೆ ಮೇಲಧಿಕಾರಿಗಳಿಗೆ ಅರ್ಜಿ ಸಲ್ಲಿಸಿದ್ದರು.
ಬಿಜೆಪಿ ಬೆಂಬಲಿತ ಅಧ್ಯಕ್ಷರ ವಿರುದ್ದ ಬಿಜೆಪಿಯ ನಾಲ್ವರು ಸದಸ್ಯರು ಅವಿಶ್ವಾಸ ವ್ಯಕ್ತಪಡಿಸಿರುವುದು ವಿಶೇಷವಾಗಿದ್ದು,ಪಕ್ಷದ ಮುಖಂಡರು ಏನು ಶಿಸ್ತು ಕ್ರಮ ಕೈಗೊಳ್ಳುತ್ತಾರೆ ಎಂಬುವುದನ್ನು ಕಾದುನೋಡಬೇಕಾಗಿದೆ.