ರಿಪ್ಪನ್‌ಪೇಟೆ : ಗ್ರಾಮೀಣ ಪ್ರದೇಶದಲ್ಲಿ ಅರಳುತ್ತಿರುವ ಪ್ರತಿಭೆಗಳಿಗೆ ಅವಕಾಶವಿದ್ದರೆ ಸಾಧನೆಯ ಮೂಲಕ ತಮ್ಮ ಸಾಮರ್ಥ್ಯವನ್ನು ರಾಷ್ಟ್ರೀಯ ಮಟ್ಟದಲ್ಲಿ ತೋರಿಸಬಲ್ಲರು ಎಂಬುದಕ್ಕೆ ಮೋನಿಕಾ ಎನ್ ಶೆಟ್ಟಿ ಸಾಕ್ಷಿಯಾಗಿದ್ದಾರೆ.
ಭಾರತ ಕ್ರಿಕೆಟ್ ಜನಪ್ರಿಯತೆಯ ರಾಷ್ಟ್ರ ಎಂಬುದರಲ್ಲಿ ಯಾವುದೇ ಮುಚ್ಚು ಮರೆ ಇಲ್ಲ. ಆದರೆ, ಇತರ ಕ್ರೀಡಾಪಟುಗಳು ಕೂಡಾ ತಮ್ಮಲ್ಲಿರುವ ಪ್ರತಿಭೆಯನ್ನು ಹೊರಗೆ ತರಲು ಪ್ರಯತ್ನಿಸುತ್ತಿದ್ದಾರೆ.
ಭಾರತಂತಹ ದೇಶದಲ್ಲಿ ಕಡಿಮೆ ಜನಪ್ರಿಯತೆ ಹೊಂದಿರುವ ಕ್ರೀಡೆಗಳಲ್ಲಿ ಒಂದಾದ ಕರಾಟೆಯಲ್ಲಿ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಹೆದ್ದಾರಿಪುರ ಗ್ರಾಮದ ಮೋನಿಕಾ ಎನ್ ಶೆಟ್ಟಿ ಕೂಡಾ ಒಬ್ಬರಾಗಿದ್ದಾರೆ.
ಕರಾಟೆಯಲ್ಲಿ ಈಗಾಗಲೇ ಜ್ಯೂನಿಯರ್ ಬ್ಲಾಕ್ ಬೆಲ್ಟ್ ಆಗಿರುವ 19 ವರ್ಷದ ಮೋನಿಕಾ ಎನ್ ಶೆಟ್ಟಿ, ದೊಡ್ಡ ಕನಸು ಹೊಂದಿದ್ದಾರೆ ಅದು ಆಕೆಗಾಗಿ ಮಾತ್ರ ಅಲ್ಲ, ಇಡೀ ದೇಶಕ್ಕಾಗಿ.
ರಿಪ್ಪನ್‌ಪೇಟೆ ಸಮೀಪದ ಹೆದ್ದಾರಿಪುರ ಗ್ರಾಮದ ನಿವಾಸಿ ನಾಗರಾಜ್ ಮತ್ತು ಕವಿತಾ ಎನ್ ಶೆಟ್ಟಿ ದಂಪತಿಗಳ ನಾಲ್ವರು ಪುತ್ರಿಯರಲ್ಲಿ ಮೂರನೇ ಪುತ್ರಿ ಮೋನಿಕಾ ಎನ್ ಶೆಟ್ಟಿ ತನ್ನ ಕರಾಟೆ ಪ್ರತಿಭೆಯಿಂದ ರಾಷ್ಟ್ರ ಮಟ್ಟದಲ್ಲಿ ಮಿಂಚುತಿದ್ದಾಳೆ.
ಒಂಬತ್ತರ ಹರೆಯದಿಂದ ಆಕೆ ಕರಾಟೆ ಕಲಿಯಲು ಆರಂಭಿಸಿದ್ದಾಳೆ. ಕರಾಟೆ ಯಾವಾಗಲೂ ಸವಾಲಿನಿಂದ ಕೂಡಿರುತ್ತದೆ. ಕಲಿಕೆಯ ಬಗ್ಗೆ ಆಸಕ್ತಿ,ಕಠಿಣಶ್ರಮ, ಅವಿರತ ಪ್ರಯತ್ನ, ಸೋಲು ಗೆಲುವುಗಳು ಎರಡನ್ನು ಸವಾಲನ್ನಾಗಿ ಸ್ವೀಕರಿಸಿ ತರಬೇತಿಯೊಂದಿಗೆ ಅದನ್ನು ಸಾಧಿಸಿದ್ದಾಳೆ.ಜಿಲ್ಲಾಮಟ್ಟದಿಂದ ರಾಷ್ಟ್ರ ಮಟ್ಟದ ಕರಾಟೆ ಸ್ಪರ್ಧೆಗಳಲ್ಲಿ ಆಕೆ ಗೆದ್ದ ಚಿನ್ನ, ಬೆಳ್ಳಿ ಮತ್ತು ಕಂಚಿನ ಪದಕಗಳು ಅವಳ ಸಾಧನೆಯನ್ನು ಸಾರುತ್ತವೆ.
ಬೆಂಗಳೂರು, ಶಿವಮೊಗ್ಗ, ಕಡೂರು, ಕುರುಕ್ಷೇತ್ರ ಸೇರಿದಂತೆ ರಾಜ್ಯ ಹಾಗೂ ರಾಷ್ಟ್ರದ ವಿವಿಧ ಭಾಗಗಳಲ್ಲಿ ನಡೆದ ಕರಾಟೆ ಸ್ಪರ್ಧೆಯಲ್ಲಿ ಭಾಗವಹಿಸಿದ ಮೋನಿಕಾ ಎನ್ ಶೆಟ್ಟಿ ತನಗೆ ಕರಾಟೆ ತರಬೇತಿಯನ್ನು ನೀಡಿದ ಪ್ರತಿಯೊಬ್ಬ ಶಿಕ್ಷಕರುಗಳನ್ನು ಸ್ಮರಿಸುತ್ತಾ ರಾಷ್ಟ್ರಮಟ್ಟದ ಕರಾಟೆ ಸ್ಪರ್ದಯಲ್ಲಿ ಒಂದು ಬಾರಿ ಹಾಗೂ ರಾಜ್ಯಮಟ್ಟದಲ್ಲಿ ನಾಲ್ಕು ಬಾರಿ ಪ್ರಥಮ ಸ್ಥಾನವನ್ನು ಪಡೆದುಕೊಂಡು ಮಲೆನಾಡಿನ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಹೆದ್ದಾರಿಪುರ ಗ್ರಾಮದ ಕೀರ್ತಿ ಪತಾಕೆಯನ್ನು ಕರಾಟೆ ಪ್ರದರ್ಶನದ ಮೂಲಕ ರಾಷ್ಟ್ರಮಟ್ಟದಲ್ಲಿ ಹಾರಿಸುತ್ತಿದ್ದಾಳೆ.
ವಿದ್ಯಾಬ್ಯಾಸದಲ್ಲೂ ಸೈ ಎನಿಸಿಕೊಂಡಿರುವ ಮೋನಿಕಾ. ಎನ್. ಶೆಟ್ಟಿ ಎಸ್ ಎಸ್ ಎಲ್ ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಅತ್ಯುನ್ನತ ಶ್ರೇಣಿಯನ್ನು ಪಡೆದುಕೊಂಡಿದ್ದಾಳೆ. ಪ್ರಸ್ತುತ ಉಡುಪಿಯ ವೈಕುಂಟ ಬಾಳಿಗ ಕಾಲೇಜಿನಲ್ಲಿ ಪ್ರಥಮ ವರ್ಷದ ಕಾನೂನು ಪದವಿಯಲ್ಲಿ ವ್ಯಾಸಂಗ ಮಾಡುತ್ತಿರುವ ಮೋನಿಕಾ ಎನ್ ಶೆಟ್ಟಿ ಯುಪಿಎಸ್ ಸಿ ಪರೀಕ್ಷೆಯನ್ನು ತೇರ್ಗಡೆ ಹೊಂದುವ ಅಭಿಲಾಷೆಯನ್ನು ಹೊಂದಿದ್ದಾಳೆ.
ಮೋನಿಕಾ ಎನ್ ಶೆಟ್ಟಿಯ ಕರಾಟೆ ಪ್ರತಿಭೆ ರಾಷ್ಟ್ರಮಟ್ಟದಲ್ಲಿ ಮಿನುಗುತ್ತಿರಲಿ ಹಾಗೆ ಆಕೆಯ ಯುಪಿಎಸ್‌ಸಿ ಪರೀಕ್ಷೆಯನ್ನು ತೇರ್ಗಡೆ ಹೊಂದುವ ಅಭಿಲಾಷೆ ಈಡೇರಿಲಿ ಎಂದು ಪೋಸ್ಟ್ ಮ್ಯಾನ್ ಸುದ್ದಿ ಬಳಗ ಹಾರೈಸುತ್ತದೆ.
ಸಂಪೂರ್ಣ ವೀಡಿಯೋ ಇಲ್ಲಿ ವೀಕ್ಷಿಸಿ👇