ಈ ಸಂದರ್ಭದಲ್ಲಿ ರೈತ ಸೋಮಶೇಖರ ಮಾದ್ಯಮದವರೊಂದಿಗೆ ಮಾತನಾಡಿ ಕೆಂಚನಾಲ ಗ್ರಾ,ಮದ ಸರ್ವೆ ನಂ. ೩೫ ರಲ್ಲಿ ೨ ಎಕರೆ ಜಮೀನನ್ನು ಹೊಂದಿರುವ ನಾನು ಸಾಗುವಳಿಯ ಜೊತೆಗೆ ರಬ್ಬರ್ ಮರಗಳನ್ನು ನೆಟ್ಟು ಕೃಷಿ ಚಟುವಟಿಕೆಯಲ್ಲಿ ತೊಡಗಿರುತ್ತೇನೆ. ಅಕ್ಕಪಕ್ಕದ ಬಗರ್ ಹುಕುಂ ಮಂಜೂರಾತಿ ಪಡೆದ ರೈತರು ನನ್ನ ಜಮೀನಿಗೆ ಹೋಗಲು ಇದ್ದ ದಾರಿಯಲ್ಲಿ ಅಕ್ರಮ ಬೇಲಿ ನಿರ್ಮಿಸಿ ಸಂಚಾರಕ್ಕೆ ತಡೆಯೊಡ್ಡಿದ್ದಾರೆ. ಕಳೆದ ಐದು ವರ್ಷಗಳ ಹಿಂದೆ ಈ ಘಟನೆ ನಡೆದಿದ್ದು, ಅಂದಿನಿಂದ ಇಂದಿನವರೆಗೆ ನನಗೆ ಓಡಾಡಲು ದಾರಿ ಇಲ್ಲದ ಕಾರಣ ನನ್ನ ಸ್ವಂತ ಜಮೀನನ್ನು ಹಾಳು ಬಿಟ್ಟಿರುತ್ತೇನೆ. ೨೦೧೭ ರಲ್ಲಿ ಬೇಲಿ ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸುವಂತೆ ಕಂದಾಯ ಇಲಾಖೆಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ತಂದಿದ್ದೇನೆ.
ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ತಹಶೀಲ್ದಾರ್‌ರರು ಸಿಬ್ಬಂದಿಗಳೊದಿಗೆ ಸ್ಥಳಕ್ಕಾಗಮಿಸಿ ರಸ್ತೆಯ ಎರಡೂ ಬದಿಯಲ್ಲಿ ಕಂದಕ ನಿರ್ಮಾಣಮಾಡಿ ರಸ್ತೆ ಬಿಡಿಸಿದ್ದರು. ಆದರೆ ಒಂದೇ ದಿನದ ಅಂತರದಲ್ಲಿ ಪುನಃ ಓಡಾಡುವ ರಸ್ತೆಗೆ ಬೇಲಿ ನಿರ್ಮಿಸಿದ್ದಾರೆ. ಅಕ್ರಮ ಬೇಲಿ ನಿರ್ಮಿಸಿರುವವರ ವಿರುದ್ಧ ಕ್ರಮಕೈಗೊಂಡು ದಾರಿ ಬಿಡಿಸಿಕೊಡುವಂತೆ ಹಲವು ಬಾರಿ ಇಲಾಖೆಗೆ ಮನವಿ ಮಾಡಿದ್ದೇನೆ. ಆದರೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಹೋಗುವುದು ಬಿಟ್ಟರೆ ನನಗೆ ಕಳೆದ ೫ ವರ್ಷಗಳಿಂದಲೂ ನ್ಯಾಯ ಕೊಟ್ಟಿಲ್ಲ. ಜೀವನೋಪಾಯಕ್ಕಿದ್ದ ಭೂಮಿಯಲ್ಲಿ ಕೃಷಿಯನ್ನು ಮಾಡದೆ ಇಡೀ ಕುಟುಂಬ ಬೀದಿಗೆ ಬಿದ್ದಿದ್ದೇವೆ. ಕುಟುಂಬದ ಜೀವನ ನಿರ್ವಹಣೆಗಾಗಿ ಕೂಲಿ ಮಾಡುತ್ತಿದ್ದು ಹೆಂಡತಿಯ ಅನಾರೋಗ್ಯದ ಚಿಕಿತ್ಸೆಗಾಗಿ ಚಿಕ್ಕ ಮಗನೂ ಕೂಡ ಶಾಲೆಯ ಓದನ್ನು ತೊರೆದು ಕೂಲಿಮಾಡುವಂತಾಗಿದೆ.
ಕಛೇರಿಗಳಿಗೆ ಹಲವು ವರ್ಷಗಳಿಂದ ಅಲೆದು ನನ್ನ ಕೈಯಲ್ಲಿ ಬಿಡಿಗಾಸು ಇಲ್ಲದಂತಾಗಿದೆ. ಆರ್ಥಿಕ ಮತ್ತು ದೈಹಿಕವಾಗಿ ಅಶಕ್ತನಾದ ನನಗೆ ಧರಣಿ ಹೊರತುಪಡಿಸಿದರೆ ಅನ್ಯಮಾರ್ಗವಿಲ್ಲ. ನಾನು ಉಳುಮೆ ಮಾಡಲು ದಾರಿಯನ್ನು ಬಿಸಿಕೊಡುವವರೆಗೂ ಇಲ್ಲಿಯೇ ಹೋರಾಟ ನಡೆಸುತ್ತೇನೆಂದು ದುಃಖದಿಂದ ಇಲಾಖೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದನು.
ಅಹವಾಲನ್ನು ಆಲಿಸಿದ ಉಪತಹಶೀಲ್ದಾರ್ ಹುಚ್ಚರಾಯಪ್ಪ ದಾರಿ ಸಮಸ್ಯೆಗೆ ಸಂಬಂಧಿಸಿದಂತೆ ಸಂಬಂಧಿತರಿಗೆ ಈಗಾಗಲೇ ತಿಳುವಳಿಕೆ ನೋಟೀಸ್ ನೀಡಲಾಗಿದೆ. ಧರಣಿಯ ವಿಷಯವನ್ನು ಮೇಲಾಧಿಕಾರಿಗಳ ಗಮನಕ್ಕೂ ತರಲಾಗಿದೆ. ತಹಸೀಲ್ದಾರ್‌ರರ ನಿರ್ದೇಶನದಂತೆ ಬಗರ್ ಹುಕುಂ ಮಂಜೂರಾತಿ ಆದೇಶದ ನಿಯಮ ಉಲ್ಲಂಘನೆಯ ೧೦೮/ಎ ಪ್ರಕಾರ ಮಂಜೂರಾತಿ ರದ್ದು ಪಡಿಸುವ ಕ್ರಮಕೈಗೊಳ್ಳುವಂತೆ ತಹಸೀಲ್ದಾರ್‌ರರ ಮೂಲಕ ಉಪವಿಭಾಗಾಧಿಕಾರಿಗಳಿಗೆ ಸೂಕ್ತ ಪ್ರಸ್ತಾವನೆಯನ್ನು ಸಲ್ಲಿಸಿ, ಮುಂದಿನ ಕ್ರಮ ಜರುಗಿಸಲಾಗುವುದು ಎಂದು ಭರವಸೆ ನೀಡಿದ ಹಿನ್ನೆಲೆಯಲ್ಲಿ ರೈತಕುಟುಂಬ ತಾತ್ಕಾಲಿಕವಾಗಿ ಧರಣಿ ಹಿಂಪಡೆದರು.
ಪ್ರತಿಭಟನೆಯಲ್ಲಿ ರೈತ ಸೋಮಶೇಖರ, ಪತ್ನಿ ಚಂದ್ರಕಲಾ, ಮಕ್ಕಳಾದ ಅನುಪ, ಅಲೋಕ ಇದ್ದರು.