ಶಿವಮೊಗ್ಗ:ಅಮೀರ್ ಅಹಮದ್ ಸರ್ಕಲ್’ನಲ್ಲಿ ಸಾವರ್ಕರ್ ಫೋಟೊ ವಿವಾದ ಸಂಬಂಧ ಪರಿಸ್ಥಿತಿ ಭುಗಿಲೆದ್ದಿದೆ. ಈ ಹಿನ್ನೆಲೆಯಲ್ಲಿ ಮುಂಜಾಗ್ರತ ಕ್ರಮವಾಗಿ ಶಿವಮೊಗ್ಗ ನಗರದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ತಕ್ಷಣದಿಂದಲೇ ಜಾರಿಗೆ ಬರುವಂತೆ ಶಿವಮೊಗ್ಗ ನಗರದಲ್ಲಿ ನಿಷೇಧಾಜ್ಞೆ ಜಾರಿಗೊಳಿಲಾಗಿದೆ. ಎರಡು ದಿನ ನಗರದಲ್ಲಿ ಸೆಕ್ಷನ್ 144 ಅನ್ವಯ ನಿಷೇಧಾಜ್ಞೆ ಜಾರಿಯಲ್ಲಿ ಇರಲಿದೆ.
ಜಿಲ್ಲೆಯಲ್ಲಿ ವೀರ ಸಾವರ್ಕರ್ ಭಾವಚಿತ್ರ ವಿವಾದ ಸದ್ಯಕ್ಕೆ ಅಂತ್ಯವಾಗುವಂತೆ ಕಾಣುತ್ತಿಲ್ಲ. ಇಂದು ಕೂಡ ವೀರ ಸಾವರ್ಕರ್ ಭಾವಚಿತ್ರ ಇಡುವ ವಿಚಾರಕ್ಕೆ ಎರಡು ಕೋಮಿನ ಯುವಕರ ನಡುವೆ ಜಟಾಪಟಿ ನಡೆದಿದೆ.
ಶಿವಮೊಗ್ಗದ ಅಮೀರ್ ಅಹಮದ್ ವೃತ್ತದಲ್ಲಿ ಇರುವ ಸಾವರ್ಕರ್ ಫೋಟೊ ತೆಗೆದು ಟಿಪ್ಪು ಫೋಟೋ ಇಡಲು ಯುವಕರು ಮುಂದಾಗಿದ್ದರು. ವಿಚಾರ ತಿಳಿದ ಪೊಲೀಸರು ಸಾವರ್ಕರ್ ಫೋಟೋ ತೆರವು ಮಾಡಿದ್ದರು. ಜೊತೆಗೆ ಟಿಪ್ಪು ಫೋಟೊ ಇಡಲು ನಿರಾಕರಿಸಿದ್ದರು.
ಇದೇ ವಿಚಾರಕ್ಕೆ ಜಟಾಪಟಿ ಆರಂಭವಾಗಿದ್ದು, ಸಾವರ್ಕರ್ ಫೋಟೋ ತೆರವು ಮಾಡಿರುವುದಕ್ಕೆ ಹಿಂದೂ ಪರ ಸಂಘಟನೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಮತ್ತೊಂದು ಕೋಮಿನ ಯುವಕರು ಪ್ರತಿಭಟನೆ ನಡೆಯುವ ಸ್ಥಳಕ್ಕೆ ನುಗ್ಗಲು ಯತ್ನಿಸಿದ್ದು, ಪೊಲೀಸರನ್ನೂ ಲೆಕ್ಕಿಸದೇ ಸಾವರ್ಕರ್ ಫ್ಲೆಕ್ಸ್ ಕಿತ್ತೊಗೆಯಲು ಮುಂದಾಗಿದ್ದಾರೆ.
ಪರಿಸ್ಥಿತಿ ಹತೋಟಿಗೆ ತರಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದಾರೆ. ಸದ್ಯ ಶಿವಮೊಗ್ಗ ನಗರದಲ್ಲಿ ಎರಡು ದಿನ ಸೆಕ್ಷನ್ ಜಾರಿಗೊಳಿಸಲಾಗಿದೆ.
ಸಂಪೂರ್ಣ ವೀಡಿಯೋ ಇಲ್ಲಿ ವೀಕ್ಷಿಸಿ👇