ರಿಪ್ಪನ್ ಪೇಟೆ: ರಾಜ್ಯ ಹೆದ್ದಾರಿ 1ರ ಆನಂದಪುರ ದಿಂದ ತೀರ್ಥಹಳ್ಳಿ ಮಾರ್ಗದಲ್ಲಿ ಒಂದೇ ಒಂದು ಕೆಎಸ್ಆರ್ಟಿಸಿ ಬಸ್ಸುಗಳು ಸಂಚರಿಸುತ್ತಿಲ್ಲ. ಇದಕ್ಕೆ ಚುನಾಯಿತ ಪ್ರತಿನಿಧಿಗಳ ನಿರ್ಲಕ್ಷವೇ. ಖಾಸಗಿ ಬಸ್ ಮಾಲೀಕರುಗಳ ಹುನ್ನಾರವೇ ಕಾರಣವೇ ಎಂಬ ಯಕ್ಷಪ್ರಶ್ನೆ ಸಾರ್ವಜನಿಕರಲ್ಲಿ ಉಂಟುಮಾಡಿದೆ.
ರಾಜ್ಯ ಹೆದ್ದಾರಿ 1ರ ಆನಂದಪುರ -ತೀರ್ಥಹಳ್ಳಿ ಮಾರ್ಗದಲ್ಲಿ ದಿನನಿತ್ಯ ಸಾವಿರಾರು ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳಿಗೆ ಹಾಗೂ ಸಾರ್ವಜನಿಕರು ವಿವಿಧ ಉದ್ಯೋಗ ನಿಮಿತ್ತ ದಿನನಿತ್ಯ ಸಂಚರಿಸುತ್ತಿದ್ದಾರೆ. ಆದರೆ ಈ ಮಾರ್ಗದಲ್ಲಿ ಮುಂದೆ ಒಂದು ಕೆ ಎಸ್ ಆರ್ ಟಿ ಸಿ ಬಸ್ ಸಂಚರಿಸುತ್ತಿಲ್ಲ. ಈ ಬಗ್ಗೆ ನೂರಾರು ಬಾರಿ ಚುನಾಯಿತ ಪ್ರತಿನಿಧಿಗಳಿಗೆ ಹಾಗೂ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ ವಿದ್ಯಾರ್ಥಿಗಳು ಹಾಗೂ ನಾಗರಿಕರು ಕೆಎಸ್ಆರ್ ಟಿ ಬಸ್ ಸಂಚಾರವನ್ನು ಆರಂಭಿಸಲು ಮನವಿಯನ್ನು ಸಲ್ಲಿಸಿದ್ದರು ಯಾವುದೇ ಪ್ರಯೋಜನವಾಗಿಲ್ಲ.
ರಾಜ್ಯ ರಸ್ತೆ ಸಾರಿಗೆಯಲ್ಲಿ ವಿದ್ಯಾರ್ಥಿಗಳ ಪ್ರಯಾಣಕ್ಕೆ ರಿಯಾಯಿತಿಯನ್ನು ನೀಡಿದ್ದು. ಪ್ರತಿನಿತ್ಯ ಶಾಲಾ-ಕಾಲೇಜುಗಳಿಗೆ ಸಂಚರಿಸುವ ಬಡ ವಿದ್ಯಾರ್ಥಿಗಳಿಗೆ ಅನುಕೂಲವಾಗಬೇಕು ಎಂದರೆ ಕೆಎಸ್ ಆರ್ ಟಿಸಿ ಬಸ್ ಗಳು ಈ ಮಾರ್ಗದಲ್ಲಿ ಸಂಚರಿಸಬೇಕು. ಹಾಗೆಯೇ ಕೆಎಸ್ ಆರ್ ಟಿಸಿ ಬಸ್ಸಿನಲ್ಲಿ ಪ್ರಯಾಣ ದರ ಖಾಸಗಿ ಬಸ್ಸುಗಳಿಗಿಂತ ಶೇಕಡಾ 25ರಷ್ಟು ಕಡಿಮೆ ಇದೆ.ಇದರಿಂದ ಪ್ರತಿನಿತ್ಯ ವಿವಿಧ ಕಾರ್ಯನಿಮಿತ್ತ ತೀರ್ಥಹಳ್ಳಿಯಿಂದ-ಕೋಣಂದೂರು-ಹುಂಚ-ಗರ್ತಿಕೆರೆ- ಹೆದ್ದಾರಿಪುರ-ಮುಗುಡ್ತಿ-ರಿಪ್ಪನ್ ಪೇಟೆ-ಆನಂದ ಪುರ-ಸಾಗರಕ್ಕೆ ಸಂಚರಿಸುವ ಸಾವಿರಾರು ಪ್ರಯಾಣಿಕರಿಗೆ ತುಂಬಾ ಅನುಕೂಲವಾಗಲಿದೆ.
ಈ ಹಿಂದೆ ವಿದ್ಯಾರ್ಥಿಗಳ ಮನವಿಗೆ ಸ್ಪಂದಿಸಿದ್ದ ಅಧಿಕಾರಿಗಳು ಬಸ್ ಗಳು ಈ ಮಾರ್ಗದಲ್ಲಿ ಸಂಚರಿಸುತ್ತವೆ ಎಂದು ತೋರಿಸಲು KSRTC ಬಸ್ ಸಂಚರಿಸಲು ಅನುವುಮಾಡಿಕೊಟ್ಟಿದ್ದರು.ಆದರೆ ಅದು ವಿದ್ಯಾರ್ಥಿಗಳ ಹಾಗೂ ಸಾರ್ವಜನಿಕರ ಗಮನಕ್ಕೆ ಬರುವುದರೊಳಗೆ ಯಾರಿಗೂ ಅರಿವಾಗದಂತೆ ಬಸ್ ಸಂಚಾರವನ್ನು ರದ್ದುಪಡಿಸಿದ್ದರು.
ಕೇವಲ ನೆಪ ಮಾತ್ರಕ್ಕೆ ಬಸ್ ಸಂಚಾರವನ್ನು ಆರಂಭಿಸಿ ಖಾಸಗಿ ಬಸ್ಸು ಮಾಲೀಕರುಗಳ ಹುನ್ನಾರಕ್ಕೆ ಹಾಗೂ ಪುಡಿಗಾಸಿನ ಆಸೆಗಾಗಿ ಕೆಲವು ಅಧಿಕಾರಿಗಳು ಸರ್ಕಾರಿ ಬಸ್ಸುಗಳಲ್ಲಿ ಪ್ರಯಾಣಿಕರು ಸಂಚರಿಸುತ್ತಿಲ್ಲ ಇದರಿಂದ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ ನಷ್ಟ ಉಂಟಾಗುತ್ತಿದೆ ಎಂಬ ಕಾರಣ ನೀಡಿ ಬಸ್ ಸಂಚಾರವನ್ನು ನಿಲ್ಲಿಸಿದರು.
ಶಾಲಾ ಕಾಲೇಜುಗಳಲ್ಲಿ ತರಗತಿಗಳು ಆರಂಭವಾಗುವ ಮತ್ತು ಮುಕ್ತಾಯವಾಗುವ ಸಮಯದಲ್ಲಿ ಆನಂದಪುರದದಿಂದ ತೀರ್ಥಹಳ್ಳಿ ಮಾರ್ಗದ ನಡುವೆ ಕೆಎಸ್ ಆರ್ ಟಿಸಿ ಬಸ್ಸುಗಳು ಸಂಚರಿಸಿದರೆ ದಿನನಿತ್ಯ ಶಾಲಾ-ಕಾಲೇಜುಗಳಿಗೆ ಬರುವ ಸಾವಿರಾರು ವಿದ್ಯಾರ್ಥಿಗಳಿಗೆ ತುಂಬಾ ಅನುಕೂಲವಾಗಲಿದೆ.ಖಾಸಗಿ ಬಸ್ ಗಳಲ್ಲಿ ವಿದ್ಯಾರ್ಥಿಗಳು ಅಂಗಲಾಚಿದಾಗ ಪಾಸ್ ಏನೋ ನೀಡುತ್ತಾರೆ ಆದರೆ ಅವರು ತಮ್ಮ ನಿಲ್ದಾಣದವರೆಗೂ ನಿಂತುಕೊಂಡೆ ಪ್ರಯಾಣಿಸಬೇಕು ಒಂದೊಮ್ಮೆ ಕುಳಿತರೆ ಖಾಸಗಿ ಬಸ್ ನ ಸಿಬ್ಬಂದಿಗಳ ಕಣ್ಣು ಕೆಂಪಾಗುತ್ತದೆ.
ತೀರ್ಥಹಳ್ಳಿ- ಸಾಗರ ರಾಜ್ಯ ಹೆದ್ದಾರಿ 1 ರಲ್ಲಿ ಕೆಎಸ್ ಆರ್ ಟಿಸಿ ಬಸ್ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ರಾಜ್ಯದ ಗೃಹ ಮಂತ್ರಿ ಆರಗ ಜ್ಞಾನೆಂದ್ರ ಮತ್ತು ಸಾಗರ ಹೊಸನಗರ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಎಂಎಸ್ಐಎಲ್ ಅಧ್ಯಕ್ಷರಾದ ಹರತಾಳು ಹಾಲಪ್ಪ ರವರಿಗೆ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರು ಮತ್ತು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಇನ್ನಾದರೂ ಚುನಾಯಿತ ಪ್ರತಿನಿಧಿಗಳು ಮತ್ತು ರಾಜ್ಯ ರಸ್ತೆ ಸಾರಿಗೆ ನಿಗಮದ ಅಧಿಕಾರಿಗಳು ರಾಜ್ಯ ಹೆದ್ದಾರಿ 1ರ ಮಾರ್ಗದಲ್ಲಿ ಕೆಎಸ್ ಆರ್ ಟಿಸಿ ಬಸ್ಸುಗಳ ಸಂಚಾರಕ್ಕೆ ಅನುವು ಮಾಡಿಕೊಡುತ್ತಾರ ಎಂದು ಕಾದುನೋಡಬೇಕಾಗಿದೆ.