ಶಿವಮೊಗ್ಗ: ಹಾನಗಲ್ನಲ್ಲಿ ಮುಳುಗುವ ಹಂತದಲ್ಲಿ ಕಡ್ಡಿ ಹಿಡಿದು ಬದುಕುವ ಪ್ರಯತ್ನ ಮಾಡಿದ್ದಾರೆ. ಅದೇ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ಸಿಗರಿಗೆ ಸುನಾಮಿ ಎನಿಸಿಬಿಟ್ಟಿದೆ ಎಂದು ಗ್ರಾಮೀಣಾಭಿವೃದ್ದಿ ಸಚಿವ ಕೆ.ಎಸ್.ಈಶ್ವರಪ್ಪ ವ್ಯಂಗ್ಯವಾಡಿದ್ದಾರೆ.
ಆಡಳಿತ ವಿರೋಧಿ ಸುನಾಮಿ ಎಂಬ ಸಿದ್ದಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಚಾಮುಂಡೇಶ್ವರಿ ಸುನಾಮಿಯಲ್ಲಿ ಸಿದ್ದರಾಮಯ್ಯನವರೇ ಕೊಚ್ಚಿ ಹೋದರು. ಉಪಚುನಾವಣೆ ಸುನಾಮಿಯಲ್ಲಿ ಕಾಂಗ್ರೆಸ್ನವರು ಸಿಂದಗಿಯಲ್ಲಿ ಸಹ ಈಗ ಕೊಚ್ಚಿ ಹೋಗಿದ್ದಾರೆ. ಹಾನಗಲ್ನಲ್ಲಿ ಕಡಿಮೆ ಅಂತರದಲ್ಲಿ ಆಕಸ್ಮಿಕವಾಗಿ ಗೆದ್ದಿದ್ದಾರೆ. ಮುಂದಿನ ಚುನಾವಣೆಯಲ್ಲಿ ಬಡ್ಡಿ ಸಮೇತ ತೀರಿಸಿಕೊಳ್ತೇವೆ ಎಂದರು.
ಪ್ರಾದೇಶಿಕ ಪಕ್ಷಗಳಿಗೆ ಯಾವುದೇ ಸ್ಥಾನ ಇಲ್ಲ ಎಂದು ಮೊನ್ನೆ ನಡೆದ ಚುನಾವಣೆಯಲ್ಲಿ ಗೊತ್ತಾಗಿದೆ. ಬಿಜೆಪಿ ದೊಡ್ಡ ರಾಷ್ಟ್ರೀಯ ಪಕ್ಷವಾಗಿ ಹೊರಹೊಮ್ಮುತ್ತಿದೆ. ಕಾಂಗ್ರೆಸ್ ಕೂಡ ಪ್ರಾದೇಶಿಕ ಪಕ್ಷವಾಗಿ ಕುಗ್ಗುತ್ತಿದೆ.
ಸಿಎಂ ಬೊಮ್ಮಾಯಿ ಅವರ ತವರು ಜಿಲ್ಲೆಯ ಕ್ಷೇತ್ರದಲ್ಲಿ ಸೋತಿದ್ದಾರೆ. ನಾನು ಒಪ್ಪಿಕೊಳ್ಳುತ್ತೇನೆ. ಚಾಮುಂಡೇಶ್ವರಿಯಲ್ಲಿ ಸ್ವತಃ ಸಿಎಂ ಆಗಿದ್ದ ಸಿದ್ದರಾಮಯ್ಯನವರೇ ಸೋತಿದ್ದಾರೆ. ಜೆ.ಹೆಚ್.ಪಟೇಲ್ ಸಿಎಂ ಆಗಿ ಚನ್ನಗಿರಿ ಕ್ಷೇತ್ರದಲ್ಲಿ ಸೋತಿದ್ದಾರೆ. ಇದಕ್ಕೆಲ್ಲಾ ಕಾಂಗ್ರೆಸ್ನವರು ಏನು ಹೇಳ್ತಾರೆ. ಒಂದೇ ಒಂದು ಸೋಲು ಎಲ್ಲವನ್ನೂ ತೀರ್ಮಾನ ಮಾಡಲ್ಲ.
ನಾವು ಲೋಕಸಭೆ, ಉಪಚುನಾವಣೆ, ಪಾಲಿಕೆ ಹಲವೆಡೆ ಗೆದ್ದಿದ್ದೇವೆ. ಗೆಲುವೇ ಬಿಜೆಪಿಯ ತೀರ್ಮಾನ, ಜನ ಕೂಡ ನಮ್ಮನ್ನು ಬೆಂಬಲಿಸುತ್ತಿದ್ದಾರೆ. ಮುಳುಗುವ ಪಕ್ಷಕ್ಕೆ ಹಾನಗಲ್ ಜನರು ಜೀವ ಕೊಟ್ಟಿದ್ದಾರೆ, ದಯೇ ತೋರಿಸಿದ್ದಾರೆ. ಸಿದ್ದರಾಮಯ್ಯ ಹೇಳಿದ ಪ್ರತಿಯೊಂದು ಕೂಡ ಸುಳ್ಳಾಗುತ್ತೆ. ಮೊದಲು ಅವರು ಅವರ ಪಕ್ಷದ ಗುಂಪುಗಾರಿಕೆ ಸರಿ ಮಾಡಿಕೊಳ್ಳಲಿ ಎಂದರು.