ಕಿಮ್ಮನೆ ಹಾಗೂ ಮಂಜುನಾಥ್ ಗೌಡ ನಡುವೆ ತೀರ್ಥಹಳ್ಳಿ ಕಾಂಗ್ರೆಸ್‌ನಲ್ಲಿ ಟಿಕೆಟ್ ಫೈಟ್ ತಾರಕಕ್ಕೆ!!!!!!

ಶಿವಮೊಗ್ಗ : ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೆ ಎರಡು ವರ್ಷ ಬಾಕಿ ಇದ್ದರು ಈಗಲೇ ವಿವಿಧ ಪಕ್ಷಗಳಲ್ಲಿ  ಟಿಕೆಟ್ ಪೈಪೋಟಿ ಆರಂಭವಾಗಿದೆ. ಇತ್ತ ಕಾಂಗ್ರೆಸ್‌ನಲ್ಲಿಯು ಟಿಕೆಟ್‌ಗಾಗಿ ಜಟಾಪಟಿ ಜೋರಾಗಿಯೇ ಇದೆ. ತೀರ್ಥಹಳ್ಳಿ ಕ್ಷೇತ್ರದ ಕಾಂಗ್ರೆಸ್‌ ಟಿಕೆಟ್‌ಗಾಗಿ ಇಬ್ಬರು ಪ್ರಭಾವಿ ಮುಖಂಡರ ನಡುವೆ ಜಿದ್ದಾ ಜಿದ್ದಿ ಏರ್ಪಟ್ಟಿದ್ದೆ. 
ಒಂದು ಕಡೆ ಜೆಡಿಎಸ್  ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿ ಆಕಾಂಕ್ಷಿಯಾಗಿರುವ ಮಂಜುನಾಥ್ ಗೌಡ  ಆದರೆ ಇನ್ನೊಂದು ಕಡೆ ಮಾಜಿ ಸಚಿವ ಕಿಮ್ಮನೆ ರತ್ನಾಕರ್  ನಡುವೆ ಮುಸುಕಿನ ಗುದ್ದಾಟ ಶುರುವಾಗಿದೆ. ಟಿಕೆಟ್‌ಗಾಗಿ ಈಗಲೇ ಇಬ್ಬರ ನಡುವೆ ಪೈಪೋಟಿ ಕಂಡು ಬಂದಿದ್ದು ಇದು ಕೆಪಿಸಿಸಿ ಮಟ್ಟಕ್ಕೂ ತಲುಪಿದೆ. 
ತೀರ್ಥಹಳ್ಳಿ ಕಾಂಗ್ರೆಸ್ ನಲ್ಲಿ ಕಿಮ್ಮನೆ ವರ್ಸಸ್ ಮಂಜುನಾಥ್ ಗೌಡ ಎನ್ನುವಂತಾಗಿದ್ದು, ಇದೀಗ ಕಿಮ್ಮನೆ ಹಾಗು ಮಂಜುನಾಥ್ ಗೌಡ ಬಣಗಳೆರಡು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿವೆ. 
ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಭೇಟಿ ಬಳಿಕ ಮಾತನಾಡಿದ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ತೀರ್ಥಹಳ್ಳಿ ಕಾಂಗ್ರೆಸ್ ನಲ್ಲಿ ಇರುವ ಭಿನ್ನಾಭಿಪ್ರಾಯಗಳನ್ನ ಪಕ್ಷದ ವೇದಿಕೆಯಲ್ಲಿ ಮಾತನಾಡುತ್ತೇನೆ ಎಂದು ಬಹಿರಂಗ ಹೇಳಿಕೆಯನ್ನೇ ನೀಡಿದ್ದಾರೆ. ಮಾಧ್ಯಮಗಳಲ್ಲಿ ಬಹಿರಂಗವಾಗಿ ಮಾತನಾಡಲ್ಲ. ಕಾಂಗ್ರೆಸ್ ನಲ್ಲಿ ಆಂತರಿಕ ಪ್ರಜಾಪ್ರಭುತ್ವ ಇದೆ. ನಮ್ಮ ಪಕ್ಷದಲ್ಲಿ ಅಭಿಪ್ರಾಯ ಹೇಳಲು ಅವಕಾಶವಿದೆ. ಬಿಜೆಪಿಯಲ್ಲಿ ಈ ರೀತಿಯ ಅವಕಾಶವಿಲ್ಲ. ಅಲ್ಲಿ ಮೋದಿ ಎದುರು ಸಂಸದರು ಮಾತನಾಡಲು ಹೇಳುತ್ತಾರೆ ಎಂದರು.
ಪಕ್ಷದಲ್ಲಿ ಭಿನ್ನಾಭಿಪ್ರಾಯಗಳು ಇರಬೇಕು. ಅದು ಪ್ರಜಾಪ್ರಭುತ್ವವನ್ನ ತೋರಿಸುತ್ತದೆ. ಅಭಿಪ್ರಾಯಗಳನ್ನ ಹತ್ತಿಕ್ಕುವ ಪ್ರಯತ್ನ ಮಾಡಬಾರದು. ಮುಂದಿನ ಚುನಾವಣೆಗೆ ತೀರ್ಥಹಳ್ಳಿ ಕಾಂಗ್ರೆಸ್ ಅಭ್ಯರ್ಥಿ ಯಾರು ಅನ್ನೋದನ್ನ ಜನರಿಗೆ ಈಗಲೇ ಹೇಳಲು ಸಾಧ್ಯವಿಲ್ಲ. ಯಾವ ಪಕ್ಷದವರಿಗೂ ಅಭ್ಯರ್ಥಿ ಬಗ್ಗೆ ಈಗಲೇ ಸ್ಪಷ್ಟವಾಗಿ ಹೇಳಲು ಸಾಧ್ಯವೇ..?ಪಕ್ಷದ ತೀರ್ಮಾನದಂತೆ ನಡೆದುಕೊಳ್ಳಬೇಕಾಗುತ್ತೆ. ನಾನು ಪಕ್ಷದ ಅಧ್ಯಕ್ಷರಿಗೆ ಪತ್ರ ಕಠೋರ ಶಬ್ದಗಳಲ್ಲಿ ಪತ್ರ ಬರೆದಿದ್ದು ಆಂತರಿಕವಾಗಿಯೇ.  ಪತ್ರವನ್ನ ಬಹಿರಂಗ ಪಡಿಸಿರುವುದು ನಾನಲ್ಲ. ನನಗೆ ನನ್ನ ಅಭಿಪ್ರಾಯ ತಿಳಿಸಲು ಅವಕಾಶವಿದೆ ಎಂದು ಮಂಜುನಾತ್ ಗೌಡ ಹಾಗು ತಮ್ಮ ನಡುವಿನ ಅಸಮಾಧಾನದ ಬಗ್ಗೆ ಸುಳಿವು ನೀಡಿದರು. 
2013ರ ಚುನಾವಣೆಯಲ್ಲಿ ಜೆಡಿಎಸ್‌ನಲ್ಲಿದ್ದ ಮಂಜುನಾಥ್ ಗೌಡ ವಿರುದ್ಧ 1300 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದ ಕಿಮ್ಮನೆ ಇದೀಗ ಮತ್ತೆ ಟಿಕೆಟ್ ಆಕಾಂಕ್ಷಿ ಎಂಬುದನ್ನು ಪರೋಕ್ಷವಾಗಿಯೇ ತಿಳಿಸಿದ್ದಾರೆ. 
ಸಹಕಾರಿ ಧುರೀಣ, ರಾಜ್ಯ ಅಪೆಕ್ಸ್‌ ಬ್ಯಾಂಕ್‌ ಮಾಜಿ ಅಧ್ಯಕ್ಷ, ಡಿಸಿಸಿ ಬ್ಯಾಂಕ್‌ ಮಾಜಿ ಅಧ್ಯಕ್ಷ ಹಾಗೂ ಜಿಲ್ಲಾ ಜೆಡಿಎಸ್‌ ಅಧ್ಯಕ್ಷರಾಗಿದ್ದ  ಮಂಜುನಾಥ್ ಗೌಡ ಕಳೆದ ಏಪ್ರಿಲ್ ತಿಂಗಳಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಿದ್ದು, ಇವರೂ ತೀರ್ಥಹಳ್ಳಿ ಕ್ಷೇತ್ರದಿಂದ ಕಾಂಗ್ರೆಟ್ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.  

Leave a Reply

Your email address will not be published. Required fields are marked *