ಶಿವಮೊಗ್ಗ: ತೀರ್ಥಹಳ್ಳಿಯಲ್ಲಿ ನಡೆದ ಎಲ್ಲಾ ಕೋಮುಗಲಭೆಯ ಹಿಂದೆ ಆರಗ ಜ್ಞಾನೇಂದ್ರರ ಪಾತ್ರ ಇದೆ ಎಂದು ಮಾಜಿ ಸಚಿವ, ಕೆಪಿಸಿಸಿ ವಕ್ತಾರ ಕಿಮ್ಮನೆ ರತ್ನಾಕರ್ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಟ್ಕಾಯಿನ್ ವಿಷಯದಲ್ಲಿ ಗೃಹ ಸಚಿವರು ಬಾಲಿಷವಾಗಿ ಮಾತನಾಡುತ್ತಿದ್ದಾರೆ. ಪ್ರಿಯಾಂಕ್ ಖರ್ಗೆ ಬಗ್ಗೆ ಲಘುವಾಗಿ ಹೇಳಿಕೆ ನೀಡುತ್ತಿದ್ದಾರೆ. ಬಿಟ್ಕಾಯಿನ್ ವಿಷಯದ ಗಂಭೀರತೆ ಅರಿತು ಪ್ರಧಾನಿ ಮೋದಿ ರಾತ್ರೋರಾತ್ರಿ ತರಾತುರಿಯಲ್ಲಿ ಸಭೆ ನಡೆಸಿದ್ದಾರೆ. ಸದ್ಯದ ಮಟ್ಟಿಗೆ ಆರಗ ಜ್ಞಾನೇಂದ್ರ ರಾಜ್ಯಕ್ಕಲ್ಲ, ತೀರ್ಥಹಳ್ಳಿಗೆ ಗೃಹ ಸಚಿವರಾಗಿದ್ದಾರೆ. ತೀರ್ಥಹಳ್ಳಿಯಲ್ಲಿ ನಡೆದ ಎಲ್ಲಾ ಕೋಮುಗಲಭೆಯ ಹಿಂದೆ ಅವರ ಪಾತ್ರವಿದೆ. ಆದರೆ, ದುರಂತ ಎಂದರೆ ಇಂದು ಅವರೇ ಗೃಹ ಸಚಿವರಾಗಿದ್ದಾರೆ. ಕೋಮುಗಲಭೆ ಮೂಲಕ ಅಧಿಕಾರಕ್ಕೆ ಬಂದಿದ್ದಾರೆ ಎಂದು ಗಂಭೀರವಾಗಿ ಆರೋಪಿಸಿದರು.
ಇನ್ನು ಇತ್ತೀಚೆಗಿನ ರಾಜಕೀಯ ಬೆಳವಣಿಗೆಯಲ್ಲಿ ಜೆಡಿಎಸ್ನ ಹಲವರು ಕಾಂಗ್ರೆಸ್ ಸೇರಿದ್ದಾರೆ. ಜೊತೆಗೆ ಕಾಂಗ್ರೆಸ್ ಬೆಂಬಲಿತ ಸದಸ್ಯರು ಈ ಬಾರಿಯ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಗೆದ್ದಿದ್ದಾರೆ. ಎಲ್ಲೆಡೆ ಕಾಂಗ್ರೆಸ್ ಗೆಲುವಿಗೆ ಪೂರಕವಾದ ವಾತಾವರಣ ಕಂಡುಬರುತ್ತಿದೆ.
ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ಮೂರು ಕಾಯ್ದೆಗಳನ್ನು ವರ್ಷದ ನಂತರ ವಾಪಸ್ ಪಡೆದಿದ್ದಾರೆ. ಒಂದು ವರ್ಷದ ನಂತರ ಪ್ರಧಾನಿಗೆ ಅರಿವಾಯಿತೆ? ಮೊದಲೆ ಅರ್ಥ ಮಾಡಿಕೊಂಡಿದ್ದರೆ ಈ ಪ್ರಸಂಗ ಬರುತ್ತಿತ್ತಾ. ಹೋರಾಟದಲ್ಲಿ ಮೃತಪಟ್ಟವರ ಕುಟುಂಬಕ್ಕೆ ತಲಾ 25 ಲಕ್ಷ ರೂ. ಪರಿಹಾರ ಕೊಡಬೇಕು. ಬಿಜೆಪಿ ಜಾತಿ, ಧರ್ಮ, ಹಣದ ಆಧಾರದ ಮೇಲೆ ಚುನಾವಣೆ ನಡೆಸುತ್ತಿದೆ. ಜನರು ನೆರೆ ಹಾವಳಿಯಿಂದ ತೊಂದರೆ ಅನುಭವಿಸುತ್ತಿದ್ದರೆ, ಬಿಜೆಪಿಯವರು ಚುನಾವಣೆ ಕಡೆಗೆ ಗಮನ ಹರಿಸುತ್ತಿದ್ದಾರೆ ಎಂದು ಕಿಡಿಕಾರಿದರು.
“”ಗಾಂಧಿ-ನೆಹರು ವಿರುದ್ಧವಾಗಿ ಪುಸ್ತಕ ಬರೆಯುವವರ ವೈಯಕ್ತಿಕ ಬದುಕು ಕುಲಗೆಟ್ಟು ಹೋಗಿದೆ”” :: ಕಿಮ್ಮನೆ
ಗಾಂಧಿ ಹಾಗೂ ನೆಹರು ವಿರುದ್ಧವಾಗಿ ಪುಸ್ತಕ ಬರೆಯುವವರ ವೈಯಕ್ತಿಕ ಬದುಕು ಕುಲಗೆಟ್ಟು ಹೋಗಿದೆ ಎಂದು ಕೆಪಿಸಿಸಿ ವಕ್ತಾರ ಕಿಮ್ಮನೆ ರತ್ನಾಕರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಾಂಧಿ ಹಾಗೂ ನೆಹರು ವಿರುದ್ಧವಾಗಿ ಕೆಲವರು ಪುಸ್ತಕ ಬರೆಯುತ್ತಾರೆ. ಹೀಗೆ, ಪುಸ್ತಕ ಬರೆಯುವವರ ವೈಯಕ್ತಿಕ ಬದುಕು ಕುಲಗೆಟ್ಟು ಹೋಗಿದೆ. ಇವರು ತಮ್ಮ ಮಕ್ಕಳಿಗೆಯೇ ಮಾದರಿ ಆಗಲು ಸಾಧ್ಯವಿಲ್ಲ ಎಂದು ಕಿಡಿಕಾರಿದರು.
ಚಕ್ರವರ್ತಿ ಸೂಲಿಬೆಲೆ ಪ್ರಧಾನಿ ನರೇಂದ್ರ ಮೋದಿ ಚಿನ್ನದ ರಸ್ತೆ ಮಾಡುತ್ತಾರೆ. ದೇಶದ ಸಾಲ ತೀರಿಸಿದ್ದಾರೆ ಎನ್ನುತ್ತಿದ್ದಾರೆ. ಆದರೆ, ಸಾಲ ಮಾಡಿ ದೇಶಬಿಟ್ಟು ಓಡಿ ಹೋದವರು ಯಾರೂ ವಾಪಸ್ ಬಂದಿಲ್ಲ ಎಂದು ವ್ಯಂಗ್ಯವಾಡಿದರು.